
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಕನ್ನಡದಲ್ಲಿ ರಿಲೀಸ್ ಆಗಿ ಅಬ್ಬರಿಸಿದೆ. ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ನೋಡಿ ಈ ಚಿತ್ರವನ್ನು ಡಬ್ ಮಾಡಿ ಇತರ ಭಾಷೆಯಲ್ಲೂ ರಿಲೀಸ್ ಮಾಡಲು ಒತ್ತಾಯ ಕೇಳಿ ಬಂತು. ಹೀಗಾಗಿ, ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡುವ ಕೋರಿಕೆ ಬಂತು. ಅಕ್ಟೋಬರ್ 14ರಂದು ಸಿನಿಮಾ ಹಿಂದಿಯಲ್ಲಿ ತೆರೆಗೆ ಬಂತು. ಈ ಚಿತ್ರಕ್ಕೆ ಹಿಂದಿ ಪ್ರೇಕ್ಷಕರಿಂದ ಮೆಚ್ಚುಗೆ ಕೇಳಿ ಬಂದಿದೆ. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಮೊದಲ ದಿನ ‘ಕಾಂತಾರ’ ಸಿನಿಮಾ (Kantara Movie) ಬಾಲಿವುಡ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ವೀಕೆಂಡ್ನಲ್ಲಿ ಸಿನಿಮಾದ ಕಮಾಯಿ ಹೆಚ್ಚುವ ನಿರೀಕ್ಷೆ ಇದೆ.
ಕನ್ನಡ ಪ್ರೇಕ್ಷಕರಿಂದ ‘ಕಾಂತಾರ’ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತು. ಸ್ಯಾಂಡಲ್ವುಡ್ ಪ್ರೇಕ್ಷಕರ ವಿಮರ್ಶೆ ಕೇಳಿ ಬಾಲಿವುಡ್ ಮಂದಿಗೂ ಕುತೂಹಲ ಮೂಡಿತು. ಅಷ್ಟೇ ಅಲ್ಲ ಬುಕ್ ಮೈ ಶೋನಲ್ಲಿ 9.9 ರೇಟಿಂಗ್ ಸಿಕ್ಕಿದ್ದು ಚಿತ್ರಕ್ಕೆ ಪ್ಲಸ್ ಆಯಿತು. ಈ ಎಲ್ಲಾ ಕಾರಣದಿಂದ ಹಿಂದಿಗೆ ಡಬ್ ಆಗಿ ತೆರೆಕಂಡ ಚಿತ್ರವನ್ನು ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಹೀಗಾಗಿ ಮೊದಲ ದಿನ ಈ ಸಿನಿಮಾ ಹಿಂದಿ ವರ್ಷನ್ನಲ್ಲಿ 1.27-1.70 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ ‘ಗಾಡ್ಫಾದರ್’ ಹಾಗೂ ಮಾಧವನ್ ನಟನೆಯ ‘ರಾಕೆಟ್ರಿ’ ಚಿತ್ರಗಳ ಮೊದಲ ದಿನದ ಕಲೆಕ್ಷನ್ಗೆ ಹೋಲಿಸಿದರೆ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.
‘ಗಾಡ್ಫಾದರ್’ ಸಿನಿಮಾ ಆರು ದಿನಕ್ಕೆ ಹಿಂದಿಯಲ್ಲಿ 4.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಲ್ಮಾನ್ ಖಾನ್ ನಟಿಸಿದ ಹೊರತಾಗಿಯೂ ಚಿತ್ರಕ್ಕೆ ಹಿಂದಿಯಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಆಗಿಲ್ಲ. ‘ಕಾಂತಾರ’ ಸಿನಿಮಾ ಇಂದು (ಅಕ್ಟೋಬರ್ 15) ಹಾಗೂ ಭಾನುವಾರ (ಅಕ್ಟೋಬರ್ 16) ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ‘ಕಾಂತಾರ’ ನೋಡಿದ ಹಿಂದಿ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಮುಂದಿನ ವಾರದ ವೇಳೆಗೆ ಚಿತ್ರದ ಗಳಿಕೆ ಹೆಚ್ಚುತ್ತಾ ಹೋಗಬಹುದು.
ಇದನ್ನೂ ಓದಿ: Kantara Movie: ಬಾಲಿವುಡ್ನಲ್ಲೂ ಧೂಳೆಬ್ಬಿಸುತ್ತಿರುವ ಕಾಂತಾರ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ಚಿತ್ರತಂಡ
‘ಕೆಜಿಎಫ್ 2’ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡಿತ್ತು. ಈಗ ಅದೇ ನಿರ್ಮಾಣ ಸಂಸ್ಥೆ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದೆ. ಈ ಕಾರಣಕ್ಕೂ ಬಾಲಿವುಡ್ ಮಂದಿಗೆ ಈ ಚಿತ್ರದ ಮೇಲೆ ಕುತೂಹಲ ಹೆಚ್ಚಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಹಿಂದಿ ಬೆಲ್ಟ್ನಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಖ್ಯಾತ ಯೂಟ್ಯೂಬರ್ ರಿಷಬ್ ಕಾಲಿಗೆ ಬಿದ್ದು ನಮಸ್ಕರಿಸಿದ್ದರು.
Published On - 3:44 pm, Sat, 15 October 22