‘ಕೊರಗಜ್ಜ’ ಸಿನಿಮಾಕ್ಕೆ ಸತತ ಅಡ್ಡಿ: ಕ್ಷೇತ್ರ ನಿರ್ಮಾಣ, ಅದ್ಧೂರಿ ಕೋಲಸೇವೆ ಮಾಡಿಸಿದ ಚಿತ್ರತಂಡ
Daiva: ಕಾಂತಾರ ಸಿನಿಮಾವು ದೈವ ಸಂಸ್ಕೃತಿಯ ಪರಿಚಯ ಮಾಡಿದ ಬಳಿಕ ಆ ಬಗ್ಗೆ ಕುತೂಹಲಿಗಳ ಸಂಖ್ಯೆ ಹೆಚ್ಚಾಗಿದೆ. ಇದೀಗ ಕರಿ ಹೈದ ಕೊರಗಜ್ಜ ಹೆಸರಿನ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿಸಿದ್ದು, ಚಿತ್ರೀಕರಣದ ವೇಳೆ ಎದುರಿಸಿದ ಅಡೆ-ತಡೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಾಂತಾರ (Kantara) ಸಿನಿಮಾ ಮೂಲಕ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishab Shetty) ಕರಾವಳಿಯ ದೈವ ಸಂಸ್ಕೃತಿಯ ಪರಿಚಯವನ್ನು ರಾಷ್ಟ್ರಕ್ಕೆ ಮಾಡಿಕೊಟ್ಟಿದ್ದಾರೆ. ಕಾಂತಾರ ಸಿನಿಮಾದ ಬಳಿಕ ಕರಾವಳಿಯ ಆಚರಣೆ, ದೈವಗಳು. ಸಂಸ್ಕೃತಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದರ ಬೆನ್ನಲ್ಲೆ ಇತ್ತೀಚೆಗೆ ‘ಕರಿ ಹೈದ ಕೊರಗಜ್ಜ‘ (Kari Haida Koragajja) ಹೆಸರಿನ ಸಿನಿಮಾ ಸೆಟ್ಟೇರಿದೆ. ಆದರೆ ಈ ಸಿನಿಮಾದ ಚಿತ್ರೀಕರಣಕ್ಕೆ ಹಲವು ಬಗೆಯ ಅಡೆ-ತಡೆಗಳಾದ್ದರಿಂದ ಚಿತ್ರತಂಡವು ಗುಳಿಗನ ಮೊರೆ ಹೋಗಿದೆ.
ಚಿತ್ರತಂಡ ಹೇಳಿರುವಂತೆ, ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ವಿರ್ಮಾಣದ ವೇಳೆ. ಸೆಟ್ ಕೆಲಸಗಾರರು ಸೆಟ್ ನಿರ್ಮಾಣದ ವೇಳೆ ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದರು. ಸ್ಥಳಿಯರು ಅರಶಿನ ನೀರನ್ನು ಪ್ರೋಕ್ಷಿಸಿ , ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ಸೇರಿಸಲಾಯಿತು. ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್ ಕೆಲಸ ಮಾಡಲು ಮುಂದೆ ಬರಲಿಲ್ಲ. ಸೆಟ್ ಹಾಕಲಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ “ಗುಳಿಗ”ನ ಸ್ಥಳ ವೆಂದು ಸ್ಥಳಿಯರು ತಿಳಿಸಿದರು. ದೈವದ ಮೇಲಿನ ಗೌರವ-ಭಕ್ತಿಯಿಂದ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಸೆಟ್ ಕೆಲಸವನ್ನು ಸ್ಥಳಾಂತರ ಗೊಳಿಸಲಾಯಿತು ಎಂದಿದ್ದಾರೆ.
ಚಿತ್ರದಲ್ಲಿ ಗುಳಿಗ ದೈವದ ಪಾತ್ರವನ್ನು ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಅಭಿನಯಿಸಿದ್ದು, ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ, ತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾಯಿತು. ಈ ಬಗ್ಗೆ ಹಿರಿಯರಲ್ಲಿ ವಿಚಾರಿಸಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ರವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು , ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿರದೆ, ಪಾಳು ಬಿದ್ದಕಾರಣ ದೈವಕ್ಕೆ ಪೂಜೆ ಪುರಸ್ಕಾರಗಳು ನಡೆಯದಿರುವ ವಿಚಾರ ಬೆಳಕಿಗೆ ಬಂತು ಎಂದಿದೆ ಚಿತ್ರತಂಡ.
ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ, ಚಿತ್ರದ ಎಡಿಟಿಂಗ್ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಹಿರಿಯ ನಟಿ ಭವ್ಯ, ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ, ಕಲಾವಿದರಾದ ಭರತ್ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರು ಅಹೋರಾತ್ರಿ ವಿಜೃಂಭಣೆಯಿಂದ ನಡೆದ ಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ದೂರಿಯಾಗಿ ನೆರವೇರಿಸಿತು.
“ಕೊರಗಜ್ಜ”ನ ಕುರಿತಾದ ಸಿನಿಮಾ ಮಾಡಬೇಕೆಂದು ಹಲವಾರು ನಿರ್ಮಾಪಕರು ಕಳೆದ ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಅಂತೆಯೇ ಇದೀಗ ಸಿನಿಮಾ ನಿರ್ಮಾಣಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಕಬೀರ್ ಬೇಡಿ, ಶ್ರುತಿ, ಭವ್ಯ ಇನ್ನಿತರೆ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ