ಅಭಿಮಾನಿಗಳು ದರ್ಶನ್ (Darshan Thoogudeepa) ಅನ್ನು ಡಿ ಬಾಸ್ ಎಂದು ಕರೆಯುತ್ತಾರೆ. ಹಾಗೆಯೇ ಈಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಸಹಚರರು ಜೈಲು ಪಾಲಾಗಿದ್ದು, ಈ ಬಗ್ಗೆ ವರದಿ ಮಾಡುತ್ತಿರುವ ಮಾಧ್ಯಮಗಳು ದರ್ಶನ್ ಹಾಗೂ ಸಹಚರರನ್ನು ‘ಡಿ ಗ್ಯಾಂಗ್’ ಎಂದು ಸಂಭೋಧಿಸುತ್ತಿವೆ. ಸಾಮಾಜಿಕ ಜಾಲತಾಣದಲ್ಲಿಯೂ ‘ಡಿ ಗ್ಯಾಂಗ್’ ಹೆಸರಿನ ಬಳಕೆ ಜೋರಾಗಿದೆ. ಈಗ ಚಿತ್ರತಂಡವೊಂದು ‘ಡಿ ಗ್ಯಾಂಗ್’ ಹೆಸರು ನೊಂದಾವಣಿಗೆ ಫಿಲಂ ಚೇಂಬರ್ಗೆ ಅರ್ಜಿ ಸಲ್ಲಿಸಿದೆ. ಆದರೆ ಆ ಹೆಸರನ್ನು ನೀಡಲು ಸಾಧ್ಯವಿಲ್ಲವೆಂದು ಚೇಂಬರ್ ಹೇಳಿದೆ.
ಪಿಎಂ ಫಿಲಮ್ಸ್ ನಿರ್ಮಾಣ ಸಂಸ್ಥೆಯ ಮಂಜು ಎನ್ ನಾಯಕ್ ಎಂಬುವರು ‘ಡಿ ಗ್ಯಾಂಗ್’ ಹೆಸರಿನ ನೊಂದಣಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹೆಸರನ್ನು ನೀಡಲು ಸಾಧ್ಯವಿಲ್ಲವೆಂದು ವಾಣಿಜ್ಯ ಮಂಡಳಿ ಹೇಳಿದೆ ಎಂದು ಅವರು ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ ಏಕೆ ಹೆಸರು ನೀಡಲು ಸಾಧ್ಯವಿಲ್ಲ ಎಂಬುದಕ್ಕೆ ಸ್ಪಷ್ಟ ಕಾರಣವನ್ನು ಸಹ ಮಂಡಳಿ ನೀಡಿಲ್ಲವೆಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಹೆಚ್ಡಿ ಕುಮಾರಸ್ವಾಮಿಗೆ ನಿಂದಿಸಿದ ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು
‘ಡಿ ಗ್ಯಾಂಗ್’ ಎನ್ನುವ ಹೆಸರಿಗಾಗಿ ಫಿಲ್ಮ್ ಛೇಂಬರ್ ನಲ್ಲಿ ವಿಚಾರಿಸಿದಾಗ ಈ ಹೆಸರಿನ ಟೈಟಲ್ ಅನ್ನು ಯಾರು ಕೂಡ ನೊಂದಣಿ ಮಾಡಿರಲಿಲ್ಲ. ನಾವು ಈ ಟೈಟಲ್ ನ ಮೇಲೆ ಸುಮಾರು ಎರಡು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್ ನಲ್ಲಿ ‘ಡಿ ಗ್ಯಾಂಗ್’ ಎನ್ನುವ ಹಾಡು ಬಿಡುಗಡೆ ಆಗಿದೆ. ಈಗ ನಡೆಯುತ್ತಿರುವ ದರ್ಶನ್ ಅವರ ಪ್ರಕರಣಕ್ಕೂ ನಮ್ಮ ಟೈಟಲ್ಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ನಮ್ಮ ಟೈಟಲ್ ಅನ್ನು ಯಾವ ಕಾರಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರು ನೊಂದಣಿ ಮಾಡಿಕೊಳ್ಳಲು ಆಗುವುದಿಲ್ಲ ಎಂದರು ಎನ್ನುವುದು ನನಗೆ ಅರ್ಥವಾಗಲಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ನಿರ್ಮಾಪಕರಿಗೆ ಅಥವಾ ದೊಡ್ಡ ನಿರ್ದೇಶಕರಿಗೆ ಈ ಟೈಟಲ್ ಕೊಟ್ಟರೆ. ಆಗ ಮಾತಾನಾಡಲು ಸಾಕ್ಷಿ ಬೇಕು ಎನ್ನುವ ಕಾರಣಕ್ಕೆ ಈ ವಿಷಯವನ್ನು ಇಲ್ಲಿ ತಿಳಿಸಲು ಇಷ್ಟಪಡುತ್ತೇನೆ’ ಎಂದು ‘ಡಿ ಗ್ಯಾಂಗ್’ ಸಿನಿಮಾವನ್ನು ನಿರ್ದೇಶಿಸಲು ಬಯಸಿರುವ ರಾಖಿ ಸೊಮ್ಲಿ ಎಂಬುವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಚಿತ್ರತಂಡ ಹೇಳಿಕೊಂಡಿರುವಂತೆ ‘ಡಿ ಗ್ಯಾಂಗ್’ ಹೆಸರನ್ನಿಟ್ಟುಕೊಂಡೇ ಅವರು ಕತೆ, ಚಿತ್ರಕತೆ ರಚಿಸಿಕೊಂಡಿದ್ದಾರೆ. ಅಲ್ಲದೆ ಅವರು ಹೇಳಿಕೊಂಡಿರುವಂತೆ, ದರ್ಶನ್ ಕುರಿತು ಈಗ ನಡೆಯುತ್ತಿರುವ ಘಟನೆಗಳಿಗೂ ಅವರ ಸಿನಿಮಾಕ್ಕೂ ಸಂಬಂಧವಿಲ್ಲ. ಅವರ ಸಿನಿಮಾದ ಕತೆ ರೇಣುಕಾ ಸ್ವಾಮಿ ಕೊಲೆಯನ್ನು ಆಧರಿಸಿದ್ದಲ್ಲ. ಆದರೂ ಸಹ ಮಂಡಳಿಯವರು ಸಿನಿಮಾ ಟೈಟಲ್ ನೀಡಲು ನಿರಾಕರಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ ಟೈಟಲ್ ನೀಡಲಾಗುವುದಿಲ್ಲ ಎಂದು ಹೇಳಿದ್ದಾರಂತೆ ಅಧ್ಯಕ್ಷರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ