2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ (Karnataka Rajyotsava Award) ಪ್ರಶಸ್ತಿ ಪ್ರಕಟ ಆಗಿದೆ. ನಾಡಿನ ವಿವಿಧ ಕ್ಷೇತ್ರಗಳ ಅನೇಕ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಚಲನಚಿತ್ರ ಕ್ಷೇತ್ರದಿಂದ ಅನುಭವಿ ಕಲಾವಿದರಾದ ಬ್ಯಾಂಕ್ ಜನಾರ್ದನ್ ಮತ್ತು ಡಿಂಗ್ರಿ ನಾಗರಾಜ್ (Dingri Nagaraj) ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಈ ಕಲಾವಿದರು ಸಕ್ರಿಯರಾಗಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಡಿಂಗ್ರಿ ನಾಗರಾಜ್ ಮತ್ತು ಬ್ಯಾಂಕ್ ಜನಾರ್ದನ್ (Bank Janardhan) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಅವರ ಅಭಿಮಾನಿಗಳಿಗೆ ಸಂತಸ ಆಗಿದೆ. ಚಿತ್ರರಂಗದವರು, ಆಪ್ತರು, ಅಭಿಮಾನಿಗಳು ಈ ಕಲಾವಿದರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರವು ಇಂದು (ಅಕ್ಟೋಬರ್ 31) ಮಧ್ಯಾಹ್ನ ಬಿಡುಗಡೆ ಮಾಡಿದೆ. ಸಂಘ-ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ. ಸಂಗೀತ, ಸಿನಿಮಾ, ಕ್ರೀಡೆ, ನ್ಯಾಯಾಂಗ, ರಂಗಭೂಮಿ, ಶಿಕ್ಷಣ, ಪರಿಸರ, ಮಾಧ್ಯಮ, ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗೆ ಅನೇಕರು ಭಾಜನರಾಗಿದ್ದಾರೆ.
ಇದನ್ನೂ ಓದಿ: Rajyotsava Award 2023 Winners List: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ
ಪೋಷಕ ಪಾತ್ರಗಳಲ್ಲಿ ಬ್ಯಾಂಕ್ ಜನಾರ್ದನ್ ಮತ್ತು ಡಿಂಗ್ರಿ ನಾಗರಾಜ್ ಅವರು ಹೆಸರು ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಹಾಸ್ಯ ಪಾತ್ರಗಳನ್ನು ನಿಭಾಯಿಸುವ ಮೂಲಕ ಜನರ ಮನ ಗೆದ್ದಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ‘ಶ್’, ‘ಅಜಗಜಾಂತರ’, ‘ತರ್ಲೆ ನನ್ಮಗ’, ‘ಗೌರಿ ಗಣೇಶ’ ಮುಂತಾದ ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ದನ್ ಅವರ ನಟನೆಯನ್ನು ಮರೆಯುವಂತಿಲ್ಲ. ಕೆಲವೇ ದಿನಗಳ ಹಿಂದೆ ಅವರಿಗೆ ಹೃದಯಾಘಾತ ಆದ ಸುದ್ದಿ ಕೇಳಿಬಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಸದ್ಯ ಬ್ಯಾಂಕ್ ಜನಾರ್ದನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Kannada Rajyotsava Speech: ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ಭಾಷಣ ಹೀಗಿರಲಿ
ಡಿಂಗ್ರಿ ನಾಗರಾಜ್ ಮೂಲತಃ ಬೆಂಗಳೂರಿನವರು. ಅವರ ತಂದೆ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ ನಟನಾಗಿಯೇ ಡಿಂಗ್ರಿ ನಾಗರಾಜ್ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಂತರ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹಲವಾರು ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಸ್ಯಾಂಡಲ್ವುಡ್ನ ಅನೇಕ ಸ್ಟಾರ್ ಹೀರೋಗಳು ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಒದಗಿಬಂತು. ಈಗ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಅವರ ಖ್ಯಾತಿ ಹೆಚ್ಚಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:03 pm, Tue, 31 October 23