ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಜಾಗ ಖರೀದಿಸಿದ ಕಿಚ್ಚ ಸುದೀಪ್

ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಆಗಬೇಕು ಎಂಬ ಆಶಯಕ್ಕೆ ಈಗ ಬಲ ಬಂದಿದೆ. ನಟ ಕಿಚ್ಚ ಸುದೀಪ್ ಅವರು ಕೆಂಗೇರಿ ಬಳಿ ವಿಷ್ಣುರ್ಧನ್ ಸ್ಮಾರಕ ನಿರ್ಮಾಣಕ್ಕೆ ಜಾಗ ಖರೀದಿ ಮಾಡಿದ್ದಾರೆ.

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಜಾಗ ಖರೀದಿಸಿದ ಕಿಚ್ಚ ಸುದೀಪ್
Veerakaputra Srinivas, Kichcha Sudeep

Updated on: Aug 18, 2025 | 9:57 PM

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ (Vishnuvardhan Samadhi) ಇತ್ತೀಚೆಗೆ ನೆಲಸಮ ಆಯಿತು. ಇದರಿಂದ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟಾಯಿತು. ವಿಷ್ಣು ಅಭಿಮಾನಿಗಳಲ್ಲಿ ಒಬ್ಬರಾಗಿರುವ ನಟ ಸುದೀಪ್ (Kichcha Sudeep) ಅವರಿಗೆ ಕೂಡ ನೋವಾಗಿದೆ. ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಲ್ಲಿ ನಿರ್ಮಾಣ ಆಗಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದೆ. ಅದಕ್ಕಾಗಿ ವಿಷ್ಣು ಅಭಿಮಾನಿಗಳು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಕೆಂಗೇರಿ ಬಳಿ ಅರ್ಧ ಎಕರೆ ಜಾಗವನ್ನು ಖರೀದಿ ಮಾಡಿದ್ದಾರೆ. ಆ ಬಗ್ಗೆ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

‘ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಪುಣ್ಯಭೂಮಿಯಲ್ಲಿ ನಮಗೆ ದರ್ಶನಕ್ಕೆ ಜಾಗ, ಅವಕಾಶ ಇಲ್ಲ. ಸೆಪ್ಟೆಂಬರ್ 18ರಂದು ನಾವೆಲ್ಲರೂ ಯಜಮಾನರನ್ನು ಬೆಂಗಳೂರಿನಲ್ಲಿ ಎಲ್ಲಿ ಹೋಗಿ ನೋಡಬೇಕು ಎಂದರೆ ಉತ್ತರ ಇಲ್ಲ. ಹಾಗಾಗಿ ಈ ವಿಷಯಕ್ಕೆ ನಾವು ಆದಷ್ಟು ಬೇಗ ತಾರ್ಕಿಕ ಅಂತ್ಯ ಕಾಣಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಆ ನಿಟ್ಟಿನಲ್ಲಿ ನಾವು ಕೆಲಸ ಕೂಡ ಮಾಡುತ್ತಿದ್ದೇವೆ’ ಎಂದು ವೀರಕಪುತ್ರ ಶ್ರೀನಿವಾಸ್ ಅವರು ಹೇಳಿದ್ದಾರೆ.

‘ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಡೀ ಅಭಿಮಾನ್ ಸ್ಟುಡಿಯೋದ ಜಾಗವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಆ ಜಾಗವನ್ನು ಮುಟ್ಟುಗೋಲು ಹಾಕಿಕೊಂಡು ಅದರ ಮೂಲ ಉದ್ದೇಶವಾದ ಸ್ಟುಡಿಯೋ ಉಳಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿ ನಾವು ಹೋರಾಟ ಮಾಡುತ್ತೇವೆ’ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್.

ಇದನ್ನೂ ಓದಿ
ತೆಲುಗಿನ ಈ ಸ್ಟಾರ್ ನಟನಿಗೂ ವಿಷ್ಣುವರ್ಧನ್​ಗೂ ಇರುವ ನಂಟು ಗೊತ್ತೆ?
ಪೂಜೆಗೆ ಸಿಗದ ಅವಕಾಶ: ವಿಷ್ಣು ಸಮಾಧಿ ಬಳಿ ಅಭಿಮಾನಿಗಳ ಗಲಾಟೆ
ವಿಷ್ಣುವರ್ಧನ್​ಗೆ ಆ ಒಂದು ವಿಚಾರದಲ್ಲಿ ಇತ್ತು ಕೊರಗು; ಕೊನೆಗೂ ಈಡೇರಲಿಲ್ಲ
ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಹಿರಿಯ ನಿರ್ದೇಶಕ ಹೇಳಿದ್ದೇನು?

‘ಕಿಚ್ಚ ಸುದೀಪ್ ಅವರು ಬಹಳ ದೊಡ್ಡ ನಡೆಯನ್ನು ಘೋಷಣೆ ಮಾಡಿದ್ದಾರೆ. ಕೆಂಗೇರಿಯ ಹತ್ತಿರ ಅರ್ಧ ಎಕರೆ ಜಾಗವನ್ನು ಸುದೀಪ್ ಅವರು ಖರೀದಿ ಮಾಡಿದ್ದಾರೆ. ಅಲ್ಲಿಯೇ ಡಾ. ವಿಷ್ಣುವರ್ಧನ್ ಅವರ ಸ್ಮಾರಕ, ದರ್ಶನ ಕೇಂದ್ರ ಆಗಲಿದೆ. ಶೀಘ್ರದಲ್ಲೇ ಅದರ ನಿರ್ಮಾಣ ಕಾರ್ಯವನ್ನು ಆರಂಭಿಸುತ್ತೇವೆ. ಸೆಪ್ಟೆಂಬರ್ 18ಕ್ಕೆ ನಾವು ಅಡಿಗಲ್ಲು ಹಾಕುತ್ತೇವೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಸ್ಮಾರಕದ ಮಾಡೆಲ್ ಬಿಡುಗಡೆ ಮಾಡುತ್ತೇವೆ’ ಎಂದು ವೀರಕಪುತ್ರ ಶ್ರೀನಿವಾಸ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?

‘ಹಾಗಂತ ಇದನ್ನು ಪುಣ್ಯಭೂಮಿಗೆ ಸಮಾನ ಅಂತ ನಾನು ವಾದ ಮಾಡಲ್ಲ. ಮೈಸೂರಿನಲ್ಲಿ ಇರುವ ಸ್ಮಾರಕಕ್ಕೆ ಸಮ ಎಂದು ಕೂಡ ಹೇಳುವುದಿಲ್ಲ. ಅದಕ್ಕೆ ಅದರದ್ದೇ ಆದ ಘನತೆ ಇದೆ. ಅದು ಸರ್ಕಾರದಿಂದ ನಿರ್ಮಾಣ ಆಗಿದ್ದು. ಇದು ಅಸಂಖ್ಯಾತ ಅಭಿಮಾನಿಗಳ ಭಾವನೆ ಬೆಸೆದಿರುವ ಜಾಗ. ಈ ದರ್ಶನ ಕೇಂದ್ರದಲ್ಲಿ ಏನೆಲ್ಲ ಇರಲಿದೆ ಎಂಬುದನ್ನು ಸೆ.2ಕ್ಕೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.