Pooja Hegde: ರಾಕಿಭಾಯ್ ಯಶ್ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದು ಹೀಗೆ
Pooja Hegde: ನಟಿ ಪೂಜಾ ಹೆಗ್ಡೆ, ಕನ್ನಡದ ಸ್ಟಾರ್ ನಟ ಯಶ್ ಬಗ್ಗೆ ಮಾತನಾಡಿದ್ದು, ಅವರೊಟ್ಟಿಗೆ ನಟಿಸಲು ಕಾತರಳಾಗಿದ್ದೇನೆ ಎಂದಿದ್ದಾರೆ.
ತಮಿಳಿನ ಮುಗಮುಡಿ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಪೂಜಾ ಹೆಗ್ಡೆ (Pooja Hegde), ಅದಾದ ಬಳಕ ಹೃತಿಕ್ ರೋಷನ್ ಜೊತೆಗೆ ಮೊಹಂಜೊದಾರೊ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದರಾದರೂ ಅಲ್ಲಿ ಹಿಟ್ ಆಗದೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿ ಇಲ್ಲಿಯೇ ಖ್ಯಾತಿ, ಹಣ ಗಳಿಸಿ ಬಹುತೇಕ ಇಲ್ಲಿಯೇ ಸೆಟಲ್ ಆಗಿದ್ದಾರೆ. ನಟಿ ಪೂಜಾ ಹೆಗ್ಡೆ ಕರ್ನಾಟಕ ಮೂಲದವರೇ ಆದರೂ ಕನ್ನಡದ ಯಾವುದೇ ಸಿನಿಮಾಗಳಲ್ಲಿ ಈ ವರೆಗೆ ನಟಿಸಿಲ್ಲ. ಆದರೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಬಗ್ಗೆ ಪೂಜಾ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ (Salman Khan) ನಟಿಸಿರುವ ಕಿಸಿ ಕಿ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದು ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದರ ಭಾಗವಾಗಿಯೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಪೂಜಾ ಹೆಗ್ಡೆ, ಅಲ್ಲಿ ರಾಕಿಭಾಯ್ ಯಶ್ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶಕ ಮೊದಲಿಗೆ ನಟ ಕಮಲ್ ಹಾಸನ್ ಚಿತ್ರ ತೋರಿಸಿದಾಗ ಅವರೊಬ್ಬರು ದಂತಕತೆ ಎಂದ ಪೂಜಾ ಹೆಗ್ಡೆ, ಅದಾದ ಬಳಿಕ ನಟ ಯಶ್ ಚಿತ್ರ ನೋಡಿ ಇವರೂ ಸಹ ಲೆಜೆಂಡ್, ಕೆಜಿಎಫ್ ಆದ ಬಳಿಕ. ನಾನು ಅವರೊಟ್ಟಿಗೆ ಸರಿಯಾಗಿ ಮಾತನಾಡಿಲ್ಲ ಹಾಗಾಗಿ ಹೆಚ್ಚಿಗೇನು ಅವರ ಬಗ್ಗೆ ಹೇಳಲಾಗದು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಆದರೆ ಮುಂದಿನ ದಿನಗಳಲ್ಲಿ ಅವರೊಟ್ಟಿಗೆ ಕೆಲಸ ಮಾಡುವ ಇಚ್ಛೆಯಿದೆ ಎಂದಿದ್ದಾರೆ.
ಯಶ್ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಹಲವು ನಟರ ಬಗ್ಗೆ ನಟಿ ಪೂಜಾ ಹೆಗ್ಡೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಮಾತನಾಡುತ್ತಾ, ರಾಮ್ ಚರಣ್ ಒಳ್ಳೆಯ ಡ್ಯಾನ್ಸರ್ ನನಗೆ ಗೊತ್ತು, ಆದರೆ ರಾಮ್ ಚರಣ್ಗೆ ಹೇಳಿದ್ದೇನೆ, ನಿಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ ಇನ್ನೂ ಅದ್ಭುತವಾದ ಡ್ಯಾನ್ಸರ್ ಅವರು ಕೇವಲ ಮುಖದಲ್ಲಿ ಮಾತ್ರವೇ ಡ್ಯಾನ್ಸ್ ಮಾಡಬಲ್ಲರು. ಮಾತ್ರವಲ್ಲ ಕ್ಯಾಮೆರಾ ಮುಂದೆ ಹಾಗೂ ಕಟ್ ಹೇಳಿದ ಬಳಿಕವೂ ಅವರೊಬ್ಬ ಸ್ಟಾರ್, ಸೆಟ್ನಲ್ಲಿ ಅವರು ಕುಳಿತುಕೊಳ್ಳುವ ರೀತಿ, ನಡೆದಾಡುವ, ಮಾತನಾಡುವ ರೀತಿ ಒಂದು ರೀತಿಯ ಸ್ವಾಗ್ ಇದೆ ಅವರಿಗೆ ಎಂದಿದ್ದಾರೆ ಪೂಜಾ ಹೆಗ್ಡೆ.
ಇದನ್ನೂ ಓದಿ:Pooja Hegde: ಪೂಜಾ ಹೆಗ್ಡೆಗೆ ನಿರ್ಮಾಪಕರು ಕಾರು ಕೊಡಿಸಿದ್ದು ನಿಜವೇ? ಮೌನ ಮುರಿದ ಬಹುಬೇಡಿಕೆಯ ನಟಿ
ರಜನೀಕಾಂತ್ ಬಗ್ಗೆಯೂ ಮಾತನಾಡಿರುವ ನಟಿ ಪೂಜಾ ಹೆಗ್ಡೆ, ಅವರ ಮಾನವೀಯ ಗುಣ ನನಗೆ ಬಹಳ ಇಷ್ಟವಾಗುತ್ತದೆ. ಅವರು ಮಾತನಾಡುವ ರೀತಿ, ಬಹಳ ಸರಳ ಅವರ ವ್ಯಕ್ತಿತ್ವ ನನಗೆ ಬಹಳ ಹಿಡಿಸುತ್ತದೆ ಎಂದಿದ್ದಾರೆ. ಕೊನೆಯದಾಗಿ ಅವರ ಸಹನಟರಾಗಿದ್ದ ಜೂ ಎನ್ಟಿಆರ್ ಬಗ್ಗೆ ಮಾತನಾಡಿರುವ ಪೂಜಾ, ಜೂ ಎನ್ಟಿಆರ್ ಬಹಳ ಎನರ್ಜಿ ಇರುವ ವ್ಯಕ್ತಿ, ಅವರು ಸೆಟ್ಗೆ ಬಂದರೆ ಸಾಕು ಸೆಟ್ನಲ್ಲಿ ಒಂದು ರೀತಿಯ ಎನರ್ಜಿ ತುಂಬಿಕೊಳ್ಳುತ್ತದೆ. ಜೊತೆಗೆ ಅದ್ಭುತವಾದ ವ್ಯಕ್ತಿ, ಸೆಟ್ನಲ್ಲಿ ಎಲ್ಲರನ್ನೂ ನಗಿಸುತ್ತಾ ಉತ್ಸಾಹದಿಂದ ಇರುವಂತೆ ನೋಡಿಕೊಳ್ಳುತ್ತಾರೆ ಎಂದಿದ್ದಾರೆ ಪೂಜಾ ಹೆಗ್ಡೆ.
ಪೂಜಾ ಹೆಗ್ಡೆಯದ್ದು ಉಡುಪಿ ಮೂಲ. ಅವರ ತಂದೆ ಮಂಜುನಾಥ ಹೆಗ್ಡೆ ಮತ್ತು ತಾಯಿ ಲತಾ ಹೆಗ್ಡೆ. ಆದರೆ ಪೂಜಾ ಶಾಲೆ-ಕಾಲೇಜು ಕಲಿತಿದ್ದೆಲ್ಲವೂ ಮುಂಬೈನಲ್ಲಿ. ತುಳು ಮಾತನಾಡುವುದು ಬಲ್ಲ ಪೂಜಾ ಹೆಗ್ಡೆ ಈವರೆಗೆ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಿ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿರುವ ಪೂಜಾ ಹೆಗ್ಡೆ, ಅದರ ಜೊತೆಗೆ ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 am, Wed, 19 April 23