ಚಿತ್ರರಂಗದ ತಂತ್ರಜ್ಞರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ; ಸಿಎಂ ಯಡಿಯೂರಪ್ಪ ಬಳಿ ಸುನೀಲ್ ಪುರಾಣಿಕ್, ನಟಿ ತಾರಾ ಮನವಿ
ಕೊವಿಡ್ ಮೊದಲನೇ ಅಲೆ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲನೇ ಅಲೆ ತಣ್ಣಗಾದ ನಂತರದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುವ ಮೂಲಕ ಚಿತ್ರರಂಗ ಮತ್ತೆ ಚೇತರಿಕೆ ಕಾಣಲು ಆರಂಭವಾಗಿತ್ತು.
ಕೊವಿಡ್ ನಿಯಂತ್ರಣಕ್ಕೆ ಹೇರಲಾದ ಲಾಕ್ಡೌನ್ನಿಂದ ಚಿತ್ರರಂಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊತ್ತು ಊಟಕ್ಕೆ ಸಿನಿಮಾವನ್ನೇ ನಂಬಿಕೊಂಡಿದ್ದ ತಂತ್ರಜ್ಞರು ಈಗ ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ, ಚಿತ್ರರಂಗದ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಹಾಗೂ ಹಿರಿಯ ನಟಿ ತಾರಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ.
ಕೊವಿಡ್ ಮೊದಲನೇ ಅಲೆ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲನೇ ಅಲೆ ತಣ್ಣಗಾದ ನಂತರದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುವ ಮೂಲಕ ಚಿತ್ರರಂಗ ಮತ್ತೆ ಚೇತರಿಕೆ ಕಾಣಲು ಆರಂಭವಾಗಿತ್ತು. ಇನ್ನು, ಸಾಕಷ್ಟು ಸಿನಿಮಾಗಳು ಘೋಷಣೆ ಆಗಿ, ಶೂಟಿಂಗ್ ಕೂಡ ಶುರುವಾಗಿತ್ತು. ಹೀಗಾಗಿ, ಎಲ್ಲವೂ ಮತ್ತೆ ಮೊದಲಿನಂತಾಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಏಕಾಏಕಿ ಕೊವಿಡ್ ಎರಡನೇ ಅಲೆ ಹೆಚ್ಚಿದ್ದರಿಂದ ಚಿತ್ರರಂಗದ ತಂತ್ರಜ್ಞರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗಾಗಿ, ಇಂದು (ಮೇ 21) ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸ ಕಾವೇರಿಗೆ ತೆರಳಿ ಸುನೀಲ್ ಪುರಾಣಿಕ್ ಹಾಗೂ ಹಿರಿಯ ನಟಿ ತಾರಾ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕ್ಯಾಮರಾಮೆನ್ಗಳು ಹಾಗೂ ಲೈಟ್ಬಾಯ್ಸ್ ಸೇರಿದಂತೆ ಸಿನಿಮಾ ಕ್ಷೇತ್ರದಲ್ಲಿ ದುಡಿಯುವವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಪ್ಯಾಕೇಜ್ನಲ್ಲಿ ಹೂವು ಬೆಳೆಗಾರರು, ಆಟೋ ಚಾಲಕರಿಗೆ, ಟ್ಯಾಕ್ಸಿ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರು, ಕಲಾ ತಂಡಗಳಿಗೆ ಪರಿಹಾರ ಘೋಷಣೆ ಮಾಡಲಾಗಿತ್ತು. ಅಲ್ಲದೆ, ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಆದರೆ, ಚಿತ್ರರಂಗದ ತಂತ್ರಜ್ಞರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಆಗಿರಲಿಲ್ಲ.
ಇದನ್ನೂ ಓದಿ: ನಿರ್ದೇಶಕರಿಗೂ ಪ್ರೋತ್ಸಾಹ ಧನ ನೀಡಿ; ಸರ್ಕಾರಕ್ಕೆ ಮನವಿ ಮಾಡಿದ ಟೆಶಿ ವೆಂಕಟೇಶ್