Kichcha Sudeep: ಅಹೋರಾತ್ರ ಮನೆಗೆ ಕಿಚ್ಚನ ಫ್ಯಾನ್ಸ್ ಹೋಗಿದ್ದು ಯಾಕೆ? ಕಾರಣ ತಿಳಿಸಿದ ಸುದೀಪ್ ಅಭಿಮಾನಿ ಜಗದೀಶ್!
Ahoratra: ‘ಕ್ಷಮೆ ಕೇಳಿಸಲು ನಾವು ಅಹೋರಾತ್ರ ಮನೆಗೆ ಹೋದಾಗ ಅಲ್ಲಿಗೆ ಪೊಲೀಸರು ಬರೋಕೆ 25 ನಿಮಿಷ ಆಯಿತು. ಹೊಡೆಯುವ ಉದ್ದೇಶ ಇದ್ದಿದ್ದರೆ ನಮಗೆ 25 ನಿಮಿಷ ಬೇಕಿತ್ತಾ’ ಎಂದು ಸುದೀಪ್ ಅಭಿಮಾನಿ ಜಗದೀಶ್ ಪ್ರಶ್ನಿಸಿದ್ದಾರೆ.
ಸುದೀಪ್ ಅಭಿಮಾನಿಗಳು ಬರಹಗಾರ ಅಹೋರಾತ್ರ ಅವರ ಮನೆಗೆ ತೆರಳಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಶನಿವಾರ (ಮಾ.20) ಕೇಳಿಬಂದಿತ್ತು. ಫೇಸ್ಬುಕ್ನಲ್ಲಿ ಆಹೋರಾತ್ರ ಮಾಡಿದ ಲೈವ್ ಕೂಡ ಸಖತ್ ವೈರಲ್ ಆಗಿದೆ. ಅದಕ್ಕೆ ಸಂಬಂಧಿಸಿದಂತೆ ಭಾನುವಾರ (ಮಾ.21) ಸುದೀಪ್ ಅಭಿಮಾನಿ ಜಗದೀಶ್ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾವು ಅಹೋರಾತ್ರ ಮನೆಗೆ ತೆರಳಿದ್ದು ಯಾಕೆ ಎಂದು ವಿವರಿಸಿದ್ದಾರೆ. ಘಟನೆಯ ಹಿನ್ನಲೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
‘ಸುದೀಪ್ ಅಣ್ಣನ ಒಂದು ಜಾಹೀರಾತಿನ ಬಗ್ಗೆ ಅಹೋರಾತ್ರ ಧ್ವನಿ ಎತ್ತಿದ್ದ. ಆದರೆ ಕಂಪನಿ ವಿರುದ್ಧ ಮಾತನಾಡುವ ಬದಲು ಸುದೀಪ್ ವಿರುದ್ಧ ವೈಯಕ್ತಿಕವಾಗಿ ಪೋಸ್ಟ್ಗಳನ್ನು ಹಾಕಿದ್ದ. ತೇಜೋವಧೆ ಮಾಡುತ್ತಲೇ ಬಂದಿದ್ದಾನೆ. ನೇರವಾಗಿ ಸುದೀಪ್ ಹೆಸರು ಹೇಳಿ ಕೆಟ್ಟದಾಗಿ ಮಾತನಾಡಲು ಶುರುಮಾಡಿದ್ದಾನೆ. ಅಭಿಮಾನಿಗಳು ಎಷ್ಟು ಅಂತ ಸುಮ್ಮನಿರುತ್ತಾರೆ? ದೇಶಾದ್ಯಂತ ಸುದೀಪ್ಗೆ ಫ್ಯಾನ್ಸ್ ಇದ್ದಾರೆ. ನಿಮ್ಮ ಮನೆಯಲ್ಲಿ ಪ್ರೀತಿಸುವ ವ್ಯಕ್ತಿಯನ್ನು ಯಾವನೋ ದಾರಿಯಲ್ಲಿ ಹೋಗುವ ವ್ಯಕ್ತಿ ಬೈಯ್ದರೆ ನೀವು ಸುಮ್ಮನೆ ಇರುತ್ತೀರಾ? ನಾವು ಪ್ರೀತಿಸುವ ವ್ಯಕ್ತಿಯ ಹೆಸರಿಗೆ ಕಳಂಕ ತರಲು ಪ್ರಯತ್ನಿಸಿದಾಗ ಯಾವ ಅಭಿಮಾನಿಯೂ ಸುಮ್ಮನಿರಲ್ಲ’ ಎಂದಿದ್ದಾರೆ ಜಗದೀಶ್.
‘ಇಷ್ಟು ದಿನ ಈತನ ಮೇಲೆ ನಾವು ಯಾಕೆ ಕ್ರಮ ಕೈಗೊಳ್ಳಲು ಸಾಧ್ಯ ಆಗಿರಲಿಲ್ಲ ಎಂದರೆ, ಈತ ಇರುವುದು ಬಾಂಬೆಯಲ್ಲಿ. ಅದು ಇವನಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಈಗ ಬೆಂಗಳೂರಿಗೆ ಬಂದಿದ್ದಾನೆ ಎಂಬುದು ವಿಷಯ ಗೊತ್ತಾಗಿ, ಇವನ ಕೈಯಲ್ಲಿ ಕ್ಷಮೆ ಕೇಳಿಸಬೇಕು ಎಂಬ ಉದ್ದೇಶದಿಂದ ನಾವು ಅವನ ಮನೆಗೆ ಹೋಗಿದ್ವಿ. ಅವನು ಫೇಸ್ಬುಕ್ನಲ್ಲಿ ಸುಳ್ಳು ಹೇಳಿದ್ದಾನೆ. ಅಲ್ಲಿರುವವರೆಲ್ಲ ರೌಡಿಗಳ ಥರ ಇದ್ದರು. ತಾನೇ ಗ್ಲಾಸ್ ಒಡೆದು ಹಾಕಿದ್ದಾನೆ. ಅದರ ವಿಡಿಯೋ ನಮ್ಮ ಬಳಿ ಇದೆ. ಖಾರದ ಪುಡಿ ತಂದಿದ್ವಿ ಅಂತ ಹೇಳಿದ್ದಾನೆ. ಎಲ್ಲರೂ ಸುಳ್ಳುಗಾರರು. ಕ್ಷಮೆ ಕೇಳಿಸಲು ನಾವು ಅವನ ಮನೆ ಹೋದಾಗ ಅಲ್ಲಿಗೆ ಪೊಲೀಸರು ಬರೋಕೆ 25 ನಿಮಿಷ ಆಯಿತು. ಹೊಡೆಯುವ ಉದ್ದೇಶ ಇದ್ದಿದ್ದರೆ ನಮಗೆ 25 ನಿಮಿಷ ಬೇಕಿತ್ತಾ’ ಎಂದು ಜಗದೀಶ್ ಪ್ರಶ್ನಿಸಿದ್ದಾರೆ.
’ಕ್ಷಮೆ ಕೇಳು ಎಂದು ಶಾಂತ ರೀತಿಯಿಂದಲೇ ನಾವು ಹೇಳಿದ್ವಿ. ಆದರೆ ಅವನು ಕೇಳಲಿಲ್ಲ. ಅವನು ಈಗ ಪೊಲೀಸರ ವಿರುದ್ಧ ಎತ್ತಿಕಟ್ಟುತ್ತಿದ್ದಾನೆ. ಸಮಾಜದ ಸ್ವಾಸ್ಥ್ಯ ಕದಡುವಂತಹ ವ್ಯಕ್ತಿ ಇವನು. ಈತನಿಗೆ ಯಾವ ರೀತಿ ಬುದ್ಧಿ ಕಲಿಸುವುದೋ ಗೊತ್ತಾಗುತ್ತಿಲ್ಲ. ಕಾನೂನಿನ ಮೂಲಕವೇ ಕ್ರಮ ಕೈಗೊಳ್ಳಬೇಕು. ಅಲ್ಲಿಗೆ ಹೋದವರನ್ನು ಗೂಂಡಾಗಳು ಎಂದಿದ್ದಾನೆ. ಆದರೆ ಅವರು ಯಾರೂ ಗೂಂಡಾಗಳಲ್ಲ’ ಎಂದು ಜಗದೀಶ್ ಸ್ವಷ್ಟನೆ ನೀಡಿದ್ದಾರೆ.
’ಅಲ್ಲಿಗೆ ಹೋದವರೆಲ್ಲ ಸುದೀಪ್ ಅಣ್ಣನ ಅಭಿಮಾನಿಗಳು. ಯಾರು ಅಂತ ನಾನು ಹೇಳುತ್ತೇನೆ. 16 ಹೋಟೆಲ್ಗಳ ಮಾಲಿಕ ನವೀನ್ ಗೌಡ, ಸಾಫ್ಟ್ವೇರ್ ಇಂಜಿನಿಯರ್ ಶ್ರಿನಿವಾಸ್, ರಾಜೀವ್, ಖಜಾಂಜಿ ಹರ್ಷ ಅವರು ಲೆಮೆನ್ ಹೌಸ್ ಎಂಬ ಸೂಪರ್ ಮಾರ್ಕಟ್ನ ಓನರ್. ನಾನು ಕೂಡ ಒಂದು ದೊಡ್ಡ ಕಂಪನಿಯ ಮಾಲೀಕ. ನಾವೆಲ್ಲರೂ ಸುದೀಪ್ ಅಣ್ಣನ ಅಭಿಮಾನಿಗಳು. ನಾವಾಗಿಯೇ ಯಾರ ಮೇಲೂ ಜಗಳಕ್ಕೆ ಹೋಗಿಲ್ಲ. ಸುದೀಪ್ ಅಣ್ಣನ ವಿಷಯಕ್ಕೆ ಬಂದರೆ ಸುಮ್ಮನೆ ಇರುವುದಿಲ್ಲ. ಅಹೋರಾತ್ರ ಒಬ್ಬ ಅರೆಹುಚ್ಚ, ಜನರನ್ನು ಮರುಳು ಮಾಡುವ ಶಕ್ತಿ ಅವನಿಗೆ ಇದೆ. ಇವನಿಂದ ಮೋಸಕ್ಕೆ ಒಳಗಾದವರು ಹಲವರು ಇದ್ದಾರೆ. ಅದಕ್ಕೆ ಸಾಕ್ಷಿ ನಮ್ಮ ಬಳಿ ಇದೆ. ಇವನಿಗೆ ಪ್ರಚಾರದ ಹುಚ್ಚ. ಅದಕ್ಕೆ ಸುದೀಪ್ ಅಣ್ಣನ ಹೆಸರು ಬಳಸಿಕೊಂಡಿದ್ದಾನೆ’ ಎಂದು ಜಗದೀಶ್ ಹೇಳಿದ್ದಾರೆ.
ಇದನ್ನೂ ಓದಿ: ಅಹೋರಾತ್ರ ಮನೆಗೆ ನುಗ್ಗಿ ಸುದೀಪ್ ಅಭಿಮಾನಿಗಳ ದಾಂಧಲೆ ಆರೋಪ; ಕಿಚ್ಚನನ್ನು ಅರೆಸ್ಟ್ ಮಾಡಲು ಆಗ್ರಹ
ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿದ ಕಿಚ್ಚ ಸುದೀಪ್! ದಿಢೀರ್ ಭೇಟಿಗೆ ಕಾರಣ ಏನು?