AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಟಿಕೆಟ್ ದರ ಇಳಿಕೆ ವಿರುದ್ಧ ಅರ್ಜಿ: ಹೈಕೋರ್ಟ್​​ನಲ್ಲಿ ನಡೆದ ವಾದ-ಪ್ರತಿವಾದ ಹೀಗಿತ್ತು

Cinema Ticket Price in Karnataka: ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರಗಳನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಇದೀಗ ಸರ್ಕಾರದ ಆದೇಶದ ವಿರುದ್ಧ ಮಲ್ಟಿಪ್ಲೆಕ್ಸ್​, ಹೊಂಬಾಳೆ, ಇನ್ನೂ ಕೆಲ ನಿರ್ಮಾಪಕ ಸಂಸ್ಥೆಗಳು ಹೈಕೋರ್ಟ್​​ನಲ್ಲಿ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದು, ಇಂದು (ಸೆಪ್ಟೆಂಬರ್ 16) ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆದಿದೆ. ಮಲ್ಟಿಪ್ಲೆಕ್ಸ್​ಗಳು ಮಾಡಿರುವ ವಾದವೇನು? ಇಲ್ಲಿದೆ ಮಾಹಿತಿ...

ಸಿನಿಮಾ ಟಿಕೆಟ್ ದರ ಇಳಿಕೆ ವಿರುದ್ಧ ಅರ್ಜಿ: ಹೈಕೋರ್ಟ್​​ನಲ್ಲಿ ನಡೆದ ವಾದ-ಪ್ರತಿವಾದ ಹೀಗಿತ್ತು
Pvr Cinemas
ಮಂಜುನಾಥ ಸಿ.
|

Updated on: Sep 16, 2025 | 5:21 PM

Share

ರಾಜ್ಯ ಸರ್ಕಾರವು ಇತ್ತೀಚೆಗಷ್ಟೆ ಸಿನಿಮಾ ಟಿಕೆಟ್ ದರಗಳನ್ನು ಇಳಿಸಿ ಆದೇಶ ಹೊರಡಿಸಿತ್ತು. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳು 200 ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಸಿನಿಮಾ ಟಿಕೆಟ್​ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಕಡಿಮೆ ಸೀಟಿನ ಐಶಾರಾಮಿ ಚಿತ್ರಮಂದಿರಗಳಿಗೆ ಮಾತ್ರವೇ ಇದರಿಂದ ವಿನಾಯಿತಿ ನೀಡಲಾಗಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಸಿನಿಮಾ ಪ್ರೇಮಿಗಳು, ಫಿಲಂ ಚೇಂಬರ್ ಮತ್ತು ಕೆಲ ಹಿರಿಯ ಕಲಾವಿದರು ಸ್ವಾಗತಿಸಿದ್ದರು. ಆದರೆ ಖ್ಯಾತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್, ವಿಕೆ ಫಿಲಮ್ಸ್ ಮತ್ತು ಮಲ್ಟಿಪ್ಲೆಕ್ಸ್​​ನವರು ವಿರೋಧ ವ್ಯಕ್ತಪಡಿಸಿ, ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್​​ನಲ್ಲಿ ರಿಟ್ ಅರ್ಜಿ ಹಾಕಿದ್ದರು.

ಇಂದು ಹೈಕೋರ್ಟ್​​ನಲ್ಲಿ ಈ ಬಗ್ಗೆ ವಾದ-ಪ್ರತಿವಾದಗಳು ನಡೆದಿದ್ದು, ಮಲ್ಟಿಪ್ಲೆಕ್ಸ್​ಗಳ ಪರ ಹಿರಿಯ ವಕೀಲ ಮುಖುಲ್ ರೊಹ್ಟಗಿ ಹಾಗೂ ಧ್ಯಾನ್ ಚಿನ್ನಪ್ಪ ವಾದ ಮಾಡಿದರು. ‘ಮಲ್ಟಿಪ್ಲೆಕ್ಸ್​ ಸೇರಿದಂತೆ ಚಿತ್ರಮಂದಿರಗಳಿಗೆ 200 ರೂಪಾಯಿ ನಿಗದಿಪಡಿಸಿದೆ. ಸರ್ಕಾರ ಏಕಪಕ್ಷೀಯವಾಗಿ ದರ ನಿಗದಿ ಮಾಡಿ ಆದೇಶಿಸಿದೆ, ಸರ್ಕಾರದ ನಿಯಮ ಕಾನೂನುಬಾಹಿರವಾಗಿದೆ ಹಾಗೂ ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಯಾಗಿದೆ. 2017ರಲ್ಲಿಯೂ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿತ್ತು, 2017ರ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು, ಟಿಕೆಟ್ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟದ್ದು. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ, ಅಲ್ಲದೆ ಸಿನಿಮಾ ಹಾಲ್​ಗಳನ್ನು ನಿರ್ಮಿಸಲು ಕೋಟ್ಯಂತರ ಹಣ ವ್ಯಯಿಸಲಾಗಿದೆ. ಕಡಿಮೆ ಸೀಟುಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ, ಸೌಲಭ್ಯ ಒದಗಿಸಿರುವ ಸಂಸ್ಥೆಗಳಿಗೆ ದರ ನಿಗದಿ ಸರಿಯಲ್ಲ ವಾದ ಮಂಡಿಸಿದರು.

ಇದನ್ನೂ ಓದಿ:ಜಿಎಸ್​ಟಿ ದರ ಪರಿಷ್ಕರಣೆ: ಸಿನಿಮಾ ಟಿಕೆಟ್ ದರ ಇಳಿಕೆ, ಆದರೆ…

ಮತ್ತೊಬ್ಬ ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ಬೆಂಗಳೂರು, ಇತರೆ ಪಟ್ಟಣಗಳ ನಡುವೆ ಮೌಲ್ಯ ವ್ಯತ್ಯಾಸವಿದೆ, ಜಾಗ, ಕಟ್ಟಡದ ಮೌಲ್ಯವೂ ಬೇರೆ ಎಂಬುದನ್ನು ಸರ್ಕಾರ ಪರಿಗಣಿಸಿಲ್ಲ ಹಾಗಾಗಿ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕೆಂದು ಮನವಿ ಮಾಡಿದರು. ಬಳಿಕ ವಾದ ಮಾಡಿದ ವಕೀಲ ಧ್ಯಾನ್ ಚಿನ್ನಪ್ಪ, ‘ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕರಾಗಿದ್ದು ಕಾಂತಾರದಂತಹ ಚಿತ್ರ ನಿರ್ಮಿಸಿದ್ದಾರೆ. ಜಿಎಸ್​ಟಿ ಹೊರತುಪಡಿಸಿದ ಟಿಕೆಟ್ ದರ 200 ರೂ. ನಿಗದಿಪಡಿಸಲಾಗಿದೆ, ಇದು ವಿವೇಚನೆಯಿಲ್ಲದೇ ಸರ್ಕಾರ ಕೈಗೊಂಡ ನಿರ್ಧಾರವಾಗಿದೆ, ಸಿನಿಮಾ ನಿರ್ಮಿಸಲು ಎಷ್ಟೆಲ್ಲಾ ಶ್ರಮ, ಬಂಡವಾಳ ಬೇಕಾಗುತ್ತದೆ, ಅಂಕಿ ಅಂಶ ಸಂಗ್ರಹಿಸದೇ ಸರ್ಕಾರ ಸ್ವೇಚ್ಚೆಯ ನಿರ್ಧಾರ ಪ್ರಕಟಿಸಿದೆ. ದರ ನಿಗದಿಪಡಿಸಲು ನಿಯಮ 55ರ ಅಡಿ ಅವಕಾಶವಿಲ್ಲ’ ಎಂದಿದ್ದಾರೆ. ಬಳಿಕ ವಾದ ಮಂಡಿಸಿದ ವಕೀಲ ಡಿ.ಆರ್.ರವಿಶಂಕರ್, ‘ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ ದರಮಿತಿಯ ನಿಯಮ ರೂಪಿಸಲಾಗಿದೆ, ಇದು ಅರ್ಜಿದಾರರಿಗಿರುವ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ’ ಎಂದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಎಎಜಿ ಇಸ್ಮಾಯಿಲ್ ಜಬೀವುಲ್ಲಾ, ‘ಬಜೆಟ್‌ನಲ್ಲೇ ಸಿನಿಮಾ ಟಿಕೆಟ್ ದರ ಮಿತಿ ಬಗ್ಗೆ ಘೋಷಿಸಲಾಗಿತ್ತು, ಕರಡು ಅಧಿಸೂಚನೆಗೆ ಆಕ್ಷೇಪಣೆ ಪರಿಗಣಿಸಿ ತೀರ್ಮಾನಿಸಲಾಗಿದೆ. ಸರ್ಕಾರಕ್ಕೆ ಟಿಕೆಟ್ ದರ ನಿಗದಿಪಡಿಸುವ ಅಧಿಕಾರವಿದೆ’ ಎಂದು ವಾದಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ವಕೀಲ ವಿ.ಲಕ್ಷ್ಮೀನಾರಾಯಣ್ ವಾದ ಮಂಡಿಸಿ, ‘ವಾಣಿಜ್ಯ ಮಂಡಳಿಯ ಮನವಿಯ ಮೇರೆ ಸರ್ಕಾರವು ಟಿಕೆಟ್ ದರಗಳನ್ನು ಕಡಿಮೆಗೊಳಿಸಿದೆ’ ಎಂದರು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾ.ರವಿ ವಿ. ಹೊಸಮನಿ ಅವರಿದ್ದ ಪೀಠ, ಆದೇಶವನ್ನು ಕಾಯ್ದಿರಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ