ಕಿಚ್ಚ ಸುದೀಪ್ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಪ್ರತಿ ವರ್ಷ ಅವರನ್ನು ನೋಡೋಕೆ ಬೇರೆಬೇರೆ ಊರುಗಳಿಂದ ಬೆಂಗಳೂರಿಗೆ ಅಭಿಮಾನಿಗಳು ಆಗಮಿಸುತ್ತಿದ್ದರು. ಆದರೆ, ಕೊವಿಡ್ ಕಾರಣದಿಂದ ಇದಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ, ತಮ್ಮತಮ್ಮ ಊರುಗಳಲ್ಲೇ ಅಭಿಮಾನಿಗಳು ಕಿಚ್ಚನ ಬರ್ತ್ಡೇ ಆಚರಿಸಿದ್ದಾರೆ. ಸಾಮಾನ್ಯವಾಗಿ ಬರ್ತ್ಡೇ ದಿನ ಕೇಕ್ ಕತ್ತರಿಸಲಾಗುತ್ತದೆ. ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಕೆಲವರು ಕಿಚ್ಚನ ಜನ್ಮದಿನದಂದು ರಕ್ತದಾನ ಶಿಬಿರ ಕೂಡ ನಡೆಸಿದ್ದಾರೆ. ಆದರೆ, ಕೆಲ ಹುಚ್ಚು ಫ್ಯಾನ್ಸ್ ಅಭಿಮಾನದ ಹೆಸರಲ್ಲಿ ಪ್ರಾಣಿವಧೆ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು, ಕಿಚ್ಚನ ಹುಟ್ಟು ಹಬ್ಬದಂದು ಕೆಲ ಅಭಿಮಾನಿಗಳ ಹುಚ್ಚಾಟ ಮೆರೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿಯಲ್ಲಿ ಸಾರ್ವಜನಿಕವಾಗಿ ಕೋಣ ಬಲಿಕೊಟ್ಟಿದ್ದಾರೆ ಸುದೀಪ್ ಫ್ಯಾನ್ಸ್. ಅಭಿಮಾನದ ಹೆಸರಲ್ಲಿ ಪ್ರಾಣಿ ಹಿಂಸೆ ಮಾಡಿ ವಿಕೃತಿ ಮೆರೆದಿರುವುದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಗೋಹತ್ಯೆ ನಿಷೇಧದ ಬಗ್ಗೆ ಬಳ್ಳಾರಿಯ ಹೊಸಪೇಟೆಯಲ್ಲಿ ಅಧಿಕಾರಿಗೆ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹ್ಹಾಣ್ ಕ್ಲಾಸ್ ತೆಗೆದುಕೊಂಡಿದ್ದರು. ಜಿಲ್ಲೆಗೆ ಬಂದು ಹೋಗಿ ಎರಡೇ ದಿನದಲ್ಲಿ ಪ್ರಾಣಿಬಲಿ ನಡೆದಿರೋದು ವಿಚಿತ್ರ. ಸದ್ಯ, ಈ ಬಗ್ಗೆ ಪರವಿರೋಧ ಚರ್ಚೆ ನಡೆಯುತ್ತಿದೆ. ಸುದೀಪ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಅಭಿಮಾನಿಗಳನ್ನು ಭೇಟಿ ಆಗಲ್ಲ ಎಂದಿದ್ದ ಸುದೀಪ್
ಕೊವಿಡ್ ಎರಡನೇ ಅಲೆ ಕಡಿಮೆ ಆಗಿದೆ ನಿಜ. ಆದರೆ, ಮೂರನೇ ಅಲೆ ಬರುವ ಮುನ್ಸೂಚನೆ ಸಿಕ್ಕಿದೆ. ಈ ಕಾರಣಕ್ಕೆ ಸುದೀಪ್ ಅವರು ಅಭಿಮಾನಿಗಳನ್ನು ಭೇಟಿ ಆಗುತ್ತಿಲ್ಲ. ‘ನನ್ನೆಲ್ಲ ಅಭಿಮಾನಿ ಸ್ನೇಹಿತರಲ್ಲಿ ಮನವಿ. ಕೊವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರನ್ನು ಭೇಟಿ ಆಗಲು ಆಗುತ್ತಿಲ್ಲ. ಕ್ಷಮೆ ಇರಲಿ. ಮುಂದೆ ಪರಿಸ್ಥಿತಿ ಸುಧಾರಿಸಿದ ನಂತರ ನಿಮ್ಮೆಲ್ಲರನ್ನೂ ಭೇಟಿ ಆಗುತ್ತೇನೆ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ’ ಎಂದು ಸುದೀಪ್ ಅವರು ‘ಕಿಚ್ಚ ಕ್ರಿಯೇಷನ್’ ಟ್ವಿಟರ್ ಖಾತೆ ಮೂಲಕ ಸಂದೇಶ ನೀಡಿದ್ದರು.
ಇದನ್ನೂ ಓದಿ: ಕಿಚ್ಚ ಸುದೀಪ್ ಹುಟ್ಟುಹಬ್ಬ; ‘ಅಭಿನಯ ಚಕ್ರವರ್ತಿ’ ಜೀವನದ 10 ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ