‘ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’: ದರ್ಶನ್​ ಕೇಸ್​ಗೆ ಸುದೀಪ್​ ಪ್ರತಿಕ್ರಿಯೆ

|

Updated on: Jun 16, 2024 | 6:40 PM

ಒಂದು ಕಾಲದಲ್ಲಿ ಸುದೀಪ್​ ಮತ್ತು ದರ್ಶನ್​ ಸ್ನೇಹಿತರಾಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ದೂರ ಆದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ದರ್ಶನ್​ ಪ್ರಮುಖ ಆರೋಪಿ ಆಗಿದ್ದು, ಆ ಕುರಿತು ಸುದೀಪ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

‘ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’: ದರ್ಶನ್​ ಕೇಸ್​ಗೆ ಸುದೀಪ್​ ಪ್ರತಿಕ್ರಿಯೆ
ಕಿಚ್ಚ ಸುದೀಪ್​, ದರ್ಶನ್​
Follow us on

ನಟ ದರ್ಶನ್​ (Darshan) ಅವರು ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣದ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈಗ ಕಿಚ್ಚ ಸುದೀಪ್​ ಕೂಡ ಆ ಕುರಿತು ಮಾತನಾಡಿದ್ದಾರೆ. ‘ನನಗೆ ಗೊತ್ತಿರೋದು ಇಷ್ಟೇ.. ನೀವು (ಮಾಧ್ಯಮ) ಏನು ತೋರಿಸುತ್ತಿದ್ದೀರೋ ನಾವು ಅದನ್ನೇ ನೋಡಿ ವಿಚಾರ ತಿಳಿದುಕೊಳ್ಳುತ್ತಿದ್ದೇವೆ. ಅದರಲ್ಲಿ ಅರ್ಥ ಆಗಿರೋದು ಏನೆಂದರೆ, ಮಾಧ್ಯಮ ಮತ್ತು ಪೊಲೀಸ್​ ಸಿಬ್ಬಂದಿ ಬಹಳ ಪ್ರಯತ್ನ ಹಾಕಿ ಸತ್ಯಾಂಶ ಹೊರತರಲು ಸಾಕಷ್ಟು ಕೆಲಸ ಮಾಡುತ್ತಿದ್ದೀರಿ. ಅದರಲ್ಲಿ ಎರಡನೇ ಮಾತೇ ಇಲ್ಲ’ ಎಂದು ಕಿಚ್ಚ ಸುದೀಪ್ (Kichcha Sudeep) ಹೇಳಿದ್ದಾರೆ.

‘ನನಗೆ ಗೊತ್ತಿರುವ ಹಾಗೆ, ಇತ್ತೀಚಿಗೆ ನಾನು ನಿಮ್ಮ ನ್ಯೂಸ್​ನಲ್ಲಿ ನೋಡಿದ್ದು, ಸಿಎಂ ಅವರೇ ಈ ಪ್ರಕರಣದ ಬಗ್ಗೆ ಹಠ ಹಿಡಿದು ಕೂತಿದ್ದಾರೆ. ಕರ್ನಾಟಕದ ದೊಡ್ಡ ಸ್ಥಾನದಲ್ಲಿ ಇರುವ ಅವರು, ಮಾಧ್ಯಮದವರು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗ, ಕಾಮನ್​ ಮ್ಯಾನ್​ ಆಗಿ ನನ್ನ ಪ್ರಕಾರ ಕಲಾವಿದರ ಹೆಸರು ಬರಲ್ಲ. ನಾನು ಅವರ ಪರ, ಇವರ ಪರ ಅಂತ ಮಾತಾಡುವುದು ತಪ್ಪಾಗುತ್ತದೆ. ವಿರುದ್ಧವಾಗಿ ಮಾತನಾಡಿದರೂ ತಪ್ಪಾಗತ್ತೆ’ ಎಂದಿದ್ದಾರೆ ಸುದೀಪ್​.

‘ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆ ಹೆಣ್ಮಗುಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾ ಸ್ವಾಮಿ ಅವರು ಎಲ್ಲೋ ರಸ್ತೆಯಲ್ಲಿ ಆ ರೀತಿ ಬಿದ್ದಿದ್ದರಲ್ಲ, ಅವರಿಗೆ ನ್ಯಾಯ ಸಿಗಬೇಕು. ಹುಟ್ಟಬೇಕಾಗಿರುವ ಆ ಮಗುಗೆ ನ್ಯಾಯ ಸಿಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯದ ಮೇಲೆ ಎಲ್ಲರಿಗೂ ನಂಬಿಕೆ ಹುಟ್ಟುಬೇಕು ಎಂದರೆ ಈ ಕೇಸ್​ನಲ್ಲಿ ಒಳ್ಳೆಯ ನ್ಯಾಯ ಆಗಬೇಕು’ ಎಂದಿದ್ದಾರೆ ಕಿಚ್ಚ ಸುದೀಪ್​.

ಇದನ್ನೂ ಓದಿ: ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಚಾಲಕ ರವಿ ಮನೆಯಲ್ಲಿ ತೀವ್ರ ವಿಚಾರಣೆ

‘ನಾನು ಇಷ್ಟು ಹೇಳಬಲ್ಲೆ, ಮಾಧ್ಯಮದವರು ತೋರಿಸಿದ್ದು ನಮಗೆ ಗೊತ್ತೇ ಹೊರತು ನಾನು ಸ್ಟೇಷನ್​ ಒಳಗೆ ಇಲ್ಲ. ಯಾವ ಸ್ಥಳದಲ್ಲೂ ನಾವು ಇಲ್ಲ. ಆ ಕುಟುಂಬಕ್ಕಾಗಿ ಎಲ್ಲರ ಹೃದಯ ಮಿಡಿಯುತ್ತಿದೆ. ವಾತಾವರಣ ಏನೋ ಸರಿ ಕಾಣಿಸುತ್ತಿಲ್ಲ. ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಎಲ್ಲ ಕಾರಣಕ್ಕೂ ಚಿತ್ರರಂಗದ ಮೇಲೆ ಆರೋಪ ಬರುತ್ತದೆ. ಚಿತ್ರರಂಗಕ್ಕೆ ಒಂದು ಕ್ಲೀನ್​ಚಿಟ್​ ಬೇಕಾಗಿದೆ. ಕಲಾವಿದರು ತುಂಬ ಜನ ಇದ್ದಾರೆ. ಚಿತ್ರರಂಗ ಎಂದರೆ ಒಬ್ಬರು-ಇಬ್ಬರು ಅಲ್ಲ. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.