ಕೊರೊನಾ ವೈರಸ್ ನಿಯಂತ್ರಣಕ್ಕೆ ಹೇರಿರುವ ಲಾಕ್ಡೌನ್ನಿಂದ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ, ಇವರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣದಲ್ಲಿ ಇಂದು (ಮೇ 31) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈಗ, ಸರ್ಕಾರ ಇದಕ್ಕೆ ಸ್ಪಂದಿಸಿದ್ದು, ಎರಡನೇ ಹಂತದಲ್ಲಿ ಸಿನಿಮಾ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡುತ್ತಿದೆ.
ಕೊವಿಡ್ ಮೊದಲನೇ ಅಲೆ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲನೇ ಅಲೆ ತಣ್ಣಗಾದ ನಂತರದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುವ ಮೂಲಕ ಚಿತ್ರರಂಗ ಮತ್ತೆ ಚೇತರಿಕೆ ಕಾಣಲು ಆರಂಭವಾಗಿತ್ತು. ಇನ್ನು, ಸಾಕಷ್ಟು ಸಿನಿಮಾಗಳು ಘೋಷಣೆ ಆಗಿ, ಶೂಟಿಂಗ್ ಕೂಡ ಶುರುವಾಗಿತ್ತು. ಹೀಗಾಗಿ, ಎಲ್ಲವೂ ಮತ್ತೆ ಮೊದಲಿನಂತಾಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಏಕಾಏಕಿ ಕೊವಿಡ್ ಎರಡನೇ ಅಲೆ ಹೆಚ್ಚಿದ್ದರಿಂದ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ತಕ್ಷಣವೇ ಚಿತ್ರೋದ್ಯಮದ ನೆರವಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸುನೀಲ್ ಪುರಾಣಿಕ್ ಮನವಿಯಲ್ಲಿ ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಚಿತ್ರೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದರು.
ಈ ಬಗ್ಗೆ ಈಗ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಬೆಂಗಳೂರಿನಲ್ಲಿ ಸೋಮವಾರ (ಮೇ 31) ಮಾತನಾಡಿದ್ದಾರೆ. ಲಾಕ್‌ಡೌನ್ ಬಗ್ಗೆ ನಿರ್ಧರಿಸಲು ಇನ್ನೂ ಸಮಯವಿದೆ. ಕೊರೊನಾ ಪ್ರಕರಣ ಆಧರಿಸಿ ಲಾಕ್‌ಡೌನ್ ತೀರ್ಮಾನ ಮಾಡುತ್ತೇವೆ. ಸಿನಿಮಾ ಕಾರ್ಮಿಕರಿಗೆ 2ನೇ ಹಂತದಲ್ಲಿ ಪ್ಯಾಕೇಜ್ ರಿಲೀಸ್ ಮಾಡುತ್ತಿದ್ದೇವೆ. ಇದರಲ್ಲಿ ಸಿನಿಮಾ ತಂತ್ರಜ್ಞರು, ಕಾರ್ಮಿಕರ ಸೇರ್ಪಡೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಚಿತ್ರರಂಗದ ತಂತ್ರಜ್ಞರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ; ಸಿಎಂ ಯಡಿಯೂರಪ್ಪ ಬಳಿ ಸುನೀಲ್ ಪುರಾಣಿಕ್, ನಟಿ ತಾರಾ ಮನವಿ
Published On - 2:51 pm, Mon, 31 May 21