‘ಮಾನಸಿಕವಾಗಿ ಆ ಬಾಲಕಿಗೆ ಎಷ್ಟು ಘಾಸಿ ಆಗಿರಬಹುದು’; ಚಿಕ್ಕಮಗಳೂರು ಘಟನೆ ಬಗ್ಗೆ ಬರೆದುಕೊಂಡ ರಮ್ಯಾ
ರಮ್ಯಾ ರಾಜಕೀಯ ಹಾಗೂ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಅಭಿಮಾನಿಗಳ ಜತೆ ಇತ್ತೀಚೆಗೆ ಚರ್ಚೆ ನಡೆಸುವಾಗ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಅಭಯಾರಣ್ಯದ ಉಳಿವಿಗಾಗಿ ಶ್ರಮಿಸಿದ ಖ್ಯಾತ ಪರಿಸರ ಹೋರಾಟಗಾರ ಡಿ.ವಿ. ಗಿರೀಶ್ ಅವರ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ವಾಹನದಲ್ಲಿದ್ದ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ, ರಾಜಕಾರಣಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಬಾಲಕಿ ಮೇಲೆ ಆಗಿರಬಹುದಾದ ಮಾನಸಿಕ ಘಾಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ‘ಡಿ.ವಿ. ಗಿರೀಶ್ ಮತ್ತು ಅವರ ಗೆಳೆಯರ ಮೇಲೆ ಹಲ್ಲೆ ಆದ ವಿಚಾರವನ್ನು ಓದಿದೆ. ಪುಂಡರ ಗುಂಪು ಇವರ ಮೇಲೆ ಹಲ್ಲೆ ನಡೆಸುವಾಗ 17 ವರ್ಷದ ಬಾಲಕಿ ಅಸಹಾಯಕವಾಗಿ ಎಲ್ಲವನ್ನೂ ವಾಹನದಿಂದಲೇ ನೋಡುತ್ತಿದ್ದಳು. ಇದು ಬಾಲಕಿಯ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ಮಾನಸಿಕವಾಗಿ ಆಕೆಗೆ ಎಷ್ಟು ಘಾಸಿ ಆಗಿರಬಹುದು. ಆ ದುಷ್ಟರು ಅರೆಸ್ಟ್ ಆಗಬೇಕು. ಕಾನೂನಿನ ಬಗ್ಗೆ ಜನರಿಗೆ ಭಯವಿಲ್ಲವೇ? ಬೇರೆ ಮುನುಷ್ಯರ ಬಗ್ಗೆ ಗೌರವ ಇಲ್ಲವೇ?’ ಎಂದು ಪ್ರಶ್ನೆ ಮಾಡಿದ್ದಾರೆ ರಮ್ಯಾ.
ಸದ್ಯ, ರಮ್ಯಾ ರಾಜಕೀಯ ಹಾಗೂ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಅಭಿಮಾನಿಗಳ ಜತೆ ಇತ್ತೀಚೆಗೆ ಚರ್ಚೆ ನಡೆಸುವಾಗ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.
ಏನಿದು ಘಟನೆ?
ಗಿರೀಶ್ ಅವರು ತಮ್ಮ ಜಿಪ್ಸಿಯಲ್ಲಿ ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್ನಿಂದ ಗೆಳೆಯರೊಂದಿಗೆ ಹಿಂದಿರುಗುವಾಗ ಸಂತವೇರಿ ತಿರುವಿನ ಸಮೀಪ ನಿಂತಿದ್ದ ಕೆಲ ಯುವಕರು ವಾಹನದಲ್ಲಿದ್ದ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದರು. ಗಿರೀಶ್ ಅವರು ವಾಹನ ನಿಲ್ಲಿಸಿ, ಹೀಗೆ ಮಾತನಾಡಬಾರದು ಎಂದು ಯುವಕರಿಗೆ ಬುದ್ಧಿ ಹೇಳಿದ್ದರು. ಈ ವಿಚಾರವಾಗಿ ಹಲ್ಲೆ ನಡೆದಿದೆ. ಕೆಲ ಹೊತ್ತಿನ ನಂತರ ಬೈಕ್ಗಳಲ್ಲಿ ಗಿರೀಶ್ ಅವರ ಜಿಪ್ಸಿ ಬೆನ್ನಟ್ಟಿದ ದುಷ್ಟರು, ಕಂಬಿಹಳ್ಳಿ ಸಮೀಪ ಜೀಪ್ ಅಡ್ಡಗಟ್ಟಿ ಅದರಲ್ಲಿದ್ದ ಗಿರೀಶ್ ಮತ್ತು ಕೀರ್ತಿ ಕುಮಾರ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದರು. ಗಿರೀಶ್ ಅವರಿಗೆ ಕೆನ್ನೆಗೆ ಪೆಟ್ಟು ಬಿದ್ದು, ಗಾಯವಾಯಿತು. ಜಿಪ್ಸಿಯಲ್ಲಿದ್ದ ಬಾಲಕಿಯನ್ನು ದುಷ್ಟರು ಹಿಡಿದು ಎಳೆಯಲು ಯತ್ನಿಸಿದ್ದರು.
ಇದನ್ನೂ ಓದಿ:
ಪರಿಸರ ಹೋರಾಟಗಾರ ಗಿರೀಶ್ ಮೇಲೆ ಹಲ್ಲೆ ಪ್ರಕರಣ: ಏಳು ಜನರ ಬಂಧನ
ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಮೇಲೆ ಚಿಕ್ಕಮಗಳೂರಿನಲ್ಲಿ ಹಲ್ಲೆ: ವ್ಯಾಪಕ ಖಂಡನೆ