ಕನ್ನಡದ ಪ್ರತಿಭೆಗಳಿಗೆ, ತಮ್ಮ ಆಪ್ತರ ಏಳಿಗೆಗೆ ಸದಾ ಬೆಂಬಲವಾಗಿ ನಿಲ್ಲುವವರು ಕಿಚ್ಚ ಸುದೀಪ್ (Kichcha Sudeep). ಸುದೀಪ್ರಿಂದ ಹಲವು ಬೆಳೆಯುವ ಪ್ರತಿಭೆಗಳು ಬೆಂಬಲ ಪಡೆದುಕೊಂಡಿದ್ದಿದೆ. ಈಗಲೂ ಸಹ ಸುದೀಪ್ ತಮಗಿಂತ ಕಿರಿಯ ನಟರ, ಹೊಸ ನಟ, ತಂತ್ರಜ್ಞರ ಸಿನಿಮಾಗಳ ಕಾರ್ಯಕ್ರಮಕ್ಕೆ ಹೋಗುತ್ತಿರುತ್ತಾರೆ. ಯಾವುದಾದರೂ ಸಿನಿಮಾ ಇಷ್ಟವಾದರೆ ಸಾಮಾಜಿಕ ಜಾಲತಾಣದ ಮೂಲಕ ಸಿನಿಮಾಕ್ಕೆ ಶುಭ ಹಾರೈಸುತ್ತಾರೆ, ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಈ ಪ್ರತಿಭಾ ಪ್ರೋತ್ಸಾಹ ಕನ್ನಡಕ್ಕೆ ಮಾತ್ರವೇ ಸೀಮಿತವಾಗಿಟ್ಟುಕೊಂಡಿಲ್ಲ ಸುದೀಪ್, ಪರಭಾಷೆಯ ಪ್ರತಿಭಾವಂತರಿಗೂ ಬೆನ್ನು ತಟ್ಟುವ ಕಾರ್ಯ ಮಾಡುತ್ತಲೇ ಇರುತ್ತಾರೆ. ಇದೀಗ ತೆಲುಗು ಯುವನಟನೊಬ್ಬನ ಸಿನಿಮಾಕ್ಕೆ ಸಾಥ್ ನೀಡುತ್ತಿದ್ದಾರೆ ಸುದೀಪ್.
ತೆಲುಗಿನ ಯುವ ನಟ ಸುಧೀರ್ ಬಾಬು ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಹರೋಮ್ ಹರ’ ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದ ಟೀಸರ್ ಪಂಚ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಹರೋಮ್ ಹರ ಟೀಸರ್ ಬಿಡುಗಡೆಗೆ ಆಗುತ್ತಿದ್ದು, ಈ ಐದು ಭಾಷೆಗಳಲ್ಲಿ ಆಯಾ ಭಾಷೆಯ ಸೂಪರ್ ಸ್ಟಾರ್ಸ್ಗಳು ಟೀಸರ್ ಬಿಡುಗಡೆ ಮಾಡಲಿದ್ದಾರೆ. ತೆಲುಗಿನಲ್ಲಿ ಪ್ರಭಾಸ್, ಕನ್ನಡದಲ್ಲಿ ಕಿಚ್ಚ ಸುದೀಪ್, ಮಲಯಾಳಂನಲ್ಲಿ ಮಮ್ಮುಟ್ಟಿ, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಹಿಂದಿ ಭಾಷೆಯಲ್ಲಿ ಟೈಗರ್ ಶ್ರಾಫ್ ಅವರುಗಳು ಸಿನಿಮಾದ ಝಲಕ್ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ:BBK 10: ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ; ಹೆಚ್ಚಾಗಿದೆ ಕಾವು
ಸುಧೀರ್ ಬಾಬು ಅವರಿಗೆ ನಾಯಕಿಯಾಗಿ ಮಾಳವಿಕ ಶರ್ಮಾ ನಟಿಸುತ್ತಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುನಿಲ್, ವಿಲನ್ ಆಗಿ ಕನ್ನಡದ ನಟ ಅರ್ಜುನ್ ಗೌಡ ನಟಿಸಿರುವುದು ವಿಶೇಷ. ‘ಹರೋಮ್ ಹರ’, ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಬಾಕಿಯಿದೆ. 1989ರಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ನಿಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ.
ಜ್ಞಾನಸಾಗರ ದ್ವಾರಕಾ ಎಂಬುವರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಹಳ ಅದ್ಧೂರಿಯಾಗಿ ಸುಮಂತ್ ಜಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಚೈತಮ್ ಭಾರದ್ವಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ ಮತ್ತು ಅರವಿಂದ್ ವಿಶ್ವನಾಥನ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೀ ಸುಬ್ರಹ್ಮಣ್ಯೇಶ್ವರ ಸಿಮಿಮಾಸ್ ಬ್ಯಾನರ್ ನಡಿ ಹರೋಮ್ ಹರಾ ಸಿನಿಮಾ ತಯಾರಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ