ಟಿಕೆಟ್ ಬೆಲೆ ಇಳಿಕೆ, ಪ್ರದರ್ಶಕರಿಗೆ 15 ಲಕ್ಷ ಸಹಾಯ ಧನ: ಸಿಎಂಗೆ ಬೇಡಿಕೆ
Siddaramaiah: ಟಿಕೆಟ್ ದರ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಚಿತ್ರನಗರಿ (Film City) ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ ಬೆನ್ನಲ್ಲೆ ಇಂದು (ಜುಲೈ 11) ಬೆಳಿಗ್ಗೆ ಸಿಎಂ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (karnataka film chamber of commerce) ಅಧ್ಯಕ್ಷರು ಹಾಗೂ ಇತರೆ ಪದಾಧಿಕಾರಿಗಳು ಭೇಟಿಯಾಗಿ ಚಿತ್ರರಂಗಕ್ಕೆ ಅಗತ್ಯವಾದ ಇತರೆ ಸೌಕರ್ಯಗಳನ್ನು, ತಂತ್ರಜ್ಞಾನವನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಪ್ರೊಜೆಕ್ಟರ್ ಥಿಯೇಟರ್ ಅಳವಡಿಸಲಾಗಿದ್ದು, ಅದನ್ನು ಅದನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಡಿಜಿಟಲ್ ಡಿಸಿಪಿ ಯಂತ್ರೋಪಕರಣವನ್ನು ಅಳವಡಿಸಲು 20 ಕೋಟಿ ಬಿಡುಗಡೆ ಬಿಡುಗಡೆ ಮಾಡಬೇಕೆಂದು ಸಿಎಂ ಅವರಿಗೆ ನೀಡಿರುವ ಮನವಿ ಪತ್ರದಲ್ಲಿ ಕೋರಲಾಗಿದೆ. ಮುಂದುವರೆದು, ರಾಜ್ಯದ ಹಲವು ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ಪ್ರೊಜೆಕ್ಟರ್ಗಳನ್ನು ಹೊಂದಿದ್ದು, ಹೊಸ ಪ್ರೊಜೆಕ್ಟರ್ಗಳ ಖರೀದಿಗೆ ಸುಮಾರು 40 ರಿಂದ 50 ಲಕ್ಷ ವೆಚ್ಚವಾಗುತ್ತದೆ. ಹಾಗಾಗಿ ಪ್ರೊಜೆಕ್ಷನ್ ಕೊಳ್ಳಲು 15 ಲಕ್ಷ ಪ್ರೋತ್ಸಾಹ ಧನ ನೀಡಬೇಕೆಂದು ಮನವಿ ಮಾಡಲಾಗಿದೆ. ಇದರಿಂದ ಸರ್ಕಾರದ ತೆರಿಗೆ ಹೆಚ್ಚಳವಾಗುತ್ತದೆ ಎಂದು ಸಹ ಕರ್ನಾಟಕ ಚಲನಚಿತ್ರ ವಾಣಿಜ್ಯ ಪದಾಧಿಕಾರಿಗಳು ಮನವಿಯನ್ನು ಹೇಳಿದ್ದಾರೆ.
ಇದನ್ನೂ ಓದಿ:ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸ್ಥಳ ಫಿಕ್ಸ್; ವಾರ್ತಾ ಇಲಾಖೆ ಆಯುಕ್ತರಿಂದ ಸ್ಥಳ ಪರಿಶೀಲನೆ
ಚಲನಚಿತ್ರೋದ್ಯಮವನ್ನು ಕೈಗಾರಿಕಾ ಇಲಾಖೆ ಎಂದು ಪರಿಗಣಿಸಬೇಕು ಹಾಗೂ ಪೂರಕ ಇತರೆ ಉದ್ಯಮಗಳು ಸಹ ಚಲನಚಿತ್ರರಂಗವನ್ನು ಕೈಗಾರಿಕಾ ಉದ್ಯಮ ಎಂದೇ ತಿಳಿದು ವ್ಯವಹರಿಸುವಂತೆ ಬದಲಾವಣೆ ಮಾಡಬೇಕು ಎಂದು ಸರ್ಕಾರವನ್ನು ಕೋರಲಾಗಿದೆ. ಹಾಗೂ ರಾಜ್ಯದ ಎಲ್ಲ ಚಿತ್ರಮಂದಿಗಳಿಗೆ ಹಾಗೂ ಮಲ್ಟಿಪ್ಲೆಕ್ಸ್ಗಳಿಗೆ ಏಕರೂಪದ ಪ್ರವೇಶ ದರ ನಿಗದಿಪಡಿಸುವಂತೆಯೂ ಕೋರಲಾಗಿದೆ. ಎಲ್ಲ ಮಲ್ಟಿಪ್ಲೆಕ್ಸ್ಗಳಿಗೆ 250 ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಗೆ 150 ರೂ ಟಿಕೆಟ್ ದರವನ್ನು ಸರ್ಕಾರವೇ ನಿಗದಿಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಚಿತ್ರರಂಗದವರ ಬಹು ವರ್ಷದ ಬೇಡಿಕೆಯಾಗಿದ್ದ ಚಿತ್ರನಗರಿ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದು ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಖಾಸಗಿ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಘೋಷಿಸುವುದಾಗಿ ಸಿಎಂ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಫಿಲಂಸಿಟಿ ಮಾಡುವುದಾಗಿ ಹೇಳಿದ್ದರು ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ಬಿಜೆಪಿಯು ಬೆಂಗಳೂರಿನಲ್ಲೇ ಫಿಲಂಸಿಟಿ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆದರೆ ಅದೂ ಸಾಧ್ಯವಾಗಿರಲಿಲ್ಲ. ಈಗ ಸಿದ್ದರಾಮಯ್ಯ ಅವರು ಫಿಲಂ ಸಿಟಿ ಘೋಷಣೆ ಮಾಡಿದ್ದು ಈ ಬಾರಿಯಾದರೂ ಚಿತ್ರರಂಗದವರು ಕನಸು ನನಸಾಗುತ್ತದೆಯೇ ಕಾದು ನೋಡಬೇಕಿದೆ.
ಸಿನಿಮಾದ ಹಲವು ಕಾರ್ಯಗಳಿಗೆ ಫಿಲಂಸಿಟಿ ಅವಶ್ಯಕವಾಗಿದೆ. ಕರ್ನಾಟಕದ ಹಲವು ಚಿತ್ರತಂಡಗಳು ಸಿನಿಮಾದ ಚಿತ್ರೀಕರಣದಿಂದ ಹಿಡಿದು ಮಿಕ್ಸಿಂಗ್, ವಿಎಫ್ಎಕ್ಸ್, ಡಬ್ಬಿಂಗ್, ಎಡಿಟಿಂಗ್ ಇನ್ನೂ ಹಲವು ಕಾರ್ಯಗಳಿಗೆ ಹೈದರಾಬಾದ್ ಅಥವಾ ಚೆನ್ನೈ ಅನ್ನು ಈಗಲೂ ನೆಚ್ಚಿಕೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Tue, 11 July 23