ವೈರಲ್ ವೈಯ್ಯಾರಿ ಹಾಡಿನಲ್ಲಿ ಶ್ರೀಲೀಲಾ, ಕಿರೀಟಿ ರೆಡ್ಡಿ ಸೂಪರ್ ಡ್ಯಾನ್ಸ್
‘ಜೂನಿಯರ್’ ಸಿನಿಮಾ ವೈರಲ್ ವೈಯ್ಯಾರಿ ಹಾಡು ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಈ ಹಾಡಿನಲ್ಲಿ ಕಿರೀಟಿ ರೆಡ್ಡಿ ಹಾಗೂ ಶ್ರೀಲೀಲಾ ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವೈರಲ್ ವೈಯ್ಯಾರಿ ಗೀತೆಗೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಹಾಡು ಸದ್ದು ಮಾಡುತ್ತಿದೆ.

ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್’ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಲು ಕಿರೀಟಿ ರೆಡ್ಡಿ (Kireeti Reddy) ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಜೂನಿಯರ್’ ಒಂದಷ್ಟು ಕಾರಣದಿಂದ ಸದ್ದು ಮಾಡುತ್ತಿದೆ. ಜನಪ್ರಿಯ ಕಲಾವಿದರು, ಘಟಾನುಘಟಿ ತಂತ್ರಜ್ಞರು ಈ ಸಿನಿಮಾದ ತಂಡದಲ್ಲಿ ಇದ್ದಾರೆ. ನಟಿ ಶ್ರೀಲೀಲಾ (Sreeleela) ಅವರು ನಾಯಕಿಯಾಗಿ ನಟಿಸಿದ್ದು, ಹೊಸ ಹಾಡು ‘ವೈರಲ್ ವೈಯ್ಯಾರಿ’ (Viral Vayyari) ಬಿಡುಗಡೆ ಆಗಿದೆ.
ಟೀಸರ್ ಮೂಲಕ ‘ಜೂನಿಯರ್’ ಸಿನಿಮಾ ಸದ್ದು ಮಾಡಿತ್ತು. ಈಗ ಈ ಸಿನಿಮಾದ 2ನೇ ಹಾಡು ಅನಾವರಣಗೊಂಡಿದೆ. ‘ಆದಿತ್ಯ ಮ್ಯೂಸಿಕ್’ ಮೂಲಕ ವೈರಲ್ ವಯ್ಯಾರಿ ಹಾಡು ಬಿಡುಗಡೆ ಆಗಿದ್ದು, ಇದರಲ್ಲಿ ಶ್ರೀಲೀಲಾ ಮತ್ತು ಕಿರೀಟಿಯ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲ ಭಾಷೆಯಿಂದ ಈ ಹಾಡು 5 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಪಡೆದು ಜನಪ್ರಿಯವಾಗುತ್ತಿದೆ.
ಪವನ್ ಭಟ್ ಅವರು ‘ವೈರಲ್ ವಯ್ಯಾರಿ’ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹರಿಪ್ರಿಯಾ ಹಾಗೂ ದೀಪಕ್ ಬ್ಲೂ ಅವರು ಧ್ವನಿಯಾಗಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನಲ್ಲಿ ಕಿರೀಟಿ ಮತ್ತು ಶ್ರೀಲೀಲಾ ಅವರ ಎನರ್ಜಿ ಭರ್ಜರಿಯಾಗಿದೆ. ಜುಲೈ 18ರಂದು ‘ಜೂನಿಯರ್’ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಈ ಸಿನಿಮಾದಲ್ಲಿ ಕಿರೀಟಿ, ಶ್ರೀಲೀಲಾ ಜತೆಗೆ ರವಿಚಂದ್ರನ್, ಜೆನಿಲಿಯಾ ಡಿಸೋಜಾ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಮಾಯಾಬಜಾರ್’ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಬಾಹುಬಲಿ’, ‘ಆರ್‌ಆರ್‌ಆರ್’ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿರುವ ಕೆ.ಕೆ.ಸೆಂಥಿಲ್ ಕುಮಾರ್ ಅವರು ‘ಜೂನಿಯರ್’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ: ವೈರಲ್ ವೈಯ್ಯಾರಿ ಆಗಲು ಶ್ರೀಲೀಲಾ ನಡೆಸಿದ ತಯಾರಿ ಹೇಗಿತ್ತು ನೋಡಿ..
‘ಜೂನಿಯರ್’ ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಅವರು ಸಾಹಸ ಸಂಯೋಜಿಸಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ನಿರ್ದೇಶನದಿಂದ ಈ ಚಿತ್ರತಂಡ ಬಲ ಹೆಚ್ಚಿದೆ. ‘ವೈರಲ್ ವಯ್ಯಾರಿ’ ಹಾಡಿನಿಂದಾಗಿ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.