ನಿಧನರಾದ ಮೇಲೂ ಸಂಚಾರಿ ವಿಜಯ್​ಗೆ ಅಗೌರವ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಡವಟ್ಟು

Karnataka Film Chamber: ಇತ್ತೀಚೆಗೆ ನಿಧನರಾದ ಚಿತ್ರರಂಗದ ಗಣ್ಯರಿಗೆ ನಮನ ಸಲ್ಲಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶ್ರದ್ಧಾಂಜಲಿ ಸಭೆ ಮಾಡಲಾಯಿತು. ಆದರೆ ಅಲ್ಲಿ ಸಂಚಾರಿ ವಿಜಯ್​ ಫೋಟೋ ಇಟ್ಟಿರಲಿಲ್ಲ.

ನಿಧನರಾದ ಮೇಲೂ ಸಂಚಾರಿ ವಿಜಯ್​ಗೆ ಅಗೌರವ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಡವಟ್ಟು
ಸಂಚಾರಿ ವಿಜಯ್​
TV9kannada Web Team

| Edited By: Madan Kumar

Jun 18, 2021 | 8:09 AM

ನಟ ಸಂಚಾರಿ ವಿಜಯ್​ ಅವರು ಎಂತಹ ಅದ್ಭುತ ಕಲಾವಿದ ಆಗಿದ್ದರು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದ ಅವರು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್​ಫೇರ್​ ಪ್ರಶಸ್ತಿಗಳನ್ನು ಪಡೆದು ಅಭಿಮಾನಿಗಳನ್ನು ಸಂಪಾದಿಸಿದ್ದರು. ಇತ್ತೀಚೆಗೆ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು ವಿಪರ್ಯಾಸ. ಅವರು ಬದುಕಿದ್ದಾಗ ಸೂಕ್ತ ಮನ್ನಣೆ ಸಿಗಲಿಲ್ಲ ಎಂಬ ದೂರು ಇದೆ. ಆದರೆ ನಿಧನರಾದ ನಂತರವೂ ಅವರಿಗೆ ಸೂಕ್ತ ಗೌರವ ಸೂಚಿಸುವಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಲಕ್ಷ್ಯ ತೋರಿದೆ. ಈ ಬಗ್ಗೆ ಅನೇಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಇತ್ತೀಚೆಗೆ ನಿಧನರಾದ ಚಿತ್ರರಂಗದ ಗಣ್ಯರಿಗೆ ನಮನ ಸಲ್ಲಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶ್ರದ್ಧಾಂಜಲಿ ಸಭೆ ಮಾಡಲಾಯಿತು. ನಿರ್ಮಾಪಕ ರಾಮು, ಅಣ್ಣಯ್ಯ ಚಂದ್ರಶೇಖರ್​ ಹಾಗೂ ಕೆಸಿಎನ್​ ಚಂದ್ರಶೇಖರ್​ ಅವರ ಭಾವಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಆದರೆ ಅಲ್ಲಿ ಸಂಚಾರಿ ವಿಜಯ್​ ಅವರ ಫೋಟೋ ಇಟ್ಟಿರಲಿಲ್ಲ. ಇದು ವಿಜಯ್​ ಸ್ನೇಹಿತರ ಮತ್ತು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.

ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟನ ಬಗ್ಗೆ ಈ ರೀತಿ ನಿರ್ಲಕ್ಷ್ಯ ತೋರಿಸಿದ ವಾಣಿಜ್ಯ ಮಂಡಳಿ ವಿರುದ್ಧ ‘ನಾನು ಅವನಲ್ಲ ಅವಳು’ ಚಿತ್ರದ ನಿರ್ದೇಶಕ ಬಿ.ಎಸ್​. ಲಿಂಗದೇವರು ಗರಂ ಆಗಿದ್ದಾರೆ. ಬಿಗ್​ ಬಾಸ್​ ಸ್ಪರ್ಧಿ, ಲೇಖಕ, ನಟ ಚಕ್ರವರ್ತಿ ಚಂದ್ರಚೂಡ್​ ಕೂಡ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಡಿಯರ್​ ಫಿಲ್ಮ್​ ಚೇಂಬರ್​, ಶ್ರದ್ಧಾಂಜಲಿ ಸಭೆಯಲ್ಲಿ ನನ್ನ ಗೆಳೆಯ ಸಂಚಾರಿ ವಿಜಯ್​ದೊಂದು ಭಾವ ಚಿತ್ರ ಇಡಲು ಅಸಾಧ್ಯವಾಯಿತೇ? ನಿಮಗೊಂದು ಧಿಕ್ಕಾರ. ನಿಮ್ಮ ಮೂರು ವಲಯಗಳಲ್ಲಿ ಕಾಲಾವಿದರು, ತಂತ್ರಜ್ಞರು ಎಂದರೆ ಅಷ್ಟೊಂದು ಅಲರ್ಜಿಯೇ? ಅಂತಹ ಪ್ರತಿಭೆಯನ್ನು ಜಗತ್ತು ನೆನಪಿಟ್ಟುಕೊಳ್ಳುವಂತೆ ಕೆಲಸ ಮಾಡುವುದು ನಮಗೆ ಗೊತ್ತಿದೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಚಕ್ರವರ್ತಿ ಚಂದ್ರಚೂಡ್​ ಬರೆದುಕೊಂಡಿದ್ದಾರೆ.

‘ರಾಷ್ಟ್ರಪ್ರಶಸ್ತಿ ಪಡೆದು ನಾಡಿಗೆ ಹೆಮ್ಮೆ ತಂದ ಸಂಚಾರಿ ವಿಜಯ್ ಅವರು ಅನೇಕ ಸಮಾಜಮುಖಿ ಕೆಲಸ ಮಾಡಿ ಕನ್ನಡಿಗರ ಮನೆ ಮಾತಾಗಿದ್ದಾರೆ. ವಿಜಯ್ ಮಿದುಳು ನಿಷ್ಕ್ರಿಯವಾದ ನಂತರ, ಆರು ಮಂದಿಗೆ ಹೊಸ ಬದುಕು ನೀಡುವ ಉದ್ದೇಶದಿಂದ, ಅವರ ಅಂಗಾಂಗ ದಾನ ಮಾಡಲಾಯಿತು. ಇಂಥ ಕಲಾವಿದನಿಗೆ ಶ್ರದ್ಧಾಂಜಲಿ ವೇಳೆ ಸೂಕ್ತ ಗೌರವ ನೀಡದೇ ಇರುವುದು ನಿಜಕ್ಕೂ ಖಂಡನಾರ್ಹ ಮತ್ತು ವಿಜಯ್ ಕುಟುಂಬಕ್ಕೆ ತೋರಿದ ಅಗೌರವ’ ಎಂದು ಬಿ.ಎಸ್​. ಲಿಂಗದೇವರು ಹೇಳಿದ್ದಾರೆ.

ಇದನ್ನೂ ಓದಿ:

ಸಂಚಾರಿ ವಿಜಯ್ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಉಚಿತವಾಗಿ ನೋಡಬಹುದು; ಇಲ್ಲಿದೆ ಲಿಂಕ್​

Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada