‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ (Serial) ಬಳಿಕ ನಟ ಅನಿರುದ್ಧ್ ಅವರ ಸೆಕೆಂಡ್ ಇನ್ನಿಂಗ್ಸ್ ಶುರುವಾದಂತಿದೆ. ಪ್ರತಿಭಾನ್ವಿತ, ಗುಡ್ ಲುಕಿಂಗ್ ನಟರಾದ ಅನಿರುದ್ಧ್ ಅವರಿಗೆ ತಕ್ಕದಾದ ಅವಕಾಶಗಳು ಅರಸಿ ಬಂದಿರಲಿಲ್ಲ. 2018 ರ ಬಳಿಕ ಯಾವುದೇ ಸಿನಿಮಾದಲ್ಲಿ ಅನಿರುದ್ಧ್ ನಟಿಸಿರಲಿಲ್ಲ. ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಷ್ಟೆ ಕಾಣಿಸಿಕೊಂಡಿದ್ದರು. ಆದರೆ ಈಗ ಚಿತ್ರರಂಗದಲ್ಲಿ ಮತ್ತೆ ಮುನ್ನೆಲೆಗೆ ಬರುವ ಮುನ್ಸೂಚನೆ ನೀಡಿದ್ದು, ಅನಿರುದ್ಧ್, ಹೊಸ ಸಿನಿಮಾ ಒಂದರಲ್ಲಿ ನಾಯಕರಾಗಿ ನಟಿಸುತ್ತಿದ್ದು, ಈ ಸಿನಿಮಾದ ಪೋಸ್ಟರ್ ಅನ್ನು ನಟ ಸುದೀಪ್ ಬಿಡುಗಡೆ ಮಾಡಿದ್ದಾರೆ.
ಈ ಹಿಂದೆ ‘ರಾಘು’ ಹೆಸರಿನ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಅನಿರುದ್ಧ್ ನಾಯಕರಾಗಿ ನಟಿಸುತ್ತಿದ್ದಾರೆ. ಇದೀಗ ಈ ಸಿನಿಮಾದ ಪೋಸ್ಟರ್ ಅನ್ನು ಅನಿರುದ್ಧ್ ಅವರ ಮಿತ್ರರೂ, ಸ್ಟಾರ್ ನಟರೂ ಆಗಿರುವ ಸುದೀಪ್ ಬಿಡುಗಡೆ ಮಾಡಿದ್ದಾರೆ. ಅನಿರುದ್ಧ್ರ ಹೊಸ ಸಿನಿಮಾಕ್ಕೆ “ಶೆಫ್ ಚಿದಂಬರ” ಎಂದು ಹೆಸರಿಡಲಾಗಿದೆ. ಸಿನಿಮಾದ ಪೋಸ್ಟರ್ ಕುತೂಹಲ ಹುಟ್ಟಿಸುವಂತಿದೆ.
ಶೆಫ್ ವೇಷ ತೊಟ್ಟ ಅನಿರುದ್ಧ್ ಕೈಯಲ್ಲಿ ಚಾಕುವೊಂದಿದ್ದು, ಅದಕ್ಕೆ ರಕ್ತದ ಕಲೆ ಮೆತ್ತಿದೆ. ಸಿನಿಮಾದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪೋಸ್ಟರ್ನಿಂದ ತಿಳಿದು ಬರುತ್ತಿದೆಯಾದರೂ ಶೆಫ್ಗೆ ಅಂಟಿದ ರಕ್ತದ ಕಲೆ ಸಿನಿಮಾ ಮರ್ಡರ್ ಮಿಸ್ಟರಿ ಇರಬಹುದೇ ಎಂಬ ಗುಮಾನಿ ಎಬ್ಬಿಸುತ್ತಿದೆ. ‘ಶೆಫ್ ಚಿದಂಬರ’ ಸಿನಿಮಾದ ಚಿತ್ರೀಕರಣ ಆಗಸ್ಟ್ 10ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ:Anirudh: ಕೋವಿಡ್ ಸಮಯದ ದೇವರುಗಳು ಇಂದು ರಸ್ತೆಯಲ್ಲಿದ್ದಾರೆ ಧರಣಿನಿರತ ನೌಕರರ ಪರ ಅನಿರುದ್ಧ್ ದನಿ
ರೂಪ ಡಿ.ಎನ್ ಅವರು ದಮ್ತಿ ಪಿಕ್ಚರ್ಸ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಶೆಫ್ ಚಿದಂಬರ’ ಸಿನಿಮಾಕ್ಕೆ ಎಂ.ಆನಂದ್ರಾಜ್ ಕತೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಅವರ ಸಿನಿಮಾಟೊಗ್ರಫಿ ಈ ಸಿನಿಮಾಕ್ಕಿದೆ, ಸಂಗೀತ ನಿರ್ದೇಶನವನ್ನು ರಿತ್ವಿಕ್ ಮುರಳಿಧರ್ ಮಾಡಿದ್ದಾರೆ. ವಿಜೇತ್ ಚಂದ್ರ ಸಂಕಲನ, ‘ವಿಕ್ರಾಂತ್ ರೋಣ’ ಸಿನಿಮಾಕ್ಕೆ ಕೆಲಸ ಮಾಡಿದ್ದ ಆಶಿಕ್ ಕುಸುಗೊಳ್ಳಿ ಡಿ.ಐ ಆಗಿ ಈ ಸಿನಿಮಾಕ್ಕೆ ಸೇವೆ ಸಲ್ಲಿಸಲಿದ್ದಾರೆ, ಸಾಹಸ ನಿರ್ದೇಶನವನ್ನು ನರಸಿಂಹಮೂರ್ತಿ ಮಾಡಲಿದ್ದು ಮಾಧುರಿ ಪರಶುರಾಮ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಲಿದ್ದಾರೆ.
ಶೆಫ್ ಚಿದಂಬರ ಸಿನಿಮಾಕ್ಕೆ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಸಿನಿಮಾದಲ್ಲಿ ನಟಿಸಿರುವ ರೆಚೆಲ್ ಡೇವಿಡ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಇನ್ನಿತರರು ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಪೋಸ್ಟರ್ ಅನಾವರಣದ ವೇಳೆ ಸುದೀಪ್ ಅವರೊಟ್ಟಿಗೆ ಅನಿರುದ್ಧ್ ಹಾಗೂ ನಿರ್ದೇಶಕ ಆಪ್ತ ಸಂಭಾಷಣೆ ನಡೆಸಿದ್ದು, ಆ ವಿಡಿಯೋವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ