Kuri Prathap: ಹೊಸ ಚಿತ್ರದಲ್ಲಿ ಕುರಿ ಪ್ರತಾಪ್​ ಹೀರೋ.. ಆದ್ರೆ ನಾಯಕಿಯ ಭೇಟಿಗೆ ಅವಕಾಶವೇ ಇಲ್ಲ!

| Updated By: ಸಾಧು ಶ್ರೀನಾಥ್​

Updated on: Feb 17, 2021 | 3:14 PM

Kuri Prathap: ಕನ್ನಡದಲ್ಲಿ ಕಾಮಿಡಿಯನ್​ ಆಗಿದ್ದ ನಟ ಶರಣ್ ನಂತರ ಹೀರೋ ಆಗಿದ್ದರು. ಆ ನಂತರ ಪೋಷಕ ಪಾತ್ರ ಮಾಡುವುದನ್ನು ನಿಲ್ಲಿಸಿದ್ದರು. ಆದರೆ, ಕುರಿ ಪ್ರತಾಪ್​ ಆ ರೀತಿ ಮಾಡುವುದಿಲ್ಲವಂತೆ.

Kuri Prathap: ಹೊಸ ಚಿತ್ರದಲ್ಲಿ ಕುರಿ ಪ್ರತಾಪ್​ ಹೀರೋ.. ಆದ್ರೆ ನಾಯಕಿಯ ಭೇಟಿಗೆ ಅವಕಾಶವೇ ಇಲ್ಲ!
ಕುರಿ ಪ್ರತಾಪ್​
Follow us on

ಕಾಮಿಡಿಯನ್​ಗಳಾಗಿ ಕಾಣಿಸಿಕೊಂಡ ನಂತರ ಹೀರೋ ಆಗುವ ಪ್ರಯತ್ನವನ್ನು ಕನ್ನಡ ಚಿತ್ರರಂಗದಲ್ಲಿ ಅನೇಕರು ಮಾಡಿದ್ದಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡರೆ, ಇನ್ನೂ ಕೆಲವರು ಸೋತಿದ್ದಾರೆ. ಈಗ ಕನ್ನಡದ ಹಾಸ್ಯ ನಟ ಕುರಿ ಪ್ರತಾಪ್​ (Kuri Prathap) ಇದೇ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಹೀರೋ ಆಗಿ ತೆರೆಮೇಲೆ ಬರುತ್ತಿದ್ದಾರೆ.

ಚಿತ್ರಕ್ಕೆ ‘ಆರ್​ಸಿ ಬ್ರದರ್’​ ಎಂದು ನಾಮಕರಣ ಮಾಡಲಾಗಿದೆ. ನಿರ್ದೇಶಕ ಪ್ರಕಾಶ್​ ಕುಮಾರ್​ ಈ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಕುರಿ ಪ್ರತಾಪ್​ ಜತೆ ತಬಲಾ ನಾಣಿ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಬಲಾ ನಾಣಿ ಅವರದ್ದು ಕುರಿ ಪ್ರತಾಪ್ ಅಣ್ಣನ ಪಾತ್ರ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಒಡಹುಟ್ಟಿದವರ ಬಾಂಧವ್ಯದ ಕತೆ.

ಮದುವೆ ಅನ್ನೋದು.. ಈ ಸಿನಿಮಾದಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸಲಿದೆಯಂತೆ. ತಬಲಾ ನಾಣಿ ಮದುವೆಗೆ ಪ್ರಯತ್ನ ಪಡುತ್ತಿರುತ್ತಾರೆ. ಆದರೆ, ಹುಡುಗಿ ಸಿಕ್ಕಿರುವುದಿಲ್ಲ. ಇನ್ನು, ಕುರಿ ಪ್ರತಾಪ್​ಗೆ ಮದುವೆ ಆದರೂ ಹೆಂಡತಿಯನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ. ಇದು ಇಡೀ ಚಿತ್ರದ ಸಾರಾಂಶ. ಸಿನಿಮಾ ಸಂಪೂರ್ಣವಾಗಿ ಹಾಸ್ಯದಿಂದ ಕೂಡಿರಲಿದೆಯಂತೆ.

ಕನ್ನಡದಲ್ಲಿ ಕಾಮಿಡಿಯನ್​ ಆಗಿದ್ದ ನಟ ಶರಣ್ ನಂತರ ಹೀರೋ ಆಗಿದ್ದರು. ಆ ನಂತರ ಪೋಷಕ ಪಾತ್ರ ಮಾಡುವುದನ್ನು ನಿಲ್ಲಿಸಿದ್ದರು. ಆದರೆ, ಕುರಿ ಪ್ರತಾಪ್​ ಆ ರೀತಿ ಮಾಡುವುದಿಲ್ಲವಂತೆ. ಅವರು ಹೀರೊ ಆದರೂ ಸ್ಟಾರ್ ಹೀರೋಗಳಿಗೆ ಸಪೋರ್ಟಿಂಗ್​ ಪಾತ್ರ ಮಾಡುವುದನ್ನು ಮುಂದು ವರಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್​ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಉಳಿದ ಪಾತ್ರವರ್ಗ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಇದನ್ನೂ ಓದಿ: ಮಜಾ ಟಾಕೀಸ್​ನಲ್ಲಿ ಕುರಿ ಪ್ರತಾಪ್​ ಸಂಭಾವನೆ ಎಷ್ಟು ಗೊತ್ತಾ?

ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ಕುರಿ ಪ್ರತಾಪ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಸಿನಿಮಾದ ನಾಯಕಿ. ಈಗಾಗಲೇ ಟೀಸರ್​ ಹಾಗೂ ಹಾಡಿನ ಮೂಲಕ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.