
ನಟ ಕಿಚ್ಚ ಸುದೀಪ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಪ್ರತಿ ವರ್ಷ ಅವರ ಬರ್ತ್ಡೇ ಅಚರಿಸಲು ಎಲ್ಲರೂ ಕಾಯುತ್ತಿರುತ್ತಾರೆ. ಒಂದು ತಿಂಗಳು ಮುನ್ನವೇ ಅದಕ್ಕಾಗಿ ತಯಾರಿ ನಡೆಯುತ್ತದೆ. ನೆಚ್ಚಿನ ನಟನನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬರುತ್ತಾರೆ. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಈ ಎಲ್ಲ ಸಂಭ್ರಮಗಳಿಗೂ ಕಳೆದ ವರ್ಷದಿಂದ ಬ್ರೇಕ್ ಬಿದ್ದಿದೆ. ಈ ವರ್ಷ ಕೂಡ ಫ್ಯಾನ್ಸ್ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಸುದೀಪ್ ನಿರ್ಧರಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಮುಂಚಿತವಾಗಿ ತಿಳಿಸಿದ್ದಾರೆ.
ಸೆ.2ರಂದು ಸುದೀಪ್ ಜನ್ಮದಿನ. ಅಂದು ಅವರನ್ನು ಭೇಟಿ ಆಗಬೇಕು ಎಂಬುದು ಲಕ್ಷಾಂತರ ಅಭಿಮಾನಿಗಳ ಬಯಕೆ. ಆದರೆ ಕೊವಿಡ್ ಕಾರಣದಿಂದ ಸುದೀಪ್ ಯಾರನ್ನೂ ಭೇಟಿ ಆಗುತ್ತಿಲ್ಲ. ‘ನನ್ನೆಲ್ಲ ಅಭಿಮಾನಿ ಸ್ನೇಹಿತರಲ್ಲಿ ಮನವಿ. ಕೊವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರನ್ನು ಭೇಟಿ ಆಗಲು ಆಗುತ್ತಿಲ್ಲ. ಕ್ಷಮೆ ಇರಲಿ. ಮುಂದೆ ಪರಿಸ್ಥಿತಿ ಸುಧಾರಿಸಿದ ನಂತರ ನಿಮ್ಮೆಲ್ಲರನ್ನೂ ಭೇಟಿ ಆಗುತ್ತೇನೆ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ’ ಎಂದು ಸುದೀಪ್ ಅವರು ‘ಕಿಚ್ಚ ಕ್ರಿಯೇಷನ್’ ಟ್ವಿಟರ್ ಖಾತೆ ಮೂಲಕ ಸಂದೇಶ ನೀಡಿದ್ದಾರೆ.
ಸುದೀಪ್ ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಕೂಡ ಹುಟ್ಟುಹಬ್ಬದ ಆಚರಣೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಸ್ಟಾರ್ ನಟರ ಬರ್ತ್ಡೇ ಸೆಲೆಬ್ರೇಷನ್ ಎಂದರೆ ಅಲ್ಲಿ ಸಾವಿರಾರು ಜನರು ಸೇರುತ್ತಾರೆ. ಅದರಿಂದ ಕೊವಿಡ್ ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಹಾಗಾಗಿ ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಸಂಭ್ರಮಾಚರಣೆಗೆ ಬ್ರೇಕ್ ಹಾಕುವುದೇ ಉತ್ತಮ ಎಂದು ಎಲ್ಲ ಸೆಲೆಬ್ರಿಟಿಗಳು ಕಳೆದೊಂದು ವರ್ಷದಿಂದ ನಿರ್ಧರಿಸಿ, ಅದನ್ನೇ ಪಾಲಿಸುತ್ತ ಬಂದಿದ್ದಾರೆ.
ಸದ್ಯ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾಗೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ತಮಿಳು ನಿರ್ದೇಶಕ ವೆಂಕಟ್ ಪ್ರಭು ಅವರ ಜೊತೆಗೆ ಸುದೀಪ್ ಫೋಟೋ ವೈರಲ್ ಆಗಿತ್ತು. ಅವರಿಬ್ಬರ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಬಹುದು ಎಂಬ ನಿರೀಕ್ಷೆ ಇದೆ. ಅದೇ ರೀತಿ, ‘ವಿಕ್ರಾಂತ್ ರೋಣ’ ಮತ್ತು ‘ಕೋಟಿಗೊಬ್ಬ 3’ ಸಿನಿಮಾ ತಂಡಗಳಿಂದಲೂ ಗಿಫ್ಟ್ ರೂಪದಲ್ಲಿ ಹೊಸ ಟೀಸರ್ ಅಥವಾ ಪೋಸ್ಟರ್ಗಳು ಬಿಡುಗಡೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ಸುದೀಪ್ ಮುಂದಿನ ಸಿನಿಮಾ ಯಾವುದು? ಫೋಟೋ ಮೂಲಕ ಸುಳಿವು ನೀಡಿದ ಕಾಲಿವುಡ್ ನಿರ್ದೇಶಕ
ಕಿಚ್ಚ ಸುದೀಪ್ ಕುಟುಂಬದಲ್ಲಿ ಮದುವೆ ಸಂಭ್ರಮ; ಇಲ್ಲಿವೆ ಕಲರ್ಫುಲ್ ಫ್ಯಾಮಿಲಿ ಫೋಟೋಗಳು