ಸಂಚಾರಿ ವಿಜಯ್ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಉಚಿತವಾಗಿ ನೋಡಬಹುದು; ಇಲ್ಲಿದೆ ಲಿಂಕ್
Nanu Avanalla Avalu: ನಾನು ಅವನಲ್ಲ ಅವಳು ಚಿತ್ರದಲ್ಲಿ ಮಂಗಳಮುಖಿ ಪಾತ್ರಕ್ಕೆ ವಿಜಯ್ ಬಣ್ಣ ಹಚ್ಚಿದ್ದರು. ಈ ಪಾತ್ರದ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ಫೇರ್ ಪ್ರಶಸ್ತಿಗಳು ಒಲಿದುಬಂದಿದ್ದವು.
ನಟ ಸಂಚಾರಿ ವಿಜಯ್ ಅವರು ಎಂಥ ಅದ್ಭುತ ಕಲಾವಿದ ಎಂಬುದನ್ನು ಸಾಬೀತು ಮಾಡಿದ ಸಿನಿಮಾ ‘ನಾನು ಅವನಲ್ಲ ಅವಳು’. ಈ ಚಿತ್ರದಲ್ಲಿ ಮಂಗಳಮುಖಿ ಪಾತ್ರಕ್ಕೆ ವಿಜಯ್ ಬಣ್ಣ ಹಚ್ಚಿದ್ದರು. ಈ ಪಾತ್ರದ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ಫೇರ್ ಪ್ರಶಸ್ತಿಗಳು ಒಲಿದುಬಂದಿದ್ದವು. ಆದರೆ ಆ ಚಿತ್ರವನ್ನು ಎಷ್ಟೋ ಜನರಿಗೆ ನೋಡಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲರಿಗೂ ವೀಕ್ಷಣೆಗೆ ಸಿಗಲಿ ಎಂಬ ಉದ್ದೇಶದಿಂದ ನಿರ್ಮಾಪಕ ರವಿ ಆರ್. ಗರಣಿ ಅವರು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ಬಿ.ಎಸ್. ಲಿಂಗದೇವರು ಅವರು ಮಾಹಿತಿ ನೀಡಿದ್ದಾರೆ. ನಿರ್ಮಾಪಕರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
‘ವಿಜಯ್ ನೆನಪಲ್ಲಿ… ಧನ್ಯವಾದ ರವಿ ಗರಣಿ ಸಾರ್. ತಾವು ನಮ್ಮ ಹೆಮ್ಮೆ. ನಾವಿಬ್ಬರೂ ಸುಮಾರು 25 ವರ್ಷಕ್ಕೂ ಹೆಚ್ಚು ಸಮಯದಿಂದ ಸ್ನೇಹಿತರು ಮತ್ತು ನೀವೊಬ್ಬ ಅತ್ಯುತ್ತಮ ಸಿನಿಮಾ ನಿರ್ದೇಶಕರಾಗಿದ್ದರೂ ಕೂಡ ನನ್ನ ಮೇಲೆ ನಂಬಿಕೆ ಇಟ್ಟು ಯಾವುದೇ ವ್ಯಾವಹಾರಿಕ ದೃಷ್ಟಿಕೋನ ಇಟ್ಟುಕೊಳ್ಳದೆ ನಾನು ಅವನಲ್ಲ ಅವಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಲ್ಲದೆ, ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ನಿರ್ದೇಶನ ಮಾಡಲು ಅನುವು ಮಾಡಿಕೊಟ್ಟಿದ್ದೀರಿ’ ಎಂದು ಲಿಂಗದೇವರು ಮಾತು ಆರಂಭಿಸಿದ್ದಾರೆ.
‘ಪ್ರಶಸ್ತಿ ವಿಜೇತ ಚಿತ್ರಗಳನ್ನು ಬಿಡುಗಡೆ ಮಾಡಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಕರ್ನಾಟಕದಾದ್ಯಂತ ನಾನು ಅವನಲ್ಲ ಅವಳು ಸಿನಿಮಾವನ್ನು ಬಿಡುಗಡೆ ಮಾಡಲಾಯಿತು. ಆದರೂ ಹೆಚ್ಚು ಹೆಚ್ಚು ಜನರಿಗೆ ತಲುಪಲಾಗಲಿಲ್ಲ ಎಂಬ ಕೊರಗು ಮನೆ ಮಾಡಿತ್ತು. ಕಳೆದ ಮೂರು ದಿನಗಳಿಂದ ನೂರಾರು ಫೋನ್ ಮತ್ತು ಮೆಸೇಜ್ಗಳ ಮುಖಾಂತರ ನಾನು ಅವನಲ್ಲ ಅವಳು ಸಿನಿಮಾ ನೋಡಲು ಅವಕಾಶ ಮಾಡಿ ಎಂಬ ವಿನಂತಿಗೆ ಪೂರಕವಾಗಿ ನಾನು ಕೂಡ ಕನ್ನಡದ ಪ್ರಮುಖ ಚಾನಲ್ ನವರಿಗೆ ಸಂಪರ್ಕಿಸಲು ಪ್ರಯತ್ನ ಮಾಡಿದೆ , ಆದರೆ ಸಂಪರ್ಕವೇ ಆಗಲಿಲ್ಲ’ ಎಂದು ಲಿಂಗದೇವರು ಹೇಳಿದ್ದಾರೆ.
‘ಈಗ ನೀವು (ರವಿ ಆರ್. ಗರಣಿ) ಮತ್ತೆ ಯಾವ ವ್ಯವಹಾರನೂ ಬೇಡ, ನನಗೆ ಈ ಸಿನಿಮಾ ಮಾಡಿದ ಹೆಮ್ಮೆ ಇದೆ ಮತ್ತು ಇಂದು ವಿಜಯ್ ಮತ್ತಷ್ಟು ಕನ್ನಡಿಗರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಯೂರಲಿ ಎಂಬ ಸದುದ್ದೇಶದಿಂದ ಯೂಟ್ಯೂಬ್ನಲ್ಲಿ ಅವಕಾಶ ಮಾಡಿಕೊಟ್ಟಿದ್ದೀರಿ.. ನಿಮಗೆ ಕೋಟಿ ಕೋಟಿ ನಮಸ್ಕಾರಗಳು’ ಎಂದಿದ್ದಾರೆ ಲಿಂಗದೇವರು.
‘ಸಂಚಾರಿ ವಿಜಯ್ ಮೇರು ನಟರ ಸಾಲಿನಲ್ಲಿ ನಿಲ್ಲುವಂತಹ ಪ್ರತಿಭಾವಂತ ಕಲಾವಿದ. ಅವರ ಅಗಾಧ ಶಕ್ತಿಯ ಪರಿಚಯ ಆಗಿದ್ದು ನಾನು ಅವನಲ್ಲ ಅವಳು ಸಿನಿಮಾದಿಂದ ಎಂಬ ಹೆಮ್ಮೆಯೇ ಇವತ್ತು ಮನಸ್ಸು ಭಾರವಾಗಿಸುತ್ತಿದೆ. ಈ ಸಿನಿಮಾ ನೋಡಿದರೆ ಸಂಚಾರಿ ವಿಜಯ್ ಎಂಬ ಅಪ್ಪಟ ಪ್ರತಿಭೆ ಮತ್ತಷ್ಟು ಮನಸ್ಸುಗಳಿಗೆ ಕಾಡುತ್ತದೆ ಎಂಬ ನಂಬಿಕೆ ನನಗಿದೆ. ನಾನು ಅವನಲ್ಲ ಅವಳು ಸಿನಿಮಾವನ್ನು ಯೂಟ್ಯೂಬ್ನಲ್ಲಿ ಎಲ್ಲರೂ ನೋಡಲು ಅನುವು ಮಾಡಿಕೊಟ್ಟದ್ದಕ್ಕೆ ಮತ್ತೆ ಧನ್ಯವಾದ. ಬಹುಶಃ ಇದು ನಾವು ಅವರಿಗೆ ಸಲ್ಲಿಸಬಹುದಾದ ಅಂತಿಮ ನಮನ’ ಎಂದು ಲಿಂಗದೇವರು ಹೇಳಿದ್ದಾರೆ. ಇಲ್ಲಿದೆ ಚಿತ್ರದ ಯೂಟ್ಯೂಬ್ ಲಿಂಕ್:
‘ವಿಜಯ್ ಸ್ವಾಭಿಮಾನದಿಂದ ಸ್ವಾವಲಂಬಿಯಾಗಿ ಬದುಕಿದವನು. ಯಾರ ಮುಂದೆಯೂ ತನ್ನ ಸ್ವಾಭಿಮಾನಕ್ಕೆ ವಿರುದ್ಧವಾಗಿ ಸಹಾಯ ಬೇಡಿದವನಲ್ಲ. ತಾನೇ ಕಷ್ಟದಲ್ಲಿದ್ದರೂ ಅನೇಕರಿಗೆ ಸಹಾಯ ಮಾಡಿದವ ವಿಜಯ್’ ಎಂದಿದ್ದಾರೆ ಲಿಂಗದೇವರು.
ಇದನ್ನೂ ಓದಿ:
Sanchari Vijay: ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಟೀಸರ್ ನೋಡಿದರೆ ಕಲ್ಲು ಹೃದಯವೂ ಕರಗಲೇಬೇಕು
Published On - 11:34 am, Thu, 17 June 21