ಪುಣೆಯಲ್ಲಿ ‘ಕೆಜಿಎಫ್​ 2’ ಟಿಕೆಟ್​ ಸಿಗದೇ ವಿಮಾನ ಹತ್ತಿ ಬೆಂಗಳೂರಿಗೆ ಬಂದ ಲೇಡಿ ಫ್ಯಾನ್ಸ್​​: ಆಹಾ ಅಭಿಮಾನ

KGF Chapter 2: ಭಾರತದ ಎಲ್ಲ ನಗರಗಳಲ್ಲೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಧೂಳೆಬ್ಬಿಸಲು ಸಜ್ಜಾಗಿದೆ. ಹಿಂದಿ ಪ್ರೇಕ್ಷಕರು ಈ ಚಿತ್ರ ನೋಡಲು ಬೆಂಗಳೂರಿಗೆ ಬಂದಿದ್ದಾರೆ.

ಪುಣೆಯಲ್ಲಿ ‘ಕೆಜಿಎಫ್​ 2’ ಟಿಕೆಟ್​ ಸಿಗದೇ ವಿಮಾನ ಹತ್ತಿ ಬೆಂಗಳೂರಿಗೆ ಬಂದ ಲೇಡಿ ಫ್ಯಾನ್ಸ್​​: ಆಹಾ ಅಭಿಮಾನ
ಯಶ್

Updated on: Apr 13, 2022 | 4:39 PM

ನಟ ಯಶ್​ (Yash) ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ದೇಶದ ಹಲವು ನಗರಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಎಷ್ಟರಮಟ್ಟಿಗೆ ಕ್ರೇಜ್​ ಸೃಷ್ಟಿ ಆಗಿದೆ ಎಂದರೆ ಮೊದಲ ದಿನದ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಹೇಗಾದರೂ ಮಾಡಿ ಮೊದಲೇ ದಿನ ಮೊದಲ ಶೋ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳೆಲ್ಲರೂ ಮುಗಿಬಿದ್ದು ಟಿಕೆಟ್​ ಬುಕ್​ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ. ಅಚ್ಚರಿ ಏನೆಂದರೆ ಪುಣೆಯಲ್ಲಿ ‘ಕೆಜಿಎಫ್​ 2’ (KGF 2) ಸಿನಿಮಾದ ಟಿಕೆಟ್​ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮಹಿಳಾ ಅಭಿಮಾನಿಗಳು ಬೆಂಗಳೂರಿಗೆ ಬಂದಿದ್ದಾರೆ. ವಿಮಾನದ ಮೂಲಕ ಬಂದಿರುವ ದೀಪ್ತಿ ಮತ್ತು ಅವರ ಸಹೋದ್ಯೋಗಿಗಳು ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ನಿರ್ಧರಿಸಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಇಲ್ಲಿ ಫ್ಯಾನ್ಸ್​ ಶೋ ಆರಂಭ ಆಗಲಿದೆ. ಆ ಬಳಿಕ ಮತ್ತೊಂದು ಶೋ ಪ್ರದರ್ಶನಗೊಳ್ಳಲಿದ್ದು, ಅದರ ಟಿಕೆಟ್​ ಅನ್ನು ದೀಪ್ತಿ ಬುಕ್​ ಮಾಡಿದ್ದಾರೆ.

ಕನ್ನಡದಿಂದ ಸಿನಿಮಾ ಜರ್ನಿ ಆರಂಭಿಸಿದ ನಟ ಯಶ್​ ಅವರು ಈಗ ದೇಶವ್ಯಾಪಿ ಹವಾ ಸೃಷ್ಟಿ ಮಾಡಿದ್ದಾರೆ. ಅವರು ಬಾಲಿವುಡ್​ ಸಿನಿಮಾದಲ್ಲಿ ನಟಿಸಿಲ್ಲವಾದರೂ ಯಾವ ಹಿಂದಿ ಹೀರೋಗಳಿಗೂ ಕಡಿಮೆ ಇಲ್ಲದಷ್ಟು ಜನಪ್ರಿಯತೆ ಸಂಪಾದನೆ ಮಾಡಿದ್ದಾರೆ. ಉತ್ತರ ಭಾರತದ ಮಂದಿ ಕೂಡ ಯಶ್​ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಮುಂಬೈ, ಪುಣೆ, ದೆಹಲಿ ಮುಂತಾದ ಕಡೆಗಳಲ್ಲಿ ಯಶ್​ ಅವರ ಪೋಸ್ಟರ್​ಗಳು ರಾರಾಜಿಸುತ್ತಿವೆ. ಪುಣೆಯಲ್ಲಿ ಬಹುತೇಕ ಎಲ್ಲ ಶೋಗಳ ಟಿಕೆಟ್​ ಸೋಲ್ಡ್​ ಔಟ್​ ಆಗುತ್ತಿದೆ. ಮುಂಜಾನೆ ಶೋಗೆ ಟಿಕೆಟ್​ ಸಿಕ್ಕಿಲ್ಲ ಎಂಬ ಕಾರಣಕ್ಕೆ ದೀಪ್ತಿ ಮತ್ತು ಅವರ ಸ್ನೇಹಿತರು ವಿಮಾನ ಹತ್ತಿ ಬೆಂಗಳೂರಿಗೆ ಬಂದಿರುವುದು ವಿಶೇಷ.

ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗು ಹಿಂದಿ ಭಾಷೆಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತೆರೆಕಾಣುತ್ತಿದೆ. ಸಂಜಯ್​ ದತ್​, ರವೀನಾ ಟಂಡನ್​ ಅವರ ಆಗಮನದಿಂದಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಈ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಸಿನಿಮಾದ ಕಥೆಗೆ ಮುಂಬೈ ಟಚ್​ ಇದೆ. ಇನ್ನು ಮುಂಬೈನ ಪ್ರಮುಖ ಸ್ಥಳಗಳಲ್ಲಿ ‘ಕೆಜಿಎಫ್​ 2’ ಪೋಸ್ಟರ್​ಗಳು ರಾರಾಜಿಸುತ್ತಿವೆ. ಅಲ್ಲಿನ ಚಿತ್ರಮಂದಿರಗಳಲ್ಲಿ ಯಶ್​ ಕಟೌಟ್​ಗಳನ್ನು ನಿಲ್ಲಿಸಲಾಗಿದೆ. ಆ ಮೂಲಕ ಜನರು ಅಭಿಮಾನ ಪ್ರದರ್ಶಿಸುತ್ತಿದ್ದಾರೆ.

ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ವಿಜಯ್​ ಕಿರಗಂದೂರು ಅವರು ಬಂಡವಾಳ ಹೂಡಿದ್ದಾರೆ. ಯಶ್​ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಪ್ರಕಾಶ್​ ರೈ, ರಾವ್​ ರಮೇಶ್​ ಮುಂತಾದ ಅನುಭವಿ ಕಲಾವಿದರಿಂದಾಗಿ ಸಿನಿಮಾದ ಚಾರ್ಮ್​ ಹೆಚ್ಚಿದೆ. ಫಸ್ಟ್​ ಡೇ ಫಸ್ಟ್​ ಶೋ ಸೆಲೆಬ್ರೇಷನ್​ ಆರಂಭ ಆಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ವಿದೇಶದಲ್ಲೂ ಕೂಡ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಅಬ್ಬರಿಸಲಿದೆ.

ಇದನ್ನೂ ಓದಿ:

ದೇವರ ಎದುರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಪೋಸ್ಟರ್​ ಇಟ್ಟು ಪೂಜೆ ಮಾಡಿದ ಯಶ್​ ಅಭಿಮಾನಿಗಳು

ಸುನಾಮಿ ಸೃಷ್ಟಿ ಮಾಡಲಿದೆ ‘ಕೆಜಿಎಫ್​: ಚಾಪ್ಟರ್ 2’ ಚಿತ್ರ: ಮೊದಲ ದಿನ ಆಗುವ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು?

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us