ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber Of Commerce) ಚುನಾವಣೆ ಮೇ 28ರಂದು ನಡೆಯಿತು. ಇದರ ಫಲಿತಾಂಶ ಹೊರಬಿದ್ದಿದೆ. ಭಾ.ಮ. ಹರೀಶ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅವರಿಗೆ ಚಿತ್ರರಂಗದ ಕಡೆಯಿಂದ ಶುಭಾಶಯಗಳು ಬರುತ್ತಿವೆ. ನಿರ್ಮಾಪಕ ಸಾ.ರಾ. ಗೋವಿಂದು ಅವರು (Sa Ra Govindu) ಈಗಾಗಲೇ ಮೂರು ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ನಿಂತಿದ್ದರು. ಅವರಿಗೆ ಎದುರಾಳಿಯಾಗಿ ಭಾ.ಮ. ಹರೀಶ್ ಅವರು (Bha Ma Harish) ಚುನಾವಣೆಯ ಕಣದಲ್ಲಿ ಇದ್ದರು. ಅಂತಿಮವಾಗಿ ಗೆಲುವು ಭಾ.ಮ. ಹರೀಶ್ ಪಾಲಾಗಿದೆ. ಸಾ.ರಾ. ಗೋವಿಂದು ಅವರಿಗೆ 371 ಮತ ಹಾಗೂ ಭಾ.ಮ. ಹರೀಶ್ ಅವರಿಗೆ 781 ಮತಗಳು ಬಿದ್ದಿವೆ. ಈ ಮೂಲಕ 410 ವೋಟ್ಗಳ ಅಂತರದಿಂದ ಹರೀಶ್ ಗೆಲುವು ಸಾಧಿಸಿದ್ದಾರೆ. ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿ ಜೈ ಜಗದೀಶ್ ಹಾಗೂ ಖಜಾಂಚಿಯಾಗಿ ಟಿ.ಪಿ.ಸಿದ್ದರಾಜು ಆಯ್ಕೆ ಆಗಿದ್ದಾರೆ.
ನಿರ್ಮಾಪಕರ ವಲಯದಿಂದ 910 ವೋಟ್ ಚಲಾವಣೆ ಆಗಿತ್ತು. ವಿತರಕರಿಂದ 200ರ ಆಸುಪಾಸಿನಲ್ಲಿ ವೋಟ್ಗಳು ಚಲಾವಣೆಗೊಂಡವು. ಪೇಪರ್ ಹರಿಯದೇ ಮತ ಏಣಿಕೆ ಮಾಡಲಾಗಿದೆ. 8 ಆಫೀಸರ್ಗಳು ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಚುನಾವಣಾ ಕಾವು ಮುಂಜಾನೆಯಿಂದಲೇ ಜೋರಾಗಿತ್ತು. ಭಾ.ಮಾ. ಹರೀಶ್ ಹಾಗೂ ಸಾ.ರಾ. ಗೋವಿಂದು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಮೇ 28ರ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ ಪೂರ್ಣಗೊಂಡಿತು. ರಾತ್ರಿ 7 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಆರಂಭ ಆಯಿತು.
ಇದನ್ನೂ ಓದಿ: ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಗೆಲುವಿಗಾಗಿ ದೇವರ ಮೊರೆ ಹೋದ ಭಾ.ಮ. ಹರೀಶ್; ಇಲ್ಲಿದೆ ವಿಡಿಯೋ
ಫಿಲ್ಮ್ ಚೇಂಬರ್ ಚುನಾವಣೆಗೆ ಮತ ಚಲಾಯಿಸಲು ಸ್ಯಾಂಡಲ್ವುಡ್ನ ಅನೇಕರು ಆಗಮಿಸಿದ್ದರು. ರಾಘವೇಂದ್ರ ರಾಜ್ಕುಮಾರ್, ನಟಿ ಲೀಲಾವತಿ, ವಿನೋದ್ ರಾಜ್, ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ನಟಿ ಶೃತಿ, ದಿನಕರ್ ತೂಗುದೀಪ, ನಟಿ ಜಯಮಾಲಾ, ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ಓಂ ಸಾಯಿ ಪ್ರಕಾಶ್ ಮೊದಲಾದವರು ಮತ ಚಲಾಯಿಸಿದ್ದರು.
‘ನಮ್ಮ ಮೇಲೆ ನಂಬಿಕೆ ಇಟ್ಟು ಜಯ ತಂದುಕೊಟ್ಟ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಿಗೆ ಧನ್ಯವಾದ. ಮುಂದಿನ ದಿನಗಳಲ್ಲಿ ನಮ್ಮ ಬಣದಿಂದ ಒಳ್ಳೆಯ ಕೆಲಸ ಮಾಡುತ್ತೇವೆ. ಈ ಮೂಲಕ ಸದಸ್ಯರ ಸಮಸ್ಯೆಗಳನ್ನ ಬಗೆಹರಿಸುತ್ತೇವೆ’ ಎಂದು ಭಾ.ಮಾ. ಹರೀಶ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:28 am, Sun, 29 May 22