32 ವರ್ಷಗಳ ಬಳಿಕ ರವಿಚಂದ್ರನ್ ಜೊತೆ ನಟಿಸಲಿರುವ ಖುಷ್ಬು: ಸಿನಿಮಾ ಯಾವುದು?

|

Updated on: Apr 13, 2023 | 8:26 AM

ಸೂಪರ್ ಡೂಪರ್ ಹಿಟ್ ಜೋಡಿ ರವಿಚಂದ್ರನ್ ಹಾಗೂ ಖುಷ್ಬು ಮತ್ತೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಸಿನಿಮಾ ಒಂದರಲ್ಲಿ 32 ವರ್ಷಗಳ ಬಳಿಕ ರವಿಚಂದ್ರನ್ ಜೊತೆ ಖುಷ್ಬು ನಟಿಸಲಿದ್ದಾರೆ.

32 ವರ್ಷಗಳ ಬಳಿಕ ರವಿಚಂದ್ರನ್ ಜೊತೆ ನಟಿಸಲಿರುವ ಖುಷ್ಬು: ಸಿನಿಮಾ ಯಾವುದು?
ರವಿಚಂದ್ರನ್-ಖುಷ್ಬು
Follow us on

ರಣಧೀರ, ಅಂಜದ ಗಂಡು, ಯುಗಪುರುಷ ಸೂಪರ್ ಹಿಟ್ ಸಿನಿಮಾಗಳಲ್ಲಿ ರವಿಚಂದ್ರನ್ (Ravichandran) ಜೊತೆ ನಟಿಸಿದ್ದ ನಟಿ ಖುಷ್ಬು (Kushboo Sundar) ಇದೀಗ 32 ವರ್ಷಗಳ ಸುದೀರ್ಘ ಅವಧಿಯ ಬಳಿಕ ರವಿಚಂದ್ರನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. 1991 ರಲ್ಲಿ ಬಿಡುಗಡೆ ಆಗಿದ್ದ ಶಾಂತಿ-ಕ್ರಾಂತಿ ಸಿನಿಮಾದ ಬಳಿಕ ರವಿಚಂದ್ರನ್ ಹಾಗೂ ಖುಷ್ಬು ಒಟ್ಟಿಗೆ ನಟಿಸಿರಲಿಲ್ಲ. ಶಾಂತಿ-ಕ್ರಾಂತಿ ಸಿನಿಮಾದಲ್ಲಿ ಸಹ ಖುಷ್ಬು, ರವಿಚಂದ್ರನ್​ಗೆ ಜೋಡಿಯಾಗಿರಲಿಲ್ಲ. ಇದೀಗ ಹೊಸ ಕನ್ನಡ ಸಿನಿಮಾದಲ್ಲಿ ಮತ್ತೆ ಈ ಸೂಪರ್ ಹಿಟ್ ಜೋಡಿ ಒಂದಾಗುತ್ತಿದೆ.

ಕೋರ್ಟ್ ಥ್ರಿಲ್ಲರ್ ಕತೆ ಹೊಂದಿರುವ ಸಿನಿಮಾದಲ್ಲಿ ರವಿಚಂದ್ರನ್ ಹೊಸ ರೀತಿಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾ ಇದೇ ಏಪ್ರಿಲ್ 21ರಂದು ಅಧಿಕೃತವಾಗಿ ಲಾಂಚ್ ಆಗುತ್ತಿದೆ. ಇದೇ ಸಿನಿಮಾಕ್ಕಾಗಿ ಖುಷ್ಬು ಅವರನ್ನು ಮತ್ತೊಮ್ಮೆ ಕನ್ನಡಕ್ಕೆ ಕರೆತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ನಟಿ ಖುಷ್ಬು ಅವರೊಟ್ಟಿಗೆ ಒಂದು ಸುತ್ತಿನ ಮಾತುಕತೆಯನ್ನು ನಿರ್ದೇಶಕ ಗುರುರಾಜ್ ಕುಲಕರ್ಣಿ ಮಾಡಿದ್ದಾರೆ. ಸಿನಿಮಾದ ಕತೆ ಖುಷ್ಬು ಅವರಿಗೆ ಹಿಡಿಸಿದ್ದು, ಸಿನಿಮಾಕ್ಕೆ ಡೇಟ್ಸ್ ಹೊಂದಿಕೊಳ್ಳುವ ಬಗ್ಗೆ ಚರ್ಚೆ ಆಗಬೇಕಿದೆ. ಖುಷ್ಬು ಈಗ ನಟನೆಯ ಜೊತೆಗೆ ರಾಜಕೀಯದಲ್ಲಿಯೂ ಬಹಳ ಬ್ಯುಸಿಯಾಗಿದ್ದಾರೆ. ತಮಿಳುನಾಡಿನ ಬಿಜೆಪಿಯ ಮುಖಂಡರಲ್ಲಿ ಒಬ್ಬರಾಗಿ ಖುಷ್ಬು ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಕಳೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಖುಷ್ಬು ಸೋಲು ಕಂಡರು.

ನಟಿ ಖುಷ್ಬು ಹಾಗೂ ರವಿಚಂದ್ರನ್ ಒಟ್ಟಿಗೆ ನಟಿಸಿರುವ ಸಿನಿಮಾಗಳು ಸೋತಿದ್ದೇ ಇಲ್ಲ. ಶಾಂತಿ-ಕ್ರಾಂತಿ ಸಿನಿಮಾ ಸೋತಿತಾದರೂ ಆ ಸಿನಿಮಾದಲ್ಲಿ ಖುಷ್ಬು, ರವಿಚಂದ್ರನ್ ಜೋಡಿಯಾಗಿರಲಿಲ್ಲ. ಆ ಸಿನಿಮಾದಲ್ಲಿ ಜೂಹಿ ಚಾವ್ಲಾ, ರವಿಚಂದ್ರನ್​ರ ಜೋಡಿಯಾಗಿ ನಟಿಸಿದ್ದರು. ಖುಷ್ಬು ಹಲವು ಕನ್ನಡ ಸಿನಿಮಾಗಳಲ್ಲಿ ಈ ವರೆಗೆ ನಟಿಸಿದ್ದಾರೆ. 2011 ರಲ್ಲಿ ಬಿಡುಗಡೆ ಆದ ‘ನಾನಲ್ಲ’ ಖುಷ್ಬು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ. ಅಂಬರೀಶ್, ವಿಷ್ಣುವರ್ಧನ್, ಅರ್ಜುನ್ ಸರ್ಜಾ ಇನ್ನೂ ಹಲವು ಕನ್ನಡದ ನಟರೊಟ್ಟಿಗೆ ಖುಷ್ಬು ನಟಿಸಿದ್ದಾರೆ. ಖುಷ್ಬು ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ವರ್ಗವೇ ಇತ್ತು.

ಇದನ್ನೂ ಓದಿ: KD Movie: ‘ಕೆಡಿ’ ಸಿನಿಮಾದಲ್ಲಿ ರವಿಚಂದ್ರನ್​ಗೆ ಖಡಕ್​ ಪಾತ್ರ; ಹೊಸ ವರ್ಷಕ್ಕೆ ರಿವೀಲ್​ ಆಯ್ತು ಅಣ್ಣಯ್ಯಪ್ಪ ಲುಕ್​

ಇನ್ನು ರವಿಚಂದ್ರನ್ ಅವರು ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದೆಡೆ ನಾಯಕ ನಟನಾಗಿಯೂ ನಟಿಸುತ್ತಾ, ಪೋಷಕ ನಟನಾಗಿಯೂ ನಟಿಸುತ್ತಾ ಬಹಳ ಬ್ಯುಸಿಯಾಗಿದ್ದಾರೆ. ಕೆಡಿ, ಜನಾರ್ಧನ ರೆಡ್ಡಿಯ ಪುತ್ರನ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳನ್ನು ರವಿಚಂದ್ರನ್ ಒಪ್ಪಿ ನಟಿಸುತ್ತಿದ್ದಾರೆ.

ಇನ್ನು ಖುಷ್ಬು, ಇದೇ ವರ್ಷದ ಜನವರಿಯಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ತಮಿಳಿನ ಸ್ಟಾರ್ ನಟ ವಿಜಯ್ ನಟಿಸಿದ್ದ ವಾರಿಸು ಸಿನಿಮಾದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ ನಟಿಸಿದ್ದ ತೆಲುಗು ಸಿನಿಮಾ ಆಡುವಾಳ್ಳು ಮೀಕು ಜೋಹಾರ್ಲು ಸಿನಿಮಾದಲ್ಲಿಯೂ ನಟಿಸಿದ್ದರು. ಇನ್ನೂ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಖುಷ್ಬು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ