ಯಾವ ಹಂತದಲ್ಲಿದೆ ‘ವಿಕ್ರಾಂತ್ ರೋಣ’? ಕಿಚ್ಚನ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಇಲ್ಲಿದೆ ಅಪ್ಡೇಟ್
Vikrant Rona: ಸುದೀಪ್ ಅವರ ಮಾತುಗಳಿಂದಾಗಿ ಅಭಿಮಾನಿಗಳಿಗೆ ‘ವಿಕ್ರಾಂತ್ ರೋಣ’ ಚಿತ್ರದ ಮೇಲೆ ಇರುವ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ದೊಡ್ಡ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಲಾಕ್ಡೌನ್ ಕಾರಣದಿಂದ ಎಲ್ಲ ಸಿನಿಮಾದ ಕೆಲಸಗಳು ವಿಳಂಬ ಆಗಿವೆ. ಹಾಗಾದರೆ ವಿಕ್ರಾಂತ್ ರೋಣ ಈಗ ಯಾವ ಹಂತದಲ್ಲಿದೆ? ಅದಕ್ಕೆ ಸ್ವತಃ ಸುದೀಪ್ ಉತ್ತರ ನೀಡಿದ್ದಾರೆ. ಈ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. 3ಡಿ ವರ್ಷನ್ನಲ್ಲೂ ‘ವಿಕ್ರಾಂತ್ ರೋಣ’ ಸಿದ್ಧವಾಗುತ್ತಿದೆ. ಅದರ ಕೆಲವು ದೃಶ್ಯಗಳನ್ನು ನೋಡಿ ಸುದೀಪ್ ಖುಷಿಪಟ್ಟಿದ್ದಾರೆ.
ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ವಿಕ್ರಾಂತ್ ರೋಣ ತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ಲಾಕ್ಡೌನ್ ಸಡಿಲ ಆಗುತ್ತಿದ್ದಂತೆಯೇ ಸುದೀಪ್ ಕೂಡ ಡಬ್ಬಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಹಾಡುಗಳ ಚಿತ್ರೀಕರಣ ಮಾಡುವುದು ಬಾಕಿ ಇದೆ. ಈ ಬಗ್ಗೆ ಅವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
‘ವಿಕ್ರಾಂತ್ ರೋಣ ಚಿತ್ರಕ್ಕಾಗಿ ನಾನು ಧ್ವನಿ ನೀಡುವ ಕೆಲಸ ಪೂರ್ಣಗೊಳಿಸಿದ್ದೇನೆ. ಇದೊಂದು ಅದ್ಭುತ ಅನುಭವ. ಹೊಸ ಬಗೆಯಲ್ಲಿ ಪಾತ್ರವನ್ನು ಕಟ್ಟಿಕೊಡುತ್ತಿದ್ದೇವೆ. 3ಡಿ ವರ್ಷನ್ನ ಕೆಲವು ಸ್ಯಾಂಪಲ್ಗಳನ್ನು ನೋಡಿದೆ. ವಿಕ್ರಾಂತ್ ರೋಣನ ಪ್ರಪಂಚಕ್ಕೆ ಜೀವ ಬರುವುದನ್ನು ನೋಡಿ ಥ್ರಿಲ್ ಆಗುತ್ತದೆ. ಹಾಡುಗಳ ಶೂಟಿಂಗ್ಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಕಿಚ್ಚ ಹೇಳಿದ್ದಾರೆ.
ಸುದೀಪ್ ಅವರ ಈ ಮಾತುಗಳಿಂದಾಗಿ ಅಭಿಮಾನಿಗಳಿಗೆ ಚಿತ್ರದ ಮೇಲೆ ಇರುವ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ದೊಡ್ಡ ಬಜೆಟ್ನಲ್ಲಿ ‘ವಿಕ್ರಾಂತ್ ರೋಣ’ ಮೂಡಿಬರುತ್ತಿದೆ. ಸುದೀಪ್ ಜೊತೆ ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ನಟಿಸುತ್ತಿದ್ದಾರೆ. ಶಾಲಿನಿ ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಮೊದಲು ಫ್ಯಾಂಟಮ್ ಎಂದಿದ್ದ ಚಿತ್ರದ ಶೀರ್ಷಿಕೆಯನ್ನು ವಿಕ್ರಾಂತ್ ರೋಣ ಎಂದು ಬದಲಿಸಲಾಯಿತು. ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮೇಲೆ ಫೆ.1ರಂದು ಟೈಟಲ್ ಮತ್ತು ಟೀಸರ್ ಅನಾವರಣ ಮಾಡಲಾಗಿತ್ತು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಲಿಯಮ್ ಡೇವಿಡ್ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇದನ್ನೂ ಓದಿ:
ಸುದೀಪ್ ಹೇಳಿದ ಬುದ್ಧಿವಾದ ಮರೆತ ಬಿಗ್ ಬಾಸ್ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್?
ಸುದೀಪ್ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್ ರೋಣ’ ಪೋಸ್ಟರ್; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ