ಪುನೀತ್ ರಾಜ್‌ಕುಮಾರ್ ಮೃತಪಟ್ಟಿದ್ದು ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಕಂಬನಿ ಮಿಡಿದಿದ್ದಾರೆ. ಪುನೀತ್ ಅಂತಿಮ ದರ್ಶನ ಪಡೆದು ಬಂದಿದ್ದಾರೆ ಕಿಚ್ಚ. ಇದು ಅವರನ್ನು ತುಂಬಾನೇ ಘಾಸಿಗೊಳಿಸಿದೆ. ಈ ಕುರಿತು ಅವರು ಭಾವುಕ ಸಾಲುಗಳನ್ನು ಬರೆದು, ನುಡಿ ನಮನ ಸಲ್ಲಿಸಿದ್ದಾರೆ.
‘ಚಿತ್ರೋದ್ಯಮ ಇಂದು ಅಪೂರ್ಣವಾಗಿ ಕಾಣುತ್ತಿದೆ. ಸಮಯ ಕ್ರೂರಿ. ನಿನ್ನೆ ಪ್ರಕೃತಿಯೂ ದುಃಖಿಸಿ ಅಳುತ್ತಿರುವಂತೆ ಕಂಡಿತು. ಕಪ್ಪು ಮೋಡಗಳು ತುಂಬಿತ್ತು. ನಿಜಕ್ಕೂ ಅದು ಬೇಸರದ ದಿನ. ನಾನು ಬೆಂಗಳೂರಿಗೆ ಬಂದಿಳಿದು ಅವರ ಶವವನ್ನು ಇರಿಸಿದ್ದ ಕಡೆಗೆ ಹೊರಟೆ. ಇನ್ನೂ ಒಪ್ಪಿಕೊಳ್ಳದ ಸತ್ಯಕ್ಕೆ ಹತ್ತಿರವಾಗುತ್ತಿದ್ದಂತೆ ನನ್ನ ಉಸಿರು ಭಾರವಾಗತೊಡಗಿತು’ ಎಂದು ಸುದೀಪ್ ಪತ್ರ ಆರಂಭಿಸಿದ್ದಾರೆ.
‘ಪುನೀತ್ ಮಲಗಿದ್ದನ್ನು ನೋಡಿದಾಗ ಎಲ್ಲರೂ ಮನಸ್ಸಿನ ಮೇಲೆ ಪರ್ವತ ಹೊತ್ತು ನಿಂತಿದ್ದಾರೆ ಎನಿಸುತ್ತಿತ್ತು. ಹೇಗೆ, ಏಕೆ ಎನ್ನುವ ಪ್ರಶ್ನೆಗಳು ಮೂಡಲು ಆರಂಭವಾದವು. ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲು ಆಗಲಿಲ್ಲ. ಅವರು ನನ್ನ ಸಹೋದ್ಯೋಗಿ, ಗೆಳೆಯ. ಅವರು ಇರಬಾರದ ಜಾಗದಲ್ಲಿ ಇದ್ದರು. ನನಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲೇ ಇಲ್ಲ. ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ’ ಎಂದಿದ್ದಾರೆ ಸುದೀಪ್.
An irreplaceable Void. pic.twitter.com/fjqhvyahZZ
— Kichcha Sudeepa (@KicchaSudeep) October 30, 2021
‘ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡಿ ನನಗೆ ಮತ್ತಷ್ಟು ನೋವಾಯಿತು. ‘ಅವನು (ಪುನೀತ್) ನನಗಿಂತ 13 ವರ್ಷ ಚಿಕ್ಕವನು. ನಾನು ಅವನನ್ನು ಈ ತೋಳುಗಳಲ್ಲಿ ಹಿಡಿದಿದ್ದೇನೆ’ ಎಂದು ಶಿವಣ್ಣ ಹೇಳಿದರು. ಪ್ರತಿಯೊಬ್ಬರೂ ಆಘಾತಕ್ಕೊಳಗಾಗಿದ್ದಾರೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಅದನ್ನು ನಾವು ಒಪ್ಪಿಕೊಂಡರೂ ಅವರು ಬಿಟ್ಟು ಹೋದ ಸ್ಥಾನ ಖಾಲಿಯಾಗೇ ಇರುತ್ತದೆ. ಅದನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅದು ಓರ್ವ ಮಹಾನ್ ವ್ಯಕ್ತಿಗೆ ಸೇರಿದ ಜಾಗ, ಪುನೀತ್ ನಮ್ಮ ಪ್ರೀತಿಯ ‘ಅಪ್ಪು’ ಎಂಬ ಒಬ್ಬ ಮಹಾನ್ ಮಾನವನಿಗೆ ಸೇರಿದ ಸ್ಥಳ. Go in Peace, REST IN POWER my friend’ ಎಂದು ಸುದೀಪ್ ಭಾವುಕವಾಗಿ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸಿದ ಪುನೀತ್ ರಾಜ್‌ಕುಮಾರ್ ಪುತ್ರಿ; ಸಂಜೆ ವೇಳೆಗೆ ಬೆಂಗಳೂರಿಗೆ
Published On - 3:07 pm, Sat, 30 October 21