ಭಾರತೀಯ ಚಿತ್ರರಂಗದಲ್ಲಿ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ. ಈ ಸಿನಿಮಾದಲ್ಲಿ ನಟಿಸಿದ ಎಲ್ಲರಿಗೂ ಜನಪ್ರಿಯತೆ ಹೆಚ್ಚಿದೆ. ಎಲ್ಲ ಕಲಾವಿದರ ಪಾತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಮಹತ್ವ ನೀಡಿದ್ದಾರೆ. ಅದರಲ್ಲೂ ಪ್ರಧಾನ ಮಂತ್ರಿ ರಮಿಕಾ ಸೇನ್ (Ramika Sen) ಆಗಿ ಕಾಣಿಸಿಕೊಂಡಿರುವ ರವೀನಾ ಟಂಡನ್ ಅವರ ಪಾತ್ರವನ್ನು ನೋಡಿ ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರವೀನಾ ಟಂಡನ್ (Raveena Tandon) ಅವರಿಗೆ ಇದು ಎರಡನೇ ಸಿನಿಮಾ. ಈ ಮೊದಲು ‘ಉಪೇಂದ್ರ’ ಚಿತ್ರದಲ್ಲಿ ನಟಿಸಿದ್ದಾಗಲೂ ಅವರಿಗೆ ಇದೇ ರೀತಿಯ ಗೆಲುವು ಸಿಕ್ಕಿತ್ತು. ಈಗ ಎರಡನೇ ಬಾರಿಗೆ ಅವರು ಕನ್ನಡ ಸಿನಿಮಾ ಮೂಲಕ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾಗೆ ಜನರಿಂದ ಯಾವ ಪರಿ ಪ್ರೀತಿ ಸಿಗುತ್ತಿದೆ ಎಂಬುದನ್ನು ವಿವರಿಸಲು ಅವರೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ರವೀನಾ ಟಂಡನ್ ಫ್ಯಾನ್ಸ್ ವಲಯದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
‘ಕೆಜಿಎಫ್ 2’ ಸಿನಿಮಾ ಹಿಂದಿಗೂ ಡಬ್ ಆಗಿ ತೆರೆಕಂಡಿದ್ದು, ಉತ್ತರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾಸ್ ಪ್ರೇಕ್ಷಕರು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ರವೀನಾ ಟಂಡನ್ ಅವರ ಪಾತ್ರ ತೆರೆ ಮೇಲೆ ಬಂದಾಗ ಅವರ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ. ಅಷ್ಟೇ ಅಲ್ಲ, ಕೆಲವರು ಥಿಯೇಟರ್ ಪರದೆಗೆ ದುಡ್ಡು ಎಸೆದಿದ್ದಾರೆ. ಅಭಿಮಾನಿಗಳು ನಾಣ್ಯಗಳನ್ನು ಎಸೆಯುತ್ತಿರುವ ವಿಡಿಯೋವನ್ನು ರವೀನಾ ಟಂಡನ್ ಶೇರ್ ಮಾಡಿಕೊಂಡಿದ್ದಾರೆ.
‘ತುಂಬ ಸಮಯದ ಬಳಿಕ ಜನರು ನಾಣ್ಯ ಎಸೆಯುವುದನ್ನು ನೋಡುತ್ತಿದ್ದೇನೆ’ ಎಂದು ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ರವೀನಾ ಟಂಡನ್ ಹಂಚಿಕೊಂಡಿರುವ ವಿಡಿಯೋದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಮೇಕಿಂಗ್ ತುಣುಕುಗಳು ಕೂಡ ಇವೆ. ಕೊನೇ ದಿನ, ಕೊನೆಯ ಶಾಟ್ ಚಿತ್ರೀಕರಿಸುವಾಗ ಪ್ರಶಾಂತ್ ನೀಲ್ ಮತ್ತು ಇತರೆ ತಂತ್ರಜ್ಞರ ಜೊತೆ ಶೂಟಿಂಗ್ ಸೆಟ್ನಲ್ಲಿ ಯಾವ ರೀತಿಯ ಬಾಂಧವ್ಯ ಇತ್ತು ಎಂಬುದನ್ನು ಅವರು ಈ ವಿಡಿಯೋ ಮೂಲಕ ವಿವರಿಸಿದ್ದಾರೆ. ಈ ಸಿನಿಮಾದಿಂದ ರವೀನಾ ಟಂಡನ್ ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ಅವರ ವೃತ್ತಿಜೀವನದ ಮೈಲೇಜ್ ಹೆಚ್ಚಿದೆ.
ಈ ವಿಡಿಯೋ ನೋಡಿದ ಅಭಿಮಾನಿಗಳು ಅನೇಕ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ನೀವು ಕೆಜಿಎಫ್ ಮೊದಲ ಪಾರ್ಟ್ನಲ್ಲಿಯೂ ಇರಬೇಕಿತ್ತು’ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ‘ಕೆಜಿಎಫ್ 3’ ಕೂಡ ಬರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಮತ್ತೆ ರವೀನಾ ಟಂಡನ್ ಅವರನ್ನು ಅದೇ ಅವತಾರದಲ್ಲಿ ನೋಡುವ ಅವಕಾಶ ಸಿಗುತ್ತದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕೂಡ ನಟಿಸಿದ್ದು, ಅವರಿಗೂ ಪ್ರೇಕ್ಷಕರಿಂದ ಇಷ್ಟೇ ಪ್ರಮಾಣದ ಪ್ರೀತಿ ಸಿಗುತ್ತಿದೆ.
ಹಿಂದಿ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮೋಡಿ ಮಾಡುತ್ತಿದೆ. ಐದು ದಿನಕ್ಕೆ 219 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 6 ಮತ್ತು 7ನೇ ದಿನ ಕೂಡ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಭರ್ಜರಿ ಲಾಭ ಆಗಿದೆ.
ಇದನ್ನೂ ಓದಿ:
ಸೌತ್ ಚಿತ್ರಗಳ ಎದುರು ಬಾಲಿವುಡ್ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್ 2’ ಅಧೀರ ಸಂಜಯ್ ದತ್