ಒಂದಷ್ಟು ದಿನಗಳ ಹಿಂದೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಭಾರಿ ಕುತೂಹಲ ಮೂಡಿಸಿತ್ತು ‘ಕೆಂಡ’ ಸಿನಿಮಾ (Kenda Movie) ಟೀಮ್. ಆ ಬಳಿಕ ಸಿನಿಪ್ರಿಯರ ವಲಯದಲ್ಲಿ ಇದರ ಬಗ್ಗೆ ಒಂದು ಪಾಸಿಟಿವ್ ಟಾಕ್ ಶುರುವಾಗಿತ್ತು. ಅದರ ಬೆನ್ನಲ್ಲೇ ಪಾತ್ರಗಳ ಪರಿಚಯ ಮಾಡಿಸುವಂತಹ ವಿಡಿಯೋ ಅನಾವರಣ ಮಾಡಿ ಗಮನ ಸೆಳೆಯಲಾಗಿತ್ತು. ಆ ಬಳಿಕ ಟೀಸರ್ಗಾಗಿ ನಿರೀಕ್ಷೆ ಮೂಡಿತ್ತು. ನಿರೀಕ್ಷೆಯಂತೆಯೇ ‘ಕೆಂಡ’ ಸಿನಿಮಾ ಟೀಸರ್ (Kenda Movie Teaser) ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮಾಸ್ ಅಂಶಗಳು ಈ ಟೀಸರ್ನಲ್ಲಿ ಇವೆ. ಅಷ್ಟೇ ಅಲ್ಲದೇ, ಡಿಫರೆಂಟ್ ಆದಂತಹ ಕಥೆಯ ಎಳೆ ಏನು ಎಂಬುದರ ಸುಳಿವನ್ನು ಕೂಡ ಈ ಟೀಸರ್ನಲ್ಲಿ ಬಿಟ್ಟುಕೊಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಂದೇ ಬಗೆಯ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಅವುಗಳ ನಡುವೆಯೂ ಭಿನ್ನ ಪ್ರಯೋಗಗಳು ಆಗುತ್ತಿವೆ. ಅದಕ್ಕೆ ಉತ್ತಮ ಉದಾಹರಣೆಯೇ ‘ಕೆಂಡ’ ಸಿನಿಮಾ ಎಂಬ ಅಭಿಪ್ರಾಯ ಸಿನಿಪ್ರಿಯರಲ್ಲಿ ಮೂಡುವ ಮಟ್ಟಕ್ಕೆ ಈ ಟೀಸರ್ ಗಮನಾರ್ಹವಾಗಿದೆ. ಒಬ್ಬ ಸಾಮಾನ್ಯ ಹುಡುಗನು ವ್ಯವಸ್ಥೆಯ ಅಡಕತ್ತರಿಗೆ ಸಿಕ್ಕಿಕೊಂಡು ಅಸಾಮಾನ್ಯವಾಗಿ ಅಬ್ಬರಿಸುವ ಕಥೆಯೇ ‘ಕೆಂಡ’ ಸಿನಿಮಾದ ಜೀವಾಳ ಎಂದು ಚಿತ್ರತಂಡ ಹೇಳಿಕೊಂಡಿದೆ.
ಟೀಸರ್ನ ಜೊತೆ ಚಿತ್ರತಂಡವೇ ಕೆಲವೊಂದು ಮಾಹಿತಿಗಳನ್ನು ಬಿಟ್ಟುಕೊಟ್ಟಿದೆ. ‘ಕೆಂಡ’ ಸಿನಿಮಾದ ಫ್ಲೇವರ್ ಹೇಗಿರಲಿದೆ ಎಂಬುದು ಇದರಿಂದ ಗೊತ್ತಾಗಿದೆ. ಹಾಗಂತ ಟೀಸರ್ನಲ್ಲಿ ಪೂರ್ತಿ ಕಥೆ ಬಯಲಾಗಿಲ್ಲ. ಕುತೂಹಲ ಸೃಷ್ಟಿಸುವಲ್ಲಿ ಈ ಟೀಸರ್ ಯಶಸ್ವಿಯಾಗಿದೆ. ಈ ಮೊದಲು ‘ಗಂಟುಮೂಟೆ’ ಸಿನಿಮಾ ಮಾಡಿದ್ದ ತಂಡವೇ ಸೇರಿಕೊಂಡು ಈಗ ‘ಕೆಂಡ’ ಸಿನಿಮಾವನ್ನು ಜನರ ಮುಂದಿಡಲು ಬರುತ್ತಿದೆ. ಆ ಕಾರಣದಿಂದಲೂ ಈ ಸಿನಿಮಾ ವಿಶೇಷ ಎನಿಸಿಕೊಂಡಿದೆ. ‘ಗಂಟುಮೂಟೆ’ ಸಿನಿಮಾದ ನಿರ್ದೇಶಕಿ ರೂಪಾ ರಾವ್ ಅವರು ‘ಕೆಂಡ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ‘ಕೆಂಡ’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಹೊಸ ವಿಡಿಯೋ ಬಿಡುಗಡೆ; ಇಲ್ಲಿದೆ ಝಲಕ್
‘ಗಂಟುಮೂಟೆ’ ಚಿತ್ರದ ಛಾಯಾಗ್ರಾಹಕರಾಗಿ, ‘ಅಮೇಯುಕ್ತಿ ಸ್ಟುಡಿಯೋಸ್’ ಮೂಲಕ ನಿರ್ಮಾಣದಲ್ಲೂ ಭಾಗಿ ಆಗಿದ್ದ ಸಹದೇವ್ ಕೆಲವಡಿ ಅವರು ಈಗ ‘ಕೆಂಡ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಕಲಾವಿದರೇ ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗೋಪಾಲ ದೇಶಪಾಂಡೆ, ಬಿ.ವಿ. ಭರತ್, ವಿನೋದ್ ರವೀಂದ್ರನ್, ಪ್ರಣವ್ ಶ್ರೀಧರ್ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ ಅವರು ‘ಕೆಂಡ’ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ ಎಂಬುದು ವಿಶೇಷ. 2 ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಶ್ರೇಯಾಂಕ್ ನಂಜಪ್ಪ ಅವರು ಈ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.