ಹಿಂದಿ ಹೇರಿಕೆ ಎಂಬ ದೊಡ್ಡ ಹುನ್ನಾರ: ಇದು ಬರೀ ಭಾಷೆಯ ವಿಷಯ ಅಲ್ಲ, ಭವಿಷ್ಯದ ವಿಷಯ

| Updated By: Digi Tech Desk

Updated on: Apr 28, 2022 | 4:32 PM

‘ಹಿಂದಿ ರಾಷ್ಟ್ರ ಭಾಷೆ ಅಲ್ಲ’ ಎಂದು ದಕ್ಷಿಣದ ರಾಜ್ಯಗಳ ಜನರು ಕೂಗಿ ಹೇಳುತ್ತಿದ್ದಾರೆ. ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಬಿಂಬಿಸುವುದರ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ.

ಹಿಂದಿ ಹೇರಿಕೆ ಎಂಬ ದೊಡ್ಡ ಹುನ್ನಾರ: ಇದು ಬರೀ ಭಾಷೆಯ ವಿಷಯ ಅಲ್ಲ, ಭವಿಷ್ಯದ ವಿಷಯ
ಕಿಚ್ಚ ಸುದೀಪ್​, ಅಜಯ್​ ದೇವಗನ್​, ಕವಿರಾಜ್​
Follow us on

ನಟ ಕಿಚ್ಚ ಸುದೀಪ್​ (Kichcha Sudeep) ಅವರು ‘ಹಿಂದಿ ರಾಷ್ಟ್ರ ಭಾಷೆ ಅಲ್ಲ’ ಎಂದಿದ್ದಕ್ಕೆ ಬಾಲಿವುಡ್​ ನಟ ಅಜಯ್​ ದೇವಗನ್​ ಅವರು ಪ್ರತಿಕ್ರಿಯೆ ನೀಡಿದರು. ‘ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವುದಾದರೆ ನಿಮ್ಮ ಮಾತೃಭಾಷೆಯ ಸಿನಿಮಾವನ್ನು ಹಿಂದಿಗೆ ಯಾಕೆ ಡಬ್​ ಮಾಡಿ ರಿಲೀಸ್​ ಮಾಡಿತ್ತೀರಿ’ ಎಂದು ಅಜಯ್​ ದೇವಗನ್​ (Ajay Devgn) ಕೇಳಿದ ಪ್ರಶ್ನೆ ಎಷ್ಟು ಅಸಂಬದ್ಧ ಎಂದರೆ ಅದನ್ನು ವಿವರಿಸಲು ಪದಗಳೇ ಇಲ್ಲ. ನಾವು ಹಿಂದಿಗೆ ಮಾತ್ರ ಡಬ್​ ಮಾಡುತ್ತಿಲ್ಲ. ತೆಲುಗು, ತಮಿಳು ಮುಂತಾದ ಭಾಷೆಗೂ ಡಬ್​ ಮಾಡುತ್ತಿದ್ದೇವೆ. ಒಂದು ಸಿನಿಮಾವನ್ನು ಹಿಂದಿಗೆ ಡಬ್​ ಮಾಡುವುದೇ ಬೇರೆ, ರಾಷ್ಟ್ರ ಭಾಷೆ  (National Language) ಹೌದೋ ಅಲ್ಲವೋ ಎನ್ನುವ ಚರ್ಚೆಯೇ ಬೇರೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಗುಜರಾತ್​ ಹೈಕೋರ್ಟ್​ ಈ ಮೊದಲೇ ತೀರ್ಪು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆಡಳಿತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್​ ಇದೆ. ಹಿಂದಿಯೇ ಇಡೀ ದೇಶದ ಜನರ ನಡುವಿನ ಸಂವಹನ ಭಾಷೆಯಲ್ಲ.

ಹಿಂದಿ ಹೇರಿಕೆಯಲ್ಲಿ ಕಾರ್ಪೊರೇಟ್​ ಕೈವಾಡ:
ದೇಶದ ಏಕತೆಗೆ ಹಿಂದಿ ಬೇಕು ಎಂಬ ವಾದ ಇದೆ. ಆದರೆ ಅದರ ಹಿಂದೆ ಕಾರ್ಪೊರೇಟ್​ ಹುನ್ನಾರ ಇದೆ. ಹಿಂದಿಯನ್ನು ಇಡೀ ದೇಶದ ಭಾಷೆ ಎಂದು ಬಿಂಬಿಸಿದರೆ ಜಾಹೀರಾತು ಕ್ಷೇತ್ರಕ್ಕೆ ಬಹಳ ಲಾಭ ಆಗುತ್ತದೆ. ಒಬ್ಬ ಹಿಂದಿ ನಟನಿಗೆ ಸಂಭಾವನೆ ನೀಡಿ ಹಿಂದಿಯಲ್ಲಿ ಜಾಹೀರಾತು ಮಾಡಿಸಿದರೆ ಇಡೀ ದೇಶಕ್ಕೆ ಅನ್ವಯ ಆಗುತ್ತದೆ. ಉತ್ಪನ್ನಗಳ ಮೇಲೆ ಆಯಾ ಪ್ರದೇಶಗಳ ಭಾಷೆಗಳಲ್ಲಿ ಮಾಹಿತಿ ಮುದ್ರಿಸುವ ಬದಲು ಕೇವಲ ಹಿಂದಿಯಲ್ಲಿ ಮುದ್ರಿಸಿ ಕೈ ತೊಳೆದುಕೊಳ್ಳಬಹುದು. 100 ಕೋಟಿ ಜನರ ಮಾರುಕಟ್ಟೆಯನ್ನು ಒಂದೇ ಭಾಷೆಯ ಹಿಡಿತಕ್ಕೆ ತರಬೇಕು ಎಂಬ ಹುನ್ನಾರವೇ ‘ಹಿಂದಿ ರಾಷ್ಟ್ರ ಭಾಷೆ’ ಎಂಬ ವಾದದ ಹಿಂದೆ ಹೆಚ್ಚು ಕೆಲಸ ಮಾಡಿದ್ದು.

ಈಗಾಗಲೇ ಇರುವ ಏಕತೆಯನ್ನು ಭಾಷೆಯ ಹೆಸರಲ್ಲಿ ಒಡೆಯಲಾಗುತ್ತಿದೆ:
ಭಾರತದಂತಹ ದೇಶಕ್ಕೆ ಯಾವುದೇ ಒಂದು ರಾಷ್ಟ್ರ ಭಾಷೆ ಇರಲು ಸಾಧ್ಯವಿಲ್ಲ. ಇಲ್ಲಿರುವ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ. ಈ ದೇಶ ಇರುವುದೇ ಭಾಷಾ ವೈವಿಧ್ಯತೆಯ ಆಧಾರದ ಮೇಲೆ. ನಮ್ಮ ದೇಶದ ಒಗ್ಗಟ್ಟು ಬಹಳ ಚೆನ್ನಾಗಿದೆ. ಏಕತೆ ತರಬೇಕು ಎಂಬ ಉದ್ದೇಶದಿಂದ ಹಿಂದಿಯನ್ನು ಹೇರಲು ಉತ್ತರ ಭಾರತದವರು ಪ್ರಯತ್ನಿಸುತ್ತಿರುವುದೇ ಏಕತೆಯನ್ನು ಒಡೆಯಲು ಕಾರಣ ಆಗುತ್ತಿದೆ. ನಮ್ಮಲ್ಲಿ ಎಷ್ಟೇ ಭಾಷೆಗಳು ಇದ್ದರೂ ಕೂಡ ನಾವೆಲ್ಲ ಒಂದೇ ಆಗಿದ್ದೆವು.

ನಮ್ಮ ನಮ್ಮ ಭಾಷೆಯ ಜೊತೆಗೆ ನಾವು ಹುಟ್ಟಿನಿಂದಲೂ ಕನೆಕ್ಟ್​ ಆಗಿರುತ್ತೇವೆ. ಅದರಲ್ಲೂ ದಕ್ಷಿಣ ಭಾರತದವರಿಗೆ ಈ ಸೆಂಟಿಮೆಂಟ್​ ಜಾಸ್ತಿ. ಇಂಥ ನಮ್ಮ ಭಾಷೆಯ ಮೇಲೆ ಉತ್ತರದವರು ತಮ್ಮ ಭಾಷೆಯನ್ನು ತಂದು ಹೇರಿದರೆ ಅದು ಖಂಡಿತವಾಗಿಯೂ ದೇಶದ ಒಗ್ಗಟ್ಟನ್ನು ಒಡೆದು ಹಾಕುತ್ತದೆ. ಈಗ ಎಲ್ಲೋ ಒಂದು ಕಡೆ ಸಣ್ಣದಾಗಿ ಶುರುವಾದರೂ ಮುಂದೆ ಭಾರತದ ಒಗ್ಗಟ್ಟಿಗೆ ಮಾರಕ ಆಗುತ್ತದೆ. ಹಾಗಾಗಿ ಭಾಷೆಯ ವಿಚಾರದಲ್ಲಿ ನಾವು ಮಾತನಾಡುವಾಗ ಬಹಳ ಸೂಕ್ಷ್ಮವಾಗಿ ವರ್ತಿಸಬೇಕು.

ಇದು ಪ್ರಜ್ಞಾಪೂರ್ವಕವಾಗಿ ತುಂಬಿದ ಅಜ್ಞಾನ:
ಅಜಯ್​ ದೇವಗನ್​ ಅವರು ‘ಹಿಂದಿಯೇ ನಮ್ಮ ರಾಷ್ಟ್ರ ಭಾಷೆ’ ಎಂದು ಹೇಳಿಕೆ ನೀಡಿದ್ದಾರೆ ಎಂದರೆ ಅದು ಅವರ ಅಜ್ಞಾನದ ಪ್ರದರ್ಶನ. ಅದೇ ಅಜ್ಞಾನವನ್ನು ನಮ್ಮ ದಕ್ಷಿಣ ಭಾರತದ ಜನರ ತಲೆಯಲ್ಲೂ ಹಲವು ವರ್ಷಗಳ ಮೊದಲೇ ತುಂಬಲಾಗಿತ್ತು. ನಾವೆಲ್ಲರೂ ಕೂಡ ಶಾಲೆಯಲ್ಲಿ ಓದುವಾಗ ‘ಹಿಂದಿ ನಮ್ಮ ರಾಷ್ಟ್ರ ಭಾಷೆ’ ಎಂದು ಹೇಳಿಕೊಡಲಾಗಿತ್ತು. ಪಠ್ಯ ಪುಸ್ತಕದಲ್ಲೇ ಇಂಥ ಸುಳ್ಳನ್ನು ಅಧಿಕೃತವಾಗಿ ಸೇರಿಸಲಾಗಿತ್ತು ಎಂದರೆ ಇದು ಸಾಮಾನ್ಯವಾದ ಹುನ್ನಾರ ಅಲ್ಲ. ಆ ಬಗ್ಗೆ ನಮಗೆ ಅರಿವು ಬರಬೇಕು. ನಮ್ಮಲ್ಲಿ ಈಗಾಗಲೇ ರಾಷ್ಟ್ರ ಭಕ್ತಿಯ ಗುಣ ಇದೆ. ಹುಸಿ ದೇಶಭಕ್ತಿಯನ್ನು ಹೇರಿಕೆ ಮಾಡುವ ಅಗತ್ಯ ಇಲ್ಲ.

ಹಿಂದಿ ಸಿನಿಮಾ ಮಾತ್ರವೇ ಇಂಡಿಯನ್​ ಸಿನಿಮಾ ಅಲ್ಲ:
ಸಾಮಾನ್ಯವಾಗಿ ಹಿಂದಿ ಸಿನಿಮಾವನ್ನು ಇಂಡಿಯನ್​ ಸಿನಿಮಾ ಅಂತಾರೆ. ಇನ್ನುಳಿದ ಭಾಷೆಗಳ ಸಿನಿಮಾವನ್ನು ಪ್ರಾದೇಶಿಕ ಸಿನಿಮಾ ಎಂದು ಕರೆಯುವ ಪದ್ಧತಿ ಇದೆ. ಅದು ತಪ್ಪು. ನಾವೆಲ್ಲರೂ ಭಾರತೀಯರೇ. ಕನ್ನಡ, ತಮಿಳು, ಮಲಯಾಳಂ ಅಥವಾ ತೆಲುಗು ಸಿನಿಮಾಗಳು ಕೂಡ ಭಾರತೀಯ ಸಿನಿಮಾಗಳೇ ಅಲ್ಲವೇ? ಉತ್ತರ ಭಾರತದವರಿಗೆ ತಾವೇ ಶ್ರೇಷ್ಠ ಎಂಬ ಭಾವನೆ ಇದೆ.

ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಿಂದಿ ಮಾತನಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಅದು ಕೂಡ ನಿಜವಲ್ಲ. ಉತ್ತರ ಭಾರತದಲ್ಲಿಯೂ ಕೂಡ ಹಿಂದಿಯನ್ನು ಬಿಟ್ಟು ಅನೇಕ ಬೇರೆ ಬೇರೆ ಭಾಷೆಗಳಿವೆ. ಬಿಹಾರಿ, ಭೋಜ್​ಪುರಿ, ಗುಜರಾತಿ, ರಾಜಸ್ಥಾನಿ, ಮೈಥಿಲಿ, ಈಶಾನ್ಯ ರಾಜ್ಯಗಳ ಭಾಷೆಗಳು ಇವೆ. ಆ ಭಾಷೆಗಳನ್ನು ನಿಧಾನವಾಗಿ ಸಾಯಿಸಿಕೊಂಡು ಬಂದು, ಅವರನ್ನು ಕೂಡ ಹಿಂದಿ ಭಾಷಿಕರು ಅಂತ ಬಿಂಬಿಸಲಾಗುತ್ತದೆ. ಹಿಂದಿಯ ಪ್ರಭಾವ ಮತ್ತು ಹೇರಿಕೆಯಿಂದಾಗಿ ಉತ್ತರದ ಅನೇಕ ರಾಜ್ಯಗಳು ತಮ್ಮ ಭಾಷೆಯನ್ನು ಕಳೆದುಕೊಂಡಿವೆ. ಈಗ ದಕ್ಷಿಣದ ಮೇಲೆ ಹಿಂದಿ ಹೇರಿಕೆ ಪ್ರಯತ್ನ ನಡೆಯುತ್ತಿದೆ.

ಭಾಷೆಗಳಲ್ಲಿ ಶ್ರೇಷ್ಠ ಅಥವಾ ಕನಿಷ್ಠ ಎಂಬುದಿಲ್ಲ:
ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಕರೆದು, ದಕ್ಷಿಣದ ಭಾಷೆಗಳನ್ನು ಪ್ರಾದೇಶಿಕ ಭಾಷೆ ಅಂತ ಕರೆದರೆ ನಾವು ಈ ದೇಶದಲ್ಲಿ ಎರಡನೇ ದರ್ಜೆಯವರಾಗಿ ಇರಬೇಕಾ? ಭಾಷೆಗಳಲ್ಲಿ ಶ್ರೇಷ್ಠ ಅಥವಾ ಕನಿಷ್ಠ ಎಂಬುದಿಲ್ಲ. ಆಯಾ ರಾಜ್ಯಗಳ ಭಾಷೆಯನ್ನು ಆಯಾ ರಾಜ್ಯಗಳಲ್ಲಿ ಇಟ್ಟುಕೊಂಡು, ಬೇರೆ ರಾಜ್ಯಗಳ ಜೊತೆಗಿನ ಸಂವಹನಕ್ಕೆ ಇಂಗ್ಲಿಷನ್ನು​ ಇಟ್ಟುಕೊಳ್ಳಬಹುದು. ಈ ದ್ವಿಭಾಷೆಯ ಪಾಲಿಸಿ ಸೂಕ್ತವಾಗುತ್ತದೆ. ಮೂರನೇ ಭಾಷೆ ಹಿಂದಿ ಎಂದು ಹೇರಿಕೆ ಮಾಡಲು ಬಂದರೆ ಅದರಿಂದ ದೇಶದ ಏಕತೆಗೆ ಧಕ್ಕೆ ಆಗುತ್ತದೆ.

ಒಂದು ದೇಶ-ಒಂದು ಭಾಷೆ ಎಂಬುದೇ ತಪ್ಪು:
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳು ರಚನೆ ಆಗಿರುವುದೇ ಅವುಗಳ ಭಾಷೆಯ ಆಧಾರದ ಮೇಲೆ. ದೇಶದಲ್ಲಿ ಇಂಗ್ಲಿಷ್​ಗೆ ಬದಲಾಗಿ ಹಿಂದಿ ಬಳಸೋಣ ಎಂದು ಇತ್ತೀಚೆಗೆ ಅಮಿತ್ ಶಾ ಹೇಳಿದ್ದು ಮೂರ್ಖತನದ ಹೇಳಿಕೆ. ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ರೇಷನ್​ ಕಾರ್ಡ್​, ಒಂದು ದೇಶ ಒಂದು ಚುನಾವಣೆ.. ಈ ರೀತಿಯ ಯೋಜನೆಗಳು ಕೂಡ ಸರಿಯಲ್ಲ. ಅಧಿಕಾರವನ್ನು ಕೇಂದ್ರೀಕರಣ ಮಾಡಿಕೊಳ್ಳುವಂತಹ ಹುನ್ನಾರ ಇದು. ಪ್ರತಿ ರಾಜ್ಯಗಳ ಅಧಿಕಾರವನ್ನು ಕೇಂದ್ರವೇ ಕಸಿದುಕೊಳ್ಳುವ ಉದ್ದೇಶ ಇದರಲ್ಲಿ ಅಡಗಿದೆ. ಅಧಿಕಾರವೇ ಇಲ್ಲದೇ ಕೇವಲ ರಾಜ್ಯವಾಗಿ ಉಳಿದುಕೊಂಡರೆ ಪ್ರಯೋಜನವೇನು?

ಪ್ರಮುಖ ಹುದ್ದೆಗಳ ಪರೀಕ್ಷೆಯನ್ನು ನಾವು ನಮ್ಮ ಮಾತೃಭಾಷೆಯಲ್ಲಿ ಬರೆಯಲು ಸಾಧ್ಯವಾಗುತ್ತಿಲ್ಲ. ಆದರೆ ಹಿಂದಿಯವರು ಬಾಲ್ಯದಿಂದ ಸುಲಭವಾಗಿ ಕಲಿತ ತಮ್ಮ ಭಾಷೆಯಲ್ಲಿ ಪರೀಕ್ಷೆ ಬರೆದು ರೈಲ್ವೇ, ಬ್ಯಾಂಕಿಂಗ್​ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಪಡೆಯುತ್ತಾರೆ. ಇದು ತಾರತಮ್ಯ ಅಲ್ಲವೇ? ದಕ್ಷಿಣ ಭಾರತದ ರಾಜ್ಯಗಳಿಂದ ಹೆಚ್ಚು ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಹಾಗಿದ್ದರೂ ನಮಗೆ ತಾರತಮ್ಯ ಯಾಕೆ? ನಿಮ್ಮ ಅವಕಾಶವನ್ನು ನಮಗೆ ಕೊಡಿ, ನಿಮ್ಮ ಆದಾಯವನ್ನು ನಮಗೆ ಕೊಡಿ, ನಮ್ಮಿಂದ ನೀವು ಆಳ್ವಿಕೆ ಮಾಡಿಸಿಕೊಳ್ಳಿ ಎಂದು ಉತ್ತರ ಭಾರತದವರು ದಕ್ಷಿಣ ಭಾರತದವರಿಗೆ ನೇರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಅವರು ಭಾಷೆಯ ಹೆಸರಿನಲ್ಲಿ ಹಿಂಬಾಗಿಲಿನಿಂದ ಬಂದು ಅದನ್ನು ಸಾಧಿಸಿಲು ಪ್ರಯತ್ನಿಸುತ್ತಾರೆ. ಹಾಗಾಗಿ ರಾಷ್ಟ್ರ ಭಾಷೆ ಎಂದರೆ ಅದು ಕೇವಲ ಭಾಷೆಯ ವಿಷಯ ಅಲ್ಲ, ಭವಿಷ್ಯದ ವಿಷಯ.

ಹೇರಿಕೆಯೇ ಬೇರೆ, ಬಳಕೆಯೇ ಬೇರೆ:
ದಕ್ಷಿಣ ಭಾರತದ ಯಾರೂ ಸಹ ಇಲ್ಲಿ ಹಿಂದಿಯನ್ನು ವಿರೋಧಿಸುತ್ತಿಲ್ಲ. ವಿರೋಧ ಏನಿದ್ದರೂ ಹಿಂದಿ ಹೇರಿಕೆಗೆ ಮಾತ್ರ. ಹಿಂದಿಯನ್ನ ನಾವು ಕೂಡ ಇಷ್ಟಪಡುತ್ತೇವೆ. ಹಿಂದಿ ಸಿನಿಮಾಗಳನ್ನು ನೋಡಿ ಎಂಜಾಯ್​ ಮಾಡುತ್ತೇವೆ. ಹಿಂದಿ ಹಾಡುಗಳು ನಮ್ಮ ಜೀವನದ ಭಾಗವೇ ಆಗಿವೆ. ಹಿಂದಿ ಭಾಷಿಕರು ಕೂಡ ನಮ್ಮ ನಡುವೆಯೇ ಬೆರೆತು ಹೋಗಿದ್ದಾರೆ. ಅಷ್ಟರಮಟ್ಟಿಗೆ ಎಲ್ಲವೂ ಚೆನ್ನಾಗಿದೆ. ಆಯ್ಕೆ ನಮ್ಮದೇ ಆಗಿದ್ದಾಗ ಏನೂ ತೊಂದರೆ ಇಲ್ಲ. ಆದರೆ ಹಿಂದಿ ಹೇರಿಕೆ ಮಾಡಿದಾಗ ದಕ್ಷಿಣದ ಜನರಲ್ಲಿ ವಿರೋಧದ ಭಾವ ಮೂಡುತ್ತದೆ. ಆಗ ಹಿಂದಿಗೆ ಸಂಬಂಧಿಸಿದ ಎಲ್ಲವನ್ನೂ ವಿರೋಧಿಸುವ ಪರಿಸ್ಥಿತಿ ಬರುತ್ತದೆ. ಎಲ್ಲ ಮನುಷ್ಯನಲ್ಲೂ ಪ್ರತಿರೋಧದ ಗುಣ ಇದ್ದೇ ಇರುತ್ತದೆ.

ದಕ್ಷಿಣದ ರಾಜ್ಯಗಳಿಗೆ ಅವುಗಳದ್ದೇ ಆದ ಸಂಸ್ಕೃತಿ ಇದೆ. ಮಾತು, ಬರಹ, ಶಿಕ್ಷಣ, ಕಲೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ನಮ್ಮದೇ ಆದಂತಹ ಛಾಪು ಇದೆ. ಅದನ್ನು ಉಳಿಸಿಕೊಂಡು ಮುಂದುವರಿಯಲು ನಮಗೆ ಅವಕಾಶ ಬೇಕು. ಅದರ ಜೊತೆಗೆ ನಾವೆಲ್ಲರೂ ಒಂದಾಗಿ ಇರೋಣ. ನಮ್ಮತನವನ್ನೆಲ್ಲಾ ಕಳಚಿಕೊಂಡು, ನಾವು ಬಂದು ನಿಮ್ಮೊಂದಿಗೆ ಒಂದಾಗಲು ಸಾಧ್ಯವಿಲ್ಲ. ಅದು ಏಕತೆ ಅಲ್ಲ. ಅದಕ್ಕೆ ನಾವು ಸಿದ್ಧರಿಲ್ಲ. ಯಾವ ಭಾಷೆ ಮೇಲೆ ಯಾರೂ ಕೂಡ ಆಕ್ರಮಣ ಮಾಡಬಾರದು. ಆ ವೈವಿಧ್ಯತೆಯನ್ನು ಉಳಿಸಿಕೊಂಡು, ಭಾರತದ ವಿಷಯ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ. ಲತಾ ಮಂಗೇಶ್ಕರ್, ಸಚಿನ್​ ತೆಂಡೂಲ್ಕರ್​, ಅಮಿತಾಭ್​ ಬಚ್ಚನ್​ ಅವರನ್ನು ಇಡೀ ದೇಶವೇ ನಮ್ಮವರು ಎಂದು ಹೇಳುತ್ತದೆ. ಇಷ್ಟು ವರ್ಷಗಳ ಕಾಲ ನಮ್ಮ ನಡುವೆ ಇರುವ ಏಕತೆಯನ್ನು ರಾಷ್ಟ್ರ ಭಾಷೆಯ ಹೆಸರಿನಲ್ಲಿ ಒಡೆಯುವುದು ಸರಿಯಲ್ಲ.

(ಲೇಖಕರ ಕುರಿತು: ಕವಿರಾಜ್​ ಅವರು 2003ರಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಗೀತರಚನಕಾರರಾಗಿ ಪ್ರಸಿದ್ಧರಾಗಿದ್ದಾರೆ. ಸಾವಿರಾರು ಹಾಡುಗಳನ್ನು ಬರೆದು ಕನ್ನಡಿಗರ ಮನ ಗೆದ್ದಿದ್ದಾರೆ. ‘ಮದುವೆಯ ಮಮತೆಯ ಕರೆಯೋಲೆ’, ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ)

ಇದನ್ನೂ ಓದಿ:

ಹಿಂದಿ ವಿವಾದ: ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..

ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ; ಹಿಂದಿ ಬಗ್ಗೆ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿ ಸಿಎಂ ಬೊಮ್ಮಾಯಿ

Published On - 4:31 pm, Thu, 28 April 22