ನಟ, ಆ್ಯಂಕರ್ ಹಾಗೂ ಆರ್ಸಿಬಿ ಇನ್ಸೈಡರ್ ದ್ಯಾನಿಶ್ ಸೇಠ್ ಸಹೋದರಿ ಕುಬ್ರಾ ಸೇಠ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಅವರು ಈಗಾಗಲೇ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕುಬ್ರಾ ಸೇಠ್ ಅವರಿಗೆ ಇಂದು (ಜುಲೈ 26) ಜನ್ಮದಿನ. ಅವರಿಗೆ ಈಗ 41 ವರ್ಷ ವಯಸ್ಸು ಎನ್ನಲಾಗಿದೆ. ಈ ಮೊದಲು ಅವರು ಹಳೆಯ ಘಟನೆ ಒಂದನ್ನು ನೆನಪು ಮಾಡಿಕೊಂಡಿದ್ದರು. ಈ ಘಟನೆ ಬಗ್ಗೆ ವಿವರಿಸುವಾಗ ಅವರು ಭಾವುಕರಾಗಿದ್ದರು.
‘ಸೇಕ್ರೆಡ್ ಗೇಮ್ಸ್’ ವೆಬ್ ಸರಣಿ ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆಯಿತು. ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕುಬ್ರಾ ಸೇಠ್ ಕುಕೂ ಹೆಸರಿನ ತೃತೀಯಲಿಂಗಿ ಪಾತ್ರ ಮಾಡಿದ್ದರು. ಈ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್ ಸೀರಿಸ್ನಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ದೃಶ್ಯ ಶೂಟ್ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಬಗ್ಗೆ ಕುಬ್ರಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಡಾನ್ ಗಣೇಶ್ ಕಾಯ್ತೊಂಡೆಗೆ (ನವಾಜುದ್ದೀನ್ ಸಿದ್ಧಕಿ) ಕುಕೂ (ಕುಬ್ರಾ ಸೇಟ್) ಮೇಲೆ ಪ್ರೀತಿ ಮೂಡುವ ರೀತಿಯ ದೃಶ್ಯ ‘ಸೇಕ್ರೆಡ್ ಗೇಮ್ಸ್’ ಸೀರಿಸ್ನಲ್ಲಿ ಇದೆ. ಇಬ್ಬರೂ ಒಂದೆಡೆ ಸೇರುತ್ತಾರೆ. ಈ ವೇಳೆ ಇಬ್ಬರ ನಡುವೆ ಇಂಟಿಮೇಟ್ ದೃಶ್ಯಗಳು ಇವೆ. ಇಬ್ಬರ ನಡುವೆ ಮೊಳೆತ ಪ್ರೀತಿಯನ್ನು ವ್ಯಕ್ತಪಡಿಸಲು ಈ ದೃಶ್ಯದ ಅವಶ್ಯಕತೆ ಇತ್ತು ಎಂದು ನಿರ್ದೇಶಕರು ವಿವರಿಸಿದ್ದರು. ಇದನ್ನು ಶೂಟ್ ಮಾಡುವುದು ಕುಬ್ರಾಗೆ ಅಷ್ಟು ಸುಲಭವಾಗಿರಲಿಲ್ಲ. ಈ ದೃಶ್ಯದ ಶೂಟ್ ಮಾಡುವಾಗ ಬರೋಬ್ಬರಿ ಏಳು ಟೇಕ್ ತೆಗೆದುಕೊಳ್ಳಲಾಗಿತ್ತು. ಇದರಿಂದ ಕುಬ್ರಾ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲದ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದರು.
‘ಇಂಟಿಮೇಟ್ ದೃಶ್ಯವನ್ನು ಆರು ಬಾರಿ ಶೂಟ್ ಮಾಡಲಾಗಿತ್ತು. ಆದರೆ, ನಿರ್ದೇಶಕರಿಗೆ ದೃಶ್ಯದ ಬಗ್ಗೆ ಖುಷಿ ಇರಲಿಲ್ಲ. ಏಳನೇ ಬಾರಿಗೆ ಶೂಟ್ ಮಾಡಿ ಮುಗಿಸಿದೆ. ನಂತರ ನಾನು ನೆಲದಮೇಲೆ ಮಲಗಿಕೊಂಡು ಬಿಕ್ಕಿಬಿಕ್ಕಿ ಅತ್ತೆ. ನಾನು ತುಂಬಾನೇ ಭಾವುಕಳಾಗಿದ್ದೆ. ನಿರ್ದೇಶಕರು ಬಂದು ನೀವು ಹೊರಗೆ ಕಾಯಬಹುದು ಎಂದರು. ಆಗ ನನ್ನ ದೃಶ್ಯದ ಶೂಟ್ ಮುಗಿದಿದೆ ಎಂಬುದು ಖಚಿತವಾಗಿತ್ತು. ಆದಾಗ್ಯೂ ನಾನು ನೆಲದ ಮೇಲೆ ಮಲಗಿಕೊಂಡು ಅಳುತ್ತಲೇ ಇದ್ದೆ. ಆಗ ನವಾಜುದ್ದೀನ್ ಸಿದ್ಧಕಿ ಅವರು ಬಂದು, ನೀವು ಹೊರ ಹೋಗಬಹುದು. ನನ್ನ ದೃಶ್ಯದ ಶೂಟಿಂಗ್ ಇದೆ ಎಂದಿದ್ದರು’ ಎಂದು ಹಳೆಯ ಘಟನೆ ವಿವರಿಸಿದ್ದಾರೆ ಕುಬ್ರಾ.
ಇದನ್ನೂ ಓದಿ: ದಾನಿಶ್ ಸೇಠ್ ನೋಡಿದ್ದು ಯಾವ ‘ಕಲ್ಕಿ’ ಸಿನಿಮಾ? ಕತೆ ಭಿನ್ನವಾಗಿದೆಯಲ್ಲ
‘ಸೇಕ್ರೆಡ್ ಗೇಮ್ಸ್’ ಎರಡು ಸೀಸನ್ ಪ್ರಸಾರವಾಗಿದೆ. ನೆಟ್ಫ್ಲಿಕ್ಸ್ನಲ್ಲಿ ಇದು ಪ್ರಸಾರವಾಗಿದೆ. ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವಾನೆ, ನೀರಜ್ ಗಾಯ್ವನ್ ಇದನ್ನು ನಿರ್ದೇಶಿಸಿದ್ದಾರೆ. ಸೈಫ್ ಅಲಿ ಖಾನ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಎರಡನೇ ಸೀಸನ್ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:48 am, Sat, 27 July 24