‘ಟಾಕ್ಸಿಕ್​’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ? ಯಶ್​ ಸಿನಿಮಾ ತಡವಾಗುವ ಸೂಚನೆ

ಸದ್ದು ಗದ್ದಲ ಇಲ್ಲದೇ ‘ಟಾಕ್ಸಿಕ್’ ಸಿನಿಮಾದ ಕೆಲಸಗಳನ್ನು ಮಾಡಲಾಗುತ್ತಿದೆ. ‘ರಾಕಿಂಗ್​ ಸ್ಟಾರ್​’ ಯಶ್​ ಹಾಗೂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರ ಕಾಂಬಿನೇಷನ್​ನಲ್ಲಿ ಸಿದ್ಧವಾಗುತ್ತಿರುವ ಈ ಬಹುನಿರೀಕ್ಷಿತ ಸಿನಿಮಾದ ರಿಲೀಸ್​ ಡೇಟ್​ ಬಗ್ಗೆ ಹೊಸ ಮಾಹಿತಿ ಕೇಳಿಬರುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಟಾಕ್ಸಿಕ್​’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ? ಯಶ್​ ಸಿನಿಮಾ ತಡವಾಗುವ ಸೂಚನೆ
ಯಶ್​
Follow us
ಮದನ್​ ಕುಮಾರ್​
| Updated By: Digi Tech Desk

Updated on:Aug 08, 2024 | 11:30 AM

ಬಿಗ್​ ಬಜೆಟ್​ ಸಿನಿಮಾಗಳನ್ನು ಅಂದುಕೊಂಡ ದಿನಾಂಕದಲ್ಲೇ ಬಿಡುಗಡೆ ಮಾಡುವುದು ಸವಾಲಿನ ಕೆಲಸ. ಈಗಾಗಲೇ ‘ಪುಷ್ಪ 2’ ಸಿನಿಮಾದ ರಿಲೀಸ್​ ಡೇಟ್​ ಮುಂದಕ್ಕೆ ಹೋಗಿದೆ. ಅದೇ ರೀತಿ, ‘ಟಾಕ್ಸಿಕ್​’ ಸಿನಿಮಾದ ಬಿಡುಗಡೆ ಕೂಡ ತಡವಾಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಯಶ್​ ಅವರು ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ಹೋಂ ವರ್ಕ್​ ಮಾಡಿಕೊಂಡಿದ್ದಾರೆ. ನಿರ್ದೇಶಕಿ ಗೀತು ಮೋಹನ್​ದಾಸ್​ ಜೊತೆ ಅವರು ಕೈ ಜೋಡಿಸಿದ್ದಾರೆ. ಕೆಲವು ಕಾರಣಗಳಿಂದಾಗಿ ‘ಟಾಕ್ಸಿಕ್​’ ರಿಲೀಸ್​ ಡೇಟ್ ಮುಂದಕ್ಕೆ ಹೋಗಲಿದೆ ಎಂದು ‘ಪಿಂಕ್​ವಿಲ್ಲಾ’ ವರದಿ ಮಾಡಿದೆ.

‘ಕೆವಿಎನ್​ ಪ್ರೊಡಕ್ಷನ್ಸ್​’ ಮೂಲಕ ‘ಟಾಕ್ಸಿಕ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಇದು ಬೃಹತ್​ ಬಜೆಟ್​ನ ಸಿನಿಮಾ ಆದ್ದರಿಂದ ಅದ್ದೂರಿ ಸೆಟ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಯಶ್​ ಜೊತೆ ಅನೇಕ ಖ್ಯಾತ ಕಲಾವಿದರು ಅಭಿನಯಿಸುತ್ತಿದ್ದಾರೆ. ಅವರೆಲ್ಲರ ಡೇಟ್ಸ್​ ಹೊಂದಾಣಿಕೆ ಮಾಡುವುದು ನಿಜಕ್ಕೂ ಕಷ್ಟದ ಕೆಲಸ. ಈ ಕಾರಣದಿಂದಲೇ ಸಿನಿಮಾದ ಶೂಟಿಂಗ್​ ತಡವಾಗಲಿದೆ ಎಂದು ಹೇಳಲಾಗಿದೆ.

‘ಟಾಕ್ಸಿಕ್​’ ಸಿನಿಮಾದ ಟೈಟಲ್​ ಟೀಸರ್​ ಬಿಡುಗಡೆಯಾಗಿ 7 ತಿಂಗಳು ಕಳೆದಿವೆ. ಆ ಟೀಸರ್​ನಲ್ಲೇ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿತ್ತು. 2025ರ ಏಪ್ರಿಲ್​ 10ರಂದು ಸಿನಿಮಾವನ್ನು ತೆರೆಕಾಣಿಸುವುದಾಗಿ ತಿಳಿಸಲಾಗಿತ್ತು. ಟೈಟಲ್​ ಟೀಸರ್​ ಬಿಡುಗಡೆ ಆದ ಬಳಿಕ ಬೇರೆ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ. ಎಲ್ಲ ಕೆಲಸಗಳನ್ನು ಸಖತ್​ ಗೌಪ್ಯವಾಗಿ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್​’ ಸಿನಿಮಾದಲ್ಲಿ ಯಶ್​ ಎದುರು ವಿಲನ್​ ಆಗ್ತಾರಾ ಈ ಸುಂದರಿ?

ಕಾರಣಾಂತರಗಳಿಂದ ‘ಟಾಕ್ಸಿಕ್​’ ಶೂಟಿಂಗ್ ತಡವಾಗುತ್ತಿದೆ. ಹಾಗಾಗಿ 2025ರ ಏಪ್ರಿಲ್​ 10ರಂದು ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಇದೆ. ನೂರಾರು ದಿನಗಳ ಕಾಲ ಶೂಟಿಂಗ್​ ನಡೆಯಬೇಕಿದೆ. ಪೋಸ್ಟ್ ಪ್ರೊಡಕ್ಷನ್​ ಕೆಲಸಗಳಿಗೂ ಸಾಕಷ್ಟು ಸಮಯ ಹಿಡಿಯಲಿದೆ. ಹೀಗಾಗಿ ಚಿತ್ರದ ರಿಲೀಸ್​ ದಿನಾಂಕ ಮುಂದೂಡುವುದು ಅನಿವಾರ್ಯ. ಶೀಘ್ರದಲ್ಲೇ ಈ ಬಗ್ಗೆ ತಂಡದವರು ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ‘ಪಿಂಕ್​ವಿಲ್ಲಾ’ ಸುದ್ದಿ ಪ್ರಕಟಿಸಿದೆ.

ಪಾತ್ರವರ್ಗದ ಕಾರಣದಿಂದಲೂ ‘ಟಾಕ್ಸಿಕ್​’ ಸಿನಿಮಾ ಸುದ್ದಿ ಆಗುತ್ತಿದೆ. ಅನೇಕ ಖ್ಯಾತ ನಟಿಯರ ಹೆಸರುಗಳು ಕೇಳಿಬರುತ್ತಿವೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:15 pm, Fri, 26 July 24