Karataka Damanaka Trailer: ಉತ್ತರ ಕರ್ನಾಟಕದ ಊರು, ನೀರು, ತೇರಿನ ಕಥೆ ಇರುವ ಸಿನಿಮಾ
ಬಹುನಿರೀಕ್ಷಿತ ‘ಕರಟಕ ದಮನಕ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಮಾರ್ಚ್ 8ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ತೆರೆಕಾಣುತ್ತಿರುವ ಈ ಸಿನಿಮಾಗೆ ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಕಥೆಯ ಬಗ್ಗೆ ಈ ಟ್ರೇಲರ್ನಲ್ಲಿ ಸುಳಿವು ಬಿಟ್ಟುಕೊಡಲಾಗಿದೆ. ಪ್ರಭುದೇವ, ಶಿವರಾಜ್ಕುಮಾರ್ ನಟನೆಯ ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಥೆ ಇದೆ.
ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಅವರು ಒಂದೇ ಪ್ರಕಾರದ ಸಿನಿಮಾಗಳಿಗೆ ಗಂಟು ಬಿದ್ದವರಲ್ಲ. ಪ್ರತಿ ಸಿನಿಮಾದಲ್ಲೂ ಅವರು ಏನಾದರೂ ವಿಶೇಷವಾದದ್ದನ್ನು ಪ್ರೇಕ್ಷಕರಿಗೆ ನೀಡುತ್ತಾರೆ. ಈಗ ಅವರು ‘ಕರಟಕ ದಮನಕ’ (Karataka Damanaka) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶಿವರಾತ್ರಿ ಪ್ರಯುಕ್ತ ಮಾರ್ಚ್ 8ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ತೆರೆಕಾಣುವುದಕ್ಕೂ ಒಂದು ದಿನ ಮುನ್ನ, ಅಂದರೆ ಇಂದು (ಮಾರ್ಚ್ 7) ‘ಕರಟಕ ದಮನಕ’ ಸಿನಿಮಾದ ಟ್ರೇಲರ್ (Karataka Damanaka Trailer) ಅನಾವರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಶಿವರಾಜ್ಕುಮಾರ್, ಪ್ರಭುದೇವ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ಮುಂತಾದವರು ನಟಿಸಿದ್ದಾರೆ.
ಮೊದಲ ಬಾರಿಗೆ ಶಿವರಾಜ್ಕುಮಾರ್ ಮತ್ತು ಪ್ರಭುದೇವ ಅವರು ಒಟ್ಟಾಗಿ ನಟಿಸಿರುವುದರಿಂದ ‘ಕರಟಕ ದಮನಕ’ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ಈ ಸಿನಿಮಾದ ತಿರುಳು ಏನು ಎಂಬುದನ್ನು ಟ್ರೇಲರ್ ಮೂಲಕ ತಿಳಿಸಲಾಗಿದೆ. ಈ ಬಾರಿ ಯೋಗರಾಜ್ ಭಟ್ ಅವರು ಅಪ್ಪಟ ಉತ್ತರ ಕರ್ನಾಟಕದ ಕಹಾನಿ ಇರುವ ಸಿನಿಮಾವನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಊರು, ನೀರು ಮತ್ತು ತೇರಿನ ಕಥೆ ಹೇಳಲಾಗುತ್ತಿದೆ.
ಈ ವರ್ಷ ಸರಿಯಾಗಿ ಮಳೆ ಆಗಿಲ್ಲ. ಹಾಗಾಗಿ ಅನೇಕ ಜಿಲ್ಲೆಗಳಲ್ಲಿ ಬರಗಾಲ ಎದುರಾಗಿದೆ. ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಸಮಯಕ್ಕೆ ಸರಿಯಾಗಿ ‘ಕರಕಟ ದಮನಕ’ ಸಿನಿಮಾ ಬಿಡುಗಡೆ ಆಗುತ್ತಿದೆ. ನೀರಿನ ಕಥೆ ಈ ಸಿನಿಮಾದಲ್ಲಿ ಇದೆ. ಹಾಗಾಗಿ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್ ಆಗಲಿದೆ. ಇತ್ತೀಚೆಗೆ ‘ಕಾಟೇರ’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿರುವ ರಾಕ್ಲೈನ್ ವೆಂಕಟೇಶ್ ಅವರು ‘ಕರಕಟ ದಮನಕ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
‘ಕರಟಕ ದಮನಕ’ ಸಿನಿಮಾದ ಟ್ರೇಲರ್:
‘ಕರಟಕ ದಮನಕ’ ಸಿನಿಮಾದ ಟ್ರೇಲರ್ ನೋಡಿದ ಪ್ರೇಕ್ಷಕರ ಮನದಲ್ಲಿ ನಿರೀಕ್ಷೆ ಮೂಡಿದೆ. ‘ಈ ಸಿನಿಮಾವನ್ನು ನೋಡಲೇಬೇಕು’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ‘ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಮತ್ತು ಅಲ್ಲಿನ ಇನ್ನಿತರ ಸನ್ನಿವೇಶಗಳನ್ನು ತೋರಿಸಲು ಹೊರಟಿರುವ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಧನ್ಯವಾದಗಳು’ ಎಂಬ ಕಮೆಂಟ್ ಕೂಡ ಬಂದಿದೆ. ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.
ಇದನ್ನೂ ಓದಿ: ಮಾಳು ನಿಪನಾಳ ಹಾಡಿದ ಗೀತೆಗೆ ಪ್ರಭುದೇವ ಡ್ಯಾನ್ಸ್; ಮಿಲಿಯನ್ ವೀವ್ಸ್
ಶಿವರಾಜ್ಕುಮಾರ್ ಮತ್ತು ಪ್ರಭುದೇವ ಅವರ ಜೊತೆ ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್, ವೈಜನಾಥ ಬೀರಾದಾರ, ಪಿ. ರವಿಶಂಕರ್, ರಂಗಾಯಣ ರಘು ಮುಂತಾದ ಕಲಾವಿದರು ‘ಕರಟಕ ದಮನಕ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಹಾಡುಗಳು ಹಿಟ್ ಆಗಿವೆ. ‘ಹಿತಲಕ ಕರಿಬ್ಯಾಡ ಮಾವ..’, ‘ಡೀಗ ಡಿಗರಿ..’ ಹಾಡುಗಳು ಜನಮೆಚ್ಚುಗೆ ಪಡೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.