
‘ಮ್ಯಾರೇಜ್ ಪಾರ್ಟಿ’ ಸಿನಿಮಾ ಘೋಷಣೆ ಆದಾಗಿನಿಂದಲೂ ನಿರೀಕ್ಷೆ ಮೂಡಿಸಿತ್ತು. ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ, ‘ಶ್ರೀ ವಾರಾಹಿ ಫಿಲ್ಮ್ಸ್’ ಸಂಸ್ಥೆಯ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ನಿರ್ಮಾಪಕ ಸಂತೋಷ್ ವಿ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 4ರಂದು ‘ಮ್ಯಾರೇಜ್ ಪಾರ್ಟಿ’ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈಗ ಟ್ರೇಲರ್ ಮೂಲಕ ಗಮನ ಸೆಳೆಯುತ್ತಿದೆ.
ಈ ಮೊದಲು ಎರಡು ಹಾಡುಗಳ ಮೂಲಕ ‘ಮ್ಯಾರೇಜ್ ಪಾರ್ಟಿ’ ಸಿನಿಮಾ ಸದ್ದು ಮಾಡಿತ್ತು. ಬಿಡುಗಡೆಯ ಕ್ಷಣಗಳು ಹತ್ತಿರಾಗುತ್ತಿರುವ ಈ ಹೊತ್ತಿನಲ್ಲಿ ಚಿತ್ರತಂಡವು ಆಕರ್ಷಕ ಟ್ರೇಲರ್ ಅನಾವರಣ ಮಾಡಿದೆ. ಈ ಮೂಲಕ ‘ಮ್ಯಾರೇಜ್ ಪಾರ್ಟಿ’ ಒಳಗೆ ಕಥೆ ಯಾವ ರೀತಿ ಇರಲಿದೆ ಎಂಬುದರ ಝಲಕ್ ತೋರಿಸಿದೆ. ಟ್ರೇಲರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ನಿರ್ದೇಶಕ ಚಯನ್ ಶೆಟ್ಟಿ ಅವರು ಈ ಹಿಂದೆ ‘ಅಧಿಪತ್ರ’ ಸಿನಿಮಾದ ಮೂಲಕ ಗಮನ ಸೆಳೆದಿದ್ದರು. ಈಗ ‘ಮ್ಯಾರೇಜ್ ಪಾರ್ಟಿ’ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ಗಟ್ಟಿ ಕಥೆ ಇದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಟ್ರೇಲರ್ ನೋಡಿದ ಅನೇಕರಿಗೆ ‘ಸು ಫ್ರಂ ಸೋ’ ಸಿನಿಮಾ ನೆನಪಾಗುತ್ತಿದೆ. ಅದು ಚಿತ್ರತಂಡಕ್ಕೆ ಪ್ಲಸ್ ಆಗುತ್ತಿದೆ.
ಕರಾವಳಿ ಭಾಗದ ಕಥೆಗಳಿಗೆ ವಿಶೇಷ ಪ್ರೇಕ್ಷಕವರ್ಗವಿದೆ. ಸಾಮಾನ್ಯವಾಗಿ ಕಡಲ ಕಿನಾರೆಯಲ್ಲಿ ಘಟಿಸುವ ಕಥೆಗಳು ಕುತೂಹಲ ಮೂಡಿಸುತ್ತವೆ. ಅದೇ ರೀತಿ ‘ಮ್ಯಾರೇಜ್ ಪಾರ್ಟಿ’ ಚಿತ್ರದಲ್ಲಿ ಕರಾವಳಿ ಸೀಮೆಯ ಒಡಲಿನಲ್ಲಿರುವ ಮತ್ತೊಂದು ರೋಚಕ ಕಥನವಿದೆ ಎಂಬ ವಿಚಾರವೂ ಟ್ರೇಲರ್ ಮೂಲಕವೇ ಜಾಹೀರಾಗಿದೆ. ಕನ್ನಡ ಮಾತ್ರವಲ್ಲದೇ ಮಲಯಾಳಂ ಭಾಷೆಯಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ‘ಮ್ಯಾರೇಜ್ ಪಾರ್ಟಿ’ ಸಿನಿಮಾದಿಂದ ಬಂತು ಮೋಜು ಮಸ್ತಿಯ ‘ಗಲಾಟೆ’ ಹಾಡು
ಸಾಮಾನ್ಯವಾಗಿ ಜಾರಿಯಲ್ಲಿರುವ ವಿಚಿತ್ರ ನಂಬಿಕೆಗಳು, ಒಂದು ಸಾವು, ದೆವ್ವದ ಮದುವೆ ಎಂಬಿತ್ಯಾದಿ ಅಂಶಗಳ ಬಗ್ಗೆ ಕಥೆ ಹೆಣೆಯಲಾಗಿದೆ. ಅವುಗಳ ಜೊತೆಯಲ್ಲಿ ಭರ್ಜರಿ ಹಾಸ್ಯ ಕೂಡ ಇರಲಿದೆ ಎಂಬುದರ ಸುಳಿವು ಸಿಕ್ಕಿದೆ. ಈ ಚಿತ್ರಕ್ಕೆ ಶ್ರೀಕಾಂತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನೀಡಿದ್ದಾರೆ. ನಿತಿನ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕಿದೆ. ವಿನೀತ್ ಕುಮಾರ್, ಪ್ರಕಾಶ್ ತುಮಿನಾಡು, ನವೀನ್ ಡಿ. ಪಡೀಲ್, ದೀಪಕ್ ರೈ ಪಾಣಾಜೆ, ರಕ್ಷಿತಾ, ನಮಿತಾ ಕಿರಣ್, ಮೈಮ್ ರಾಮ್‌ದಾಸ್, ರಘು ಪಾಂಡೇಶ್ವರ, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಭೀಮ್ ರಾವ್, ಪುಷ್ಪರಾಜ್ ಬೋಳಾರ್, ಪಿ.ಡಿ. ಸತೀಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.