Actor Darshan Horoscope: ದರ್ಶನ್ ಜಾತಕದಲ್ಲಿನ ಸಮಸ್ಯೆ ಹದಿಮೂರು ವರ್ಷದ ಹಿಂದೆಯೇ ಎಚ್ಚರಿಸಲಾಗಿತ್ತೆ?

ದರ್ಶನ್ ಅವರದು ಶ್ರವಣ ನಕ್ಷತ್ರ, ಒಂದನೇ ಪಾದ, ಮಕರ ರಾಶಿ ಹಾಗೂ ವೃಷಭ ಲಗ್ನ. ಜನನ ಕಾಲದಲ್ಲಿನ ಗ್ರಹ ಸ್ಥಿತಿ ಹೀಗಿದೆ: ಮೇಷದಲ್ಲಿ ಗುರು ಮತ್ತು ಕೇತು, ವೃಷಭ ಲಗ್ನ ಹಾಗೂ ಅಲ್ಲಿಯೇ ಮಾಂದಿ. ಕರ್ಕಾಟಕದಲ್ಲಿ ಶನಿ, ತುಲಾ ರಾಶಿಯಲ್ಲಿ ರಾಹು, ಮಕರದಲ್ಲಿ ಚಂದ್ರ, ಕುಜ ಹಾಗೂ ಬುಧ. ಕುಂಭದಲ್ಲಿ ರವಿ ಮತ್ತು ಮೀನದಲ್ಲಿ ಶುಕ್ರ ಗ್ರಹ ಇದೆ. ಇವರ ಜನನ ಕಾಲದಲ್ಲಿ ಚಂದ್ರ ದಶೆ- ಕುಜ ಭುಕ್ತಿ ನಡೆಯುತ್ತಿತ್ತು. ಇದು ಜನ್ಮ ಜಾತಕದ ವಿಚಾರ

Actor Darshan Horoscope: ದರ್ಶನ್ ಜಾತಕದಲ್ಲಿನ ಸಮಸ್ಯೆ ಹದಿಮೂರು ವರ್ಷದ ಹಿಂದೆಯೇ ಎಚ್ಚರಿಸಲಾಗಿತ್ತೆ?
ದರ್ಶನ್ ಜಾತಕದಲ್ಲಿನ ಸಮಸ್ಯೆ ಹದಿಮೂರು ವರ್ಷದ ಹಿಂದೆಯೇ ಎಚ್ಚರಿಸಲಾಗಿತ್ತೆ?
Follow us
| Updated By: Digi Tech Desk

Updated on:Jun 16, 2024 | 2:36 PM

ಕರ್ನಾಟಕದ ಖ್ಯಾತ ಜ್ಯೋತಿಷಿಯೊಬ್ಬರು ನಟ ದರ್ಶನ್ ಜಾತಕದ ವಿಮರ್ಶೆಯನ್ನು ಮಾಡಿದ್ದಾರೆ. ಅದರ ಬಗ್ಗೆ ಟಿವಿ9 ಕನ್ನಡ ವೆಬ್ ಸೈಟ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ ದರ್ಶನ್ ಅವರ ಮೇಲೆ ಪತ್ನಿ ವಿಜಯಲಕ್ಷ್ಮಿ ಮೇಲಿನ ಹಲ್ಲೆ ಪ್ರಕರಣವು ಬಂದಿದ್ದಾಗ ಇದೇ ಜ್ಯೋತಿಷಿಗಳ ಬಳಿ ತಮ್ಮ ಹಿರಿಯ ಸ್ನೇಹಿತರೊಬ್ಬರ ಮೂಲಕ ದರ್ಶನ್ ಜಾತಕ ವಿಮರ್ಶೆ ಮಾಡಿಸಿದ್ದರಂತೆ. ಆದ್ದರಿಂದ ದರ್ಶನ್ ಅವರ ಜನ್ಮ ಜಾತಕವು ಈ ಜ್ಯೋತಿಷಿಗಳ ಬಳಿ ಇದ್ದು, ಈ ಹಿಂದಿನ ಘಟನಾವಳಿಯನ್ನು ಮೆಲುಕು ಹಾಕಿ, ಈಗಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಆದರೆ ಈ ಜ್ಯೋತಿಷಿಗಳು ಸದ್ಯದ ಸನ್ನಿವೇಶದಿಂದಾಗಿ ಹಾಗೂ ಖಾಸಗಿತನ ಕಾಪಾಡಿಕೊಳ್ಳಬೇಕು ಎಂಬ ಕಾರಣಗಳಿಗಾಗಿ ತಮ್ಮ ಹೆಸರನ್ನು ಪ್ರಸ್ತಾವ ಮಾಡಬಾರದು ಎಂಬ ಷರತ್ತು ಹಾಕಿರುವುದರಿಂದ ಅವರ ಹೆಸರನ್ಜು ಈ ಲೇಖನದಲ್ಲಿ ಪ್ರಸ್ತಾವ ಮಾಡುತ್ತಿಲ್ಲ. ಇನ್ನು ಮುಂದೆ ಜ್ಯೋತಿಷಿಗಳ ಮಾತಲ್ಲೇ ಏನು ಹೇಳಿದ್ದಾರೆ ಎಂಬುದನ್ನು ಓದಿಕೊಳ್ಳಿ.

ಅದು ಸುಮಾರು 2011ನೇ ಇಸವಿಯ ನವೆಂಬರ್ ತಿಂಗಳು ಇರಬಹುದು. ಕನ್ನಡದ ಖ್ಯಾತ ನಟರೊಬ್ಬರು ಕರೆ ಮಾಡಿ, “ಸಾರ್ ನಮ್ಮ ಹುಡುಗನ ಜಾತಕ ಒಮ್ಮೆ ನೋಡಿ. ಪತ್ನಿಯ ಮೇಲೆ ಹಲ್ಲೆ ಕೇಸಿನಲ್ಲಿ ಈಗ ಪೊಲೀಸ್ ಬಾಧೆಯಲ್ಲಿ ಇದ್ದಾನೆ. ಈಗ ನನ್ನ ಬಳಿಗೆ ಅವನು ಬಂದಿದ್ದಾನೆ,” ಎಂದರು. ಆಗ ನಾನು ಅವರ ಜಾತಕ ನೋಡಿ, “ಈಗ ತುಲಾ ರಾಶಿಯಲ್ಲಿ ಶನಿಯ ಪ್ರವೇಶ ಆಗಿದೆ. ಒಟ್ಟಾರೆಯಾಗಿ ವಿವಾದ ಮಾಡಿಕೊಳ್ತೀರಿ. ಕೂಡಲೇ ಸಂಧಾನ ಮೂಲಕ ಬಗೆಹರಿಸಿಕೊಳ್ಳಿ. ಇಂತಹ ಗ್ರಹಸ್ಥಿತಿ ಇದ್ದಾಗ ಮೊದಲು ಶಾಂತ ರೀತಿಯಲ್ಲಿ ವರ್ತಿಸಬೇಕು. ನೀವು ಸಂಪರ್ಕಿಸಿದ ಆ ಖ್ಯಾತ ನಟರೇ ಸಾಕು, ಸಂಧಾನ ಮಾಡಿ ಬಗೆಹರಿಸಿಕೊಳ್ಳಬಹುದು,” ಎಂದು ಹೇಳಿದ್ದೆ.

ಸಾಮಾನ್ಯವಾಗಿ ಜ್ಯೋತಿಷಿಗಳ ಬಳಿ ಬರುವ ವೇಳೆಗೆ ಸಂಕಷ್ಟದಲ್ಲಿ ಇರುವಂಥ ಬಹುತೇಕ ಕೇಳುವ ರೀತಿಯಲ್ಲೇ ದರ್ಶನ್ ಸಹ “ಸಾರ್ ಯಾವ ಪೂಜೆ ಮಾಡಿಸಬೇಕು”ಎಂದರು. ನಾನು ನಕ್ಕು, ನಿಮಗೆಲ್ಲಾ ಪೂಜೆಯ ಹುಚ್ಚು. ಮನಸ್ಸನ್ನು ಭದ್ರಗೊಳಿಸುವುದಕ್ಕಾಗಿಯೇ ಪೂಜೆ ಇರೋದು. ಅದರಲ್ಲಿ ಅಹಂಕಾರ ಹೆಚ್ಚಾಗದಂತೆ ಇರಲು ತತ್ಸಂಬಂಧಿ ಶಕ್ತಿಗಳ ಪೂಜೆ ಮಾಡಿ, ನೆಮ್ಮದಿ ತಂದುಕೊಳ್ಳಿ. ಪೂಜೆಯಿಂದ ದೇವರು ಎದ್ದು ರಕ್ಷಣೆಗೆ ಬರೋದಿಲ್ಲ. ಮನದೊಳಗಿನ ಸದ್ಭಾವನೆಗಳೇ ದೇವರು. ದುರ್ಭಾವನೆಗಳೇ ದೆವ್ವ ಕಣ್ರೀ. ದೇವರ ಪೂಜೆಯನ್ನು ಅರ್ಥ ತಿಳಿದು ಮಾಡಿದರೆ ಮಾತ್ರ ಕ್ಷೇಮ. ಅರ್ಥ ತಿಳಿಯದೆ ಮಾಡಿಸಿದರೆ ಮಾಡಿದ ಅರ್ಚಕರಿಗಷ್ಟೇ ಲಾಭ. ಈ ಮನಸು ಸರಿಯಾಗದೇ ಹೋದಲ್ಲಿ ಮುಂದೆ ಸುಮಾರು 2023-2024-2025ರ ವೇಳೆಗೆ ಶನಿ ಮಹಾರಾಜರು ಕುಂಭ ರಾಶಿಯಲ್ಲಿ ಸಂಚರಿಸುವ ವೇಳೆಗೆ ನಿಮ್ಮ ಜನ್ಮ ಜಾತಕದಲ್ಲಿ ಇರುವಂಥ ಕರ್ಕಾಟಕ ಶನಿಗೆ ಅಷ್ಟಮದಲ್ಲಿ ಸಂಚರಿಸುತ್ತಾನೆ. ಆಗ ಇದಕ್ಕಿಂತ ತೀವ್ರ ಸ್ವರೂಪ ಪಡೆಯಬಹುದು. ಹಾಗಾಗಿ ಈಗಲೇ ನಿಮ್ಮ ಮನೋ ಚಿಂತನೆ ಬದಲಾಯಿಸಿಕೊಳ್ಳಿ. ಜ್ಯೋತಿಷ್ಯ ಇರುವುದು ಕಾಲ ಕಾಲಕ್ಕೆ ಏನು ಸಂಭವಿಸಬಹುದು, ಹೇಗೆ ಅದನ್ನು ನಿಭಾಯಿಸಬಹುದು ಎಂದು ತಿಳಿಯಲಿಕ್ಕಾಗಿ. ಮನಸ್ಸಿನ ಭಾವನೆಯ ಆಧಾರದಲ್ಲಿ ಸಮಸ್ಯೆ ಉಲ್ಬಣಿಸಬಹುದು. ಅದೇ ಮನಸ್ಸಿನ ಭಾವನೆಯ ಆಧಾರದಲ್ಲಿ ಸಮಸ್ಯೆ ಬಗೆಹರಿಸುವ ಯೋಗಗಳೂ ಇವೆ. ಆ ನಂತರ ಇದಕ್ಕಾಗಿ ನೀವು ಪೂಜೆ- ಪರಿಹಾರಗಳನ್ನು ನಿಷ್ಠೆಯಿಂದ ಮಾಡಿಸಿಕೊಳ್ಳಿ. ಆಗ ಧನದ ಅಹಂಕಾರ ಬೇಡ. ಆ ರೀತಿ ಮಾಡಿಸಿಕೊಂಡರೆ ಅದೂ ಪ್ರಯೋಜನಕ್ಕೆ ಬರುತ್ತದೆ.ಒಟ್ಟಿನಲ್ಲಿ ತಾಳ್ಮೆ- ಸಮಾಧಾನದಿಂದ ಇರಿ ಎಂದೇ ಹೇಳಬೇಕಾಗುತ್ತದೆ ಎಂದು ಹೇಳಿದ್ದೆ. ಮತ್ತೆ ನನ್ನನ್ನು ದರ್ಶನ್ ಸಂಪರ್ಕಿಸಲೂ ಇಲ್ಲ,ಆತನಿಗೆ ನಾನು ಫೋನ್ ಮಾಡಲು ಹೋಗಲೂ ಇಲ್ಲ. ಯಾಕೆಂದರೆ ನಾನು ಯಾವ ಸೆಲೆಬ್ರಿಟಿಗಳ ವಿಳಾಸದಲ್ಲೂ ಬದುಕುವವನಲ್ಲ. ಕೇವಲ ವಿದ್ಯೆಯ ಆಧಾರ, ಭಗವಂತನ ಅನುಗ್ರಹದಿಂದಲೇ ಜೀವನ ಸಾಗಿಸುವವನು.

ಶ್ರವಣ ನಕ್ಷತ್ರ- ಮಕರ ರಾಶಿ, ವೃಷಭ ಲಗ್ನ

ದರ್ಶನ್ ಅವರದು ಶ್ರವಣ ನಕ್ಷತ್ರ, ಒಂದನೇ ಪಾದ, ಮಕರ ರಾಶಿ ಹಾಗೂ ವೃಷಭ ಲಗ್ನ. ಜನನ ಕಾಲದಲ್ಲಿನ ಗ್ರಹ ಸ್ಥಿತಿ ಹೀಗಿದೆ: ಮೇಷದಲ್ಲಿ ಗುರು ಮತ್ತು ಕೇತು, ವೃಷಭ ಲಗ್ನ ಹಾಗೂ ಅಲ್ಲಿಯೇ ಮಾಂದಿ. ಕರ್ಕಾಟಕದಲ್ಲಿ ಶನಿ, ತುಲಾ ರಾಶಿಯಲ್ಲಿ ರಾಹು, ಮಕರದಲ್ಲಿ ಚಂದ್ರ, ಕುಜ ಹಾಗೂ ಬುಧ. ಕುಂಭದಲ್ಲಿ ರವಿ ಮತ್ತು ಮೀನದಲ್ಲಿ ಶುಕ್ರ ಗ್ರಹ ಇದೆ. ಇವರ ಜನನ ಕಾಲದಲ್ಲಿ ಚಂದ್ರ ದಶೆ- ಕುಜ ಭುಕ್ತಿ ನಡೆಯುತ್ತಿತ್ತು. ಇದು ಜನ್ಮ ಜಾತಕದ ವಿಚಾರ ಆಯಿತು. ಅವರ ಈಗಿನ ಪರಿಸ್ಥಿತಿಗೆ ಏನೇನು ಕಾರಣ ನೋಡೋಣ. ಈಗ ಸದ್ಯಕ್ಕೆ ಶನಿಯು ಕುಂಭ ರಾಶಿಯಲ್ಲಿ ಇದೆ. ಅಂದರೆ ಅವರ ಜನ್ಮ ರಾಶಿಗೆ ಎರಡನೇ ಮನೆ ಆಗುತ್ತದೆ. ಇದು ಕೂಡ ಸಂಸಾರ, ವಾಕ್ ಸ್ಥಾನ, ಧನ ಸ್ಥಾನ ಹೌದು. ಹಾಗೆ ಶನಿ ಕುಂಭ ರಾಶಿಗೆ ಬಂದ ಮೇಲೆ ಆ ಎಲ್ಲದರ ಮೇಲೆ ಪ್ರಭಾವ ಬೀರುತ್ತಾ ಬಂದ. ಅಷ್ಟೇ ಆಗಿದ್ದರೆ ಪರಿಸ್ಥಿತಿ ಈ ಹಂತಕ್ಕೆ ಹೋಗುತ್ತಿರಲಿಲ್ಲ. ಚಂದ್ರ ಖರದ್ರೇಕ್ಕಾಣಾಧಿಪತಿಯ ಗುರು ದಶೆ ನಡೆಯುತ್ತಿದೆ. ಆ ಗುರುವಿನ ಕೇಂದ್ರದಲ್ಲಿ ಶನಿ, ಕುಜ, ಕೇತು. ಕುಜ ಭುಕ್ತಿ. ಕುಜ ಗ್ರಹದ ಕೇಂದ್ರದಲ್ಲಿ ಕೇತು ಮತ್ತು ಶನಿ. ಇನ್ನು ಮುಂದಿನ ನವೆಂಬರ್ ಹೊತ್ತಿಗೆ ಕುಜ- ರಾಹುವಿನ ಭುಕ್ತಿ ಸಂಧಿಯೂ ಬರುತ್ತದೆ. ಇದು ಮತ್ತೊಂದು ಅಪಾಯಕ್ಕೆ ಆಹ್ವಾನ. ಆದರೆ ದರ್ಶನ್ ಪಾಲಿನ ಅದೃಷ್ಟವೋ ಅಥವಾ ಪೂರ್ವ ಜನ್ಮದ ಸುಕೃತವೋ ಕುಜ ಗ್ರಹದ ಕೇಂದ್ರದಲ್ಲಿ ಶುಭ ಗ್ರಹರು ಇರುವುದರಿಂದ ಕೆಲವು ಪರಿಹಾರದಿಂದ ಪ್ರಾಯಶ್ಚಿತ್ತಕ್ಕೆ ದಾರಿ ಸಿಕ್ಕೀತು. ಪೊಲೀಸರ ವಶದಲ್ಲಿ ಇರುವಂಥ ದರ್ಶನ್ ಸ್ವತಃ ಈ ಪರಿಹಾರಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾ? ಆದರೆ ಶಾಸ್ತ್ರದ ಪ್ರಕಾರ ಆ ವ್ಯಕ್ತಿಯೇ ಕೂತು ಪೂಜೆ- ಪುನಸ್ಕಾರ ಮಾಡಿಕೊಳ್ಳಬೇಕು. ಅದು ಕೂಡ ಅಗ್ನಿ ಆರದ ರೀತಿಯಲ್ಲಿ ಮಹಾ ಮೃತ್ಯುಂಜಯ ಯಾಗವನ್ನು ಏಳು ಅಥವಾ ಐದು ದಿನದ್ದು ಮಾಡಬೇಕಾಗುತ್ತದೆ.

ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಬಹುದು

ದರ್ಶನ್ ಅವರ ವೃಷಭ ಲಗ್ನಕ್ಕೆ ಅಷ್ಟಮ ಸ್ಥಾನವಾದ ಧನುವಿನಲ್ಲಿ ಅಷ್ಟಕ ವರ್ಗದ ಸಂಖ್ಯೆ 23 ಇದ್ದು, ಅದು ದುರ್ಬಲ.24 ಅಥವಾ ಹೆಚ್ಚು ಇದ್ದರೆ ಅಪಾಯದ ಸ್ಥಾನ ಬಲಿಷ್ಟವಾಗುತ್ತದೆ. ದುರ್ಬಲ ಇರುವುದರಿಂದ ಅಪಾಯದ ಮುನ್ಸೂಚನೆ. ದರ್ಶನ್ ಅವರ ಚಂದ್ರ ಇರುವ ಮಕರ ರಾಶಿಗೆ ಗುರು ಗ್ರಹವು ವ್ಯಯಾಧಿಪತಿ ಆಗುತ್ತದೆ. ವ್ಯಯಾಧಿಪತಿಯಾದ ಗುರುವು ಸದ್ಯಕ್ಕೆ ಅವರದೇ ಲಗ್ನದಲ್ಲಿ ಇದೆ. ಈ ಕೊಲೆ ಆರೋಪಕ್ಕಿಂತ ಹೆಚ್ಚಾಗಿ ಅವರದೇ ಆರೋಗ್ಯವು ವಿಪರೀತ ಸಮಸ್ಯೆ ಆಗುತ್ತದೆ. ತಲೆಯ ಭಾಗದ ತೊಂದರೆ, ನರಗಳ ದುರ್ಬಲತೆ, ಶ್ವಾಸಕೋಶದ ಸಮಸ್ಯೆ ಇತ್ಯಾದಿಗಳು ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಅವರ ದೈಹಿಕ ಆರೋಗ್ಯ ತೀವ್ರವಾದ ಆತಂಕವನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಚಿತ್ರಹಿಂಸೆ ಕೊಟ್ಟು ಕೊಲೆ, ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ

ಇನ್ನು ಜನ್ಮ ಜಾತಕದಲ್ಲಿನ ಪಂಚಮಾಧಿಪತಿ (ವೃಷಭ ಲಗ್ನದಿಂದ ಕನ್ಯಾ ರಾಶಿ ಐದನೆಯದು) ಬುಧನು ಮಿತ್ರ ಕ್ಷೇತ್ರ ನವಮದಲ್ಲಿ (ವೃಷಭದಿಂದ ಮಕರ ಒಂಬತ್ತನೆಯದು) ನವಮಾಧಿಪತಿಯ ದೃಷ್ಟಿಯಲ್ಲಿದ್ದು (ಕರ್ಕಾಟಕ ರಾಶಿಯ ಶನಿಯು ಏಳನೇ ದೃಷ್ಟಿಯಿಂದ ಮಕರ ರಾಶಿಯ ವೀಕ್ಷಣೆ ಮಾಡುತ್ತದೆ), ಪ್ರಬಲ ಶತ್ರು ಉಚ್ಚ ಕುಜನ ಜತೆಗೆ (ಜನ್ಮ ಜಾತಕದಲ್ಲಿ ಮಕರ ರಾಶಿಯಲ್ಲೇ ಕುಜ ಇದ್ದು, ಅದು ಕುಜನಿಗೆ ಉಚ್ಚ ಸ್ಥಾನ) ಕಲಹ, ಬುಧ- ಚಂದ್ರ ಯೋಗದಲ್ಲಿ ಖಿನ್ನತೆ- ದುಃಖವನ್ನು ಸೂಚಿಸುತ್ತದೆ. ದರ್ಶನ್ ಜಾತಕದಲ್ಲಿ ಶನಿಯು ಕರ್ಕಾಟಕ ರಾಶಿಯಲ್ಲಿ ಹಾಗೂ ಮಕರ ರಾಶಿಯಲ್ಲಿ ಚಂದ್ರ ಇದ್ದು, ಪರಿವರ್ತನಾ ಯೋಗವೂ ಆಗಿದೆ. ಈ ಜಾತಕದಲ್ಲಿ ಕುಜ, ಶುಕ್ರ ಇಬ್ಬರೂ ಉಚ್ಚ ಸ್ಥಿತಿಯಲ್ಲಿ ಇದ್ದಾರೆ. ವೃಷಭ ಲಗ್ನಕ್ಕೆ ಶುಕ್ರ ಗ್ರಹ ಆರನೇ ಮನೆ (ತುಲಾ ರಾಶಿ) ಅಧಿಪತಿಯೂ ಆಗಿ ಹನ್ನೊಂದನೇ ಸ್ಥಾನದಲ್ಲಿ ಉಚ್ಚ ಸ್ಥಿತಿಯಲ್ಲಿ ಇದೆ. ಶ್ರೀಮಂತಿಕೆ, ಅಲಂಕಾರ, ಸವಲತ್ತು, ಹೆಸರು, ಆಕರ್ಷಣೆಯನ್ನು ನೀಡುವ ಶುಕ್ರ ಗ್ರಹವು ಅದೇ ವೇಳೆ ಸ್ತ್ರೀಯರಿಂದ ಸಮಸ್ಯೆ, ಕಿಡ್ನಿ, ಲೈಂಗಿಕ ವಿಚಾರಗಳು ಇಂಥದ್ದರಿಂದ ತೊಂದರೆಗಳನ್ನು ಸಹ ತಂದೊಡ್ಡುತ್ತದೆ.

ಪರಿಹಾರ ಯಾಕೆ ಮಾಡಬೇಕು? ಮತ್ತೆ ಪರಿಹಾರದ ವಿಚಾರಕ್ಕೆ ಬರುವುದಾದರೆ, ಯಜಮಾನ ಇಲ್ಲದೆ ಯಾರ್ಯಾರೋ ಮಾಡಿದರೆ ಪರಿಹಾರಕ್ಕೆ ಫಲ ಸಿಗಲಾರದು. ಯಾವುದೇ ಆಗಲಿ ವಿಪರೀತಕ್ಕೆ ಹೋದಾಗ ಯಾರಿಂದಲೂ ರಕ್ಷಣೆ ಮಾಡಲಾಗದು. ಪುರಾತನರು ಒಂದು ಮಾತು ಹೇಳಿದ್ದಾರೆ: “ಅಯೋಗ್ಯ ಪುರುಷಂ ನಾಸ್ತಿ. ಸಂಯೋಜಕ ಸ್ತತ್ರ ದುರ್ಲಭ” ಎಂದು. ಯಾರೂ ಅಯೋಗ್ಯರಲ್ಲ, ಎಲ್ಲರೂ ಈ ಪ್ರಕೃತಿ ಭಗವಂತನ ಮಕ್ಕಳು. ಆದರೆ ಸಂಯೋಜಕರು ದುಷ್ಟರಾದರೆ ಅಯೋಗ್ಯರಾಗಿ ಬಿಡುತ್ತಾರೆ. ಇವರು ಇನ್ನೂ ಏನೇನೋ ಸಾಧನೆ ಮಾಡಲಿಕ್ಕಿದೆ. ಉಚ್ಚ ಶುಕ್ರನೇ ಲಗ್ನಾಧಿಪತಿ ಆಗಿರುವಾಗ ಉತ್ತಮ ಸ್ಥಿತಿಯನ್ನು ಅನುಭವಿಸುವವರು ಎಂದಿದೆ ಶಾಸ್ತ್ರ. ಆದರೆ ಅದೇ ಶುಕ್ರನು (ವೃಷಭ ಲಗ್ನಾಧಿಪತಿ) ಋಣ- ರೋಗ ಸ್ಥಾನ, ಷಷ್ಟದ ಅಧಿಪತಿಯೂ (ತುಲಾ ರಾಶಿಗೆ) ಆಗಿದ್ದಾನಲ್ಲವೇ? ಈಗ ಅದೇ ಫಲವು ಉಚ್ಚ ಸ್ಥಿತಿಗೆ ಹೋಗುತ್ತಿದೆ. ಜತೆಗೆ ಭಾಗ್ಯ, ಕರ್ಮಸ್ಥಾನಾಧಿಪತಿ (ವೃಷಭ ಲಗ್ನದಿಂದ ಒಂಬತ್ತನೇ ಮನೆ ಮಕರ ರಾಶಿ) ಶನಿಯು ತೃತಿಯ ದುರಿತಾಧಿಪತಿ ಚಂದ್ರನೊಡನೆ ಪರಿವರ್ತನೆಯಲ್ಲಿದ್ದು, ಅದು ಕೂಡ ಮಾರಕವೇ ಆಗಿದೆ.

ಜಾತಕದಲ್ಲಿನ ಉಚ್ಚ ಶುಕ್ರ ಆದರೆ, ಲಗ್ನಾಧಿಪತಿ ಶುಕ್ರನಿಗೆ ಇದೇ ಚಂದ್ರನು ಪಂಚಮಾಧಿಪತಿಯಾಗಿ(ಕರ್ಕಾಟಕ ರಾಶಿ- ಬುದ್ದಿ) ಲಾಭ- ವ್ಯಯಗಳ ಅಧಿಪತಿ ಶನಿಯೊಡನೆ ಪರಿವರ್ತನೆ ಉತ್ತಮವೂ ಹೌದು. ಇದನ್ನೇ ‘ಯೋಗಸ್ಯ ಪರಿರಕ್ಷಣಂ ಕ್ಷೇಮಃ’ ಎಂದರು.ಹಾಗಾಗಿ ಸತ್ಪರಿವರ್ತನೆಯಿಂದ ಕ್ಷೇಮವನ್ನು ಕಾಣಬಹುದು. ಎಲ್ಲವೂ ದೈವೇಚ್ಚೆಯಿಂದಲೇ ನಡೆಯೋದು. ದೈವೇಚ್ಛೆಯನ್ನು ಭಕ್ತಿಯಿಂದ ಮಾತ್ರ ಪಡೆಯಬಹುದಷ್ಟೆ.

ಈ ಲೇಖನದಲ್ಲಿ ಬಳಸಿದಂಥ ಪರಿಹಾರ, ರಕ್ಷಣೆ, ಕ್ಷೇಮ ಇತ್ಯಾದಿ ಪದಗಳಿಗೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ದರ್ಶನ್ ಈಗ ಕೊಲೆ ಪ್ರಕರಣವೊಂದರ ಆರೋಪಿ. ಅದರಿಂದ ಬಿಡಿಸಿಕೊಳ್ಳ ಬಹುದು, ಖುಲಾಸೆ ಆಗಿಬಿಡಬಹುದು ಎಂಬರ್ಥದಲ್ಲಿ ಇದನ್ನು ಗ್ರಹಿಸುವ ಅಗತ್ಯ ಇಲ್ಲ. ಪಾಪ ಮಾಡಿದ್ದಲ್ಲಿ ಅದಕ್ಕೆ ಖಂಡಿತಾ ಶಿಕ್ಷೆ ಆಗಬೇಕು. ಅದಕ್ಕೆ ನಮ್ಮ ಕಾನೂನು ವ್ಯವಸ್ಥೆ ಇದೆ. ಅದರ ಜೊತೆಗೆ ಆ ಭಗವಂತನು ಎಲ್ಲವನ್ನೂ ನೋಡುತ್ತಿರುತ್ತಾನೆ. ಪಾಪ- ಪುಣ್ಯಗಳ ಲೆಕ್ಕ ಅವನಿಡುವುದೇ ಅಲ್ಲವಾ? ಹಾಲಿಗೆ ಹಾಲು- ನೀರಿಗೆ ನೀರು ಎಂಬುದು ಆ ಭಗವಂತನ ನಿರ್ಣಯ.

ಕರ್ಕಾಟಕದಲ್ಲಿ ಶನಿ ಇರುವವರು ಎಚ್ಚರದಿಂದ ಇರಬೇಕು ಜ್ಯೋತಿಷಿಗಳು ಯಾಕೆ ಮುಂಚಿತವಾಗಿಯೇ ಎಚ್ಚರ ನೀಡುವುದಿಲ್ಲ, ಎಲ್ಲ ಅನಾಹುತ ಆದ ಮೇಲೆ ಹೇಳುತ್ತಾರೆ ಎಂಬುದು ಕೆಲವರ ಆಕ್ಷೇಪ. ಅಂಥವರಿಗಾಗಿಯೇ ಹೇಳುತ್ತಿದ್ದೇನೆ: ಯಾರಿಗೆ ಜನ್ಮ ಸಮಯದಲ್ಲಿ ಕರ್ಕಾಟಕ ರಾಶಿಯಲ್ಲಿ ಶನಿ ಇದೆಯೋ ಅಂಥವರು ಜಾಗ್ರತೆ ವಹಿಸಬೇಕು ಎಂದು ಕೆಲವು ಜ್ಯೋತಿಷಿಗಳು ಎಚ್ಚರಿಸಿದ್ದನ್ನು ಹಾಗೂ ಆ ಬಗ್ಗೆ ಲೇಖನಗಳು ಬಂದಿದ್ದನ್ನು ನಾನೇ ಓದಿದ್ದೇನೆ. ಅಂಥ ಎಚ್ಚರಿಕೆಯನ್ನು ಗಂಭೀರವಾಗಿ ಸ್ವೀಕರಿಸುವ ಮನಸ್ಥಿತಿ ಇರಬೇಕು. ಆದರೆ ಇದೆಲ್ಲವನ್ನೂ ಮೀರಿ ಅನಾಹುತಗಳು ಸಂಭವಿಸುತ್ತದೆ. ಅದು ಹೇಗೆ ಮತ್ತು ಯಾಕೆ ಅಂದರೆ, ಜ್ಯೋತಿಷಿಗಳು ಸಹ ಮನುಷ್ಯ ಮಾತ್ರರು, ಅವರು ದೇವರಲ್ಲ. ಆ ದೇವರ ಅನುಗ್ರಹ ಇದ್ದಲ್ಲಿ ವಿವೇಕ ಕೆಲಸ ಮಾಡುತ್ತದೆ; ಕ್ರೋಧದ ಕೈ ಮೇಲಾಗುವುದಿಲ್ಲ. ಸಾಡೇ ಸಾತ್ ಶನಿಯ ಕೊನೆ ಭಾಗದಲ್ಲಿ ದರ್ಶನ್ ಇದ್ದಾರೆ. ಮುಂದಿನ ಮಾರ್ಚ್ ಕೊನೆಯ ಹೊತ್ತಿಗೆ ಶನಿ ಗ್ರಹ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಅಷ್ಟರೊಳಗಾಗಿ ಧರ್ಮ- ಕರ್ಮದ ಲೆಕ್ಕ ಹಾಕುವ ಶನಿಯು ಏನು ಮಾಡುತ್ತಾನೋ!?

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಇದನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಅದರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ. ಈ ಲೇಖನದ ಸಂಪೂರ್ಣ ಜವಾಬ್ದಾರಿ ಲೇಖಕರದೇ ಆಗಿರುತ್ತದೆ. -ಸಂಪಾದಕರು)

Published On - 2:35 pm, Sun, 16 June 24

ತಾಜಾ ಸುದ್ದಿ