ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ (Milana Nagaraj) ನಡುವೆ ಉತ್ತಮ ಹೊಂದಾಣಿಕೆ ಇದೆ. ಇಬ್ಬರೂ ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ‘ಲವ್ ಮಾಕ್ಟೇಲ್’ ಸಿನಿಮಾ ಗೆದ್ದ ಬಳಿಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದರು. ಈಗ ಇವರಿಬ್ಬರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ಅವರು ಮಿಲನಾ ನಾಗರಾಜ್ ಜೊತೆ ಸಿಡಿಮಿಡಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಶಿವಾನಿ! ಯಾರು ಈ ಶಿವಾನಿ? ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಸಂಸಾರದಲ್ಲಿ ಈಕೆ ಯಾಕೆ ಮೂಗು ತೂರಿಸುತ್ತಿದ್ದಾಳೆ? ಇಂಥ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ‘ಕೌಸಲ್ಯ ಸುಪ್ರಜಾ ರಾಮಾ’ (Kousalya Supraja Rama) ಸಿನಿಮಾದ ಸಾಂಗ್ ಟೀಸರ್ನಲ್ಲಿದೆ. ಹೌದು, ಈ ಸಿನಿಮಾದ ತಂಡದಿಂದ ಹೊಸ ಹಾಡಿನ ಟೀಸರ್ ಬಿಡುಗಡೆ ಆಗಿದೆ. ಅದರಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಅವರು ಎಲ್ಲರ ಮೇಲೂ ಸಿಡಿಮಿಡಿ ಮಾಡುವಂತಹ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
‘ಮೊಗ್ಗಿನ ಮನಸು’ ಖ್ಯಾತಿಯ ಶಶಾಂಕ್ ಅವರು ‘ಕೌಸಲ್ಯ ಸುಪ್ರಜಾ ರಾಮಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಬೃಂದಾ ಆಚಾರ್ಯ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಶಿವಾನಿ..’ ಎಂಬ ಹಾಡನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಫನ್ನಿಯಾದ ಒಂದು ಟೀಸರ್ ರಿಲೀಸ್ ಮಾಡಲಾಗಿದೆ.
ಇದನ್ನೂ ಓದಿ: ‘ಲವ್ ಮಾಕ್ಟೇಲ್ 3’ ಕೆಲಸ ಆರಂಭಿಸಿದ ಡಾರ್ಲಿಂಗ್ ಕೃಷ್ಣ; ಮುಂದುವರಿಯಲಿದೆ ಆದಿ-ನಿಧಿ ಕಥೆ
ಸಿನಿಮಾದ ಬಗ್ಗೆ ಮಾತನಾಡಲು ಶಶಾಂಕ್, ಡಾರ್ಲಿಂಗ್ ಕೃಷ್ಣ ಒಂದು ಆಫೀಸ್ನಲ್ಲಿ ಕುಳಿತಿರುತ್ತಾರೆ. ಆಗ ಅಲ್ಲಿಗೆ ನಟಿ ಬೃಂದಾ ಆಚಾರ್ಯ ಬರುತ್ತಾರೆ. ‘ಎಷ್ಟು ಹೊತ್ತಿಗೆ ಬರೋದು? ಟೈಮ್ ಸೆನ್ಸ್ ಇಲ್ಲವಾ’ ಎಂದು ಕೃಷ್ಣ ರೇಗುತ್ತಾರೆ. ‘ಶೂಟಿಂಗ್ ಮುಗಿದರೂ ಇವರು ಪಾತ್ರದಿಂದ ಹೊರಗೆ ಬಂದಿಲ್ಲವಲ್ಲ ಸರ್. ಇಲ್ಲೇ ಹೀಗಾದರೆ ಮನೆಯಲ್ಲಿ ಮಿಲನಾ ಕಥೆ ಏನಾಗಿರಬಹುದು’ ಎಂದು ನಿರ್ದೇಶಕ ಶಶಾಂಕ್ ಬಳಿ ಬೃಂದಾ ಕೇಳುತ್ತಾರೆ. ಆಗ ಕೃಷ್ಣಗೆ ಮಿಲನಾ ಕಡೆಯಿಂದ ಫೋನ್ ಕರೆ ಬರುತ್ತದೆ.
‘ಟ್ರಿಪ್ಗೆ ಹೋಗೋಕೆ ಟಿಕೆಟ್ ಬುಕ್ ಮಾಡುತ್ತಿದ್ದೇನೆ. ಸ್ವಿಜರ್ಲ್ಯಾಂಡ್ಗೆ ಹೋಗೋಣ’ ಅಂತ ಮಿಲನಾ ಹೇಳ್ತಾರೆ. ‘ಸ್ವಿಜರ್ಲ್ಯಾಂಡ್ ಬೇಡ. ಪ್ಯಾರಿಸ್ಗೆ ಹೋಗೋಣ’ ಎಂದು ಕೃಷ್ಣ ಸಿಡುಕಿನಿಂದ ಉತ್ತರಿಸುತ್ತಾರೆ. ಇದರಿಂದ ಸಿಟ್ಟಾದ ಮಿಲನಾ ಅವರು ನಿರ್ದೇಶಕರ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಈ ರೀತಿಯ ಫನ್ನಿ ಕಾನ್ಸೆಪ್ಟ್ನಲ್ಲಿ ಟೀಸರ್ ಸಿದ್ಧವಾಗಿದೆ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸುವ ರೀತಿಯಲ್ಲಿ ಈ ಟೀಸರ್ ಮೂಡಿಬಂದಿದೆ. ‘ಶಿವಾನಿ..’ ಹಾಡು ಏಪ್ರಿಲ್ 21ರಂದು ಸಂಜೆ 6 ಗಂಟೆಗೆ ಬಿಡುಗಡೆ ಆಗಲಿದೆ. ‘ಶಶಾಂಕ್ ಸಿನಿಮಾಸ್’ ಮತ್ತು ‘ಕೌರವ ಪ್ರೊಡಕ್ಷನ್ ಹೌಸ್’ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Tue, 18 April 23