AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanjay Dutt: ಕೆಡಿ ಸಿನಿಮಾ ಚಿತ್ರೀಕರಣದ ವೇಳೆ ಅವಘಡ, ಸಂಜಯ್ ದತ್​ಗೆ ಗಾಯ

ಧ್ರುವ ಸರ್ಜಾ ನಟಿಸಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಕೆಡಿ ಸಿನಿಮಾದ ಚಿತ್ರೀಕರಣದ ವೇಳೆ ನಟ ಸಂಜಯ್ ದತ್​ಗೆ ಗಾಯವಾಗಿದೆ.

Sanjay Dutt: ಕೆಡಿ ಸಿನಿಮಾ ಚಿತ್ರೀಕರಣದ ವೇಳೆ ಅವಘಡ, ಸಂಜಯ್ ದತ್​ಗೆ ಗಾಯ
ಸಂಜಯ್ ದತ್
ಮಂಜುನಾಥ ಸಿ.
|

Updated on: Apr 12, 2023 | 8:08 PM

Share

ಪ್ರೇಮ್ (Prem) ನಿರ್ದೇಶಿಸಿ ಧ್ರುವ ಸರ್ಜಾ (Dhruva Sarja) ನಟಿಸುತ್ತಿರುವ ಕೆಡಿ ಸಿನಿಮಾದ ಚಿತ್ರೀಕರಣದ ವೇಳೆ ಸಂಭವಿಸಿರುವ ಅವಘಡದಲ್ಲಿ ಬಾಲಿವುಡ್ ನಟ ಸಂಜಯ್ ದತ್​ಗೆ (Sanjay Dutt) ಗಾಯವಾಗಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಸಿನಿಮಾದ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು, ಈ ವೇಳೆ ಸಿಡಿಸಿದ ಬಾಂಬ್​ನಿಂದಾಗಿ ಸಂಜಯ್ ದತ್​ಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿನಿಮಾಕ್ಕಾಗಿ ಸಿಡಿಸಿದ ಬಾಂಬ್​ನಿಂದಾಗಿ ಸಂಜಯ್ ದತ್​ರ ಮೊಣಕೈ ಹಾಗೂ ಮುಖಕ್ಕೆ ಗಾಯಗಳಾಗಿವೆ ಎನ್ನಲಾಗುತ್ತಿದೆ. ಘಟನೆ ನಡೆದ ಕೂಡಲೇ ಚಿತ್ರೀಕರಣವನ್ನು ಬಂದ್ ಮಾಡಲಾಗಿದ್ದು, ಸಂಜಯ್ ದತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬರಬೇಕಿದೆ.

ಸಂಜಯ್ ದತ್ ಅವರು ತಮಿಳಿನ ಲಿಯೋ ಸಿನಿಮಾದ ಚಿತ್ರೀಕರಣ ಮುಗಿಸಿ ಕೆಡಿ ಸಿನಿಮಾದ ಶೂಟಿಂಗ್​ಗೆ ಬಂದಿದ್ದರು. ಸಂಜಯ್ ದತ್ ಅವರಿರುವ ಕೆಲವು ಆಕ್ಷನ್ ದೃಶ್ಯಗಳ ಚಿತ್ರೀಕರಣವನ್ನು ಪ್ರೇಮ್ ಅವರು ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆದರೆ ಸಂಜಯ್ ದತ್​ಗೆ ಗಂಭೀರ ಗಾಯಗಳೇನೂ ಆಗಿಲ್ಲ ಎನ್ನಲಾಗುತ್ತಿದೆ.

ಕೆಜಿಎಫ್: ಚಾಪ್ಟರ್ 2 ಸಿನಿಮಾದಲ್ಲಿ ನಟಿಸಿದ್ದ ಸಂಜಯ್ ದತ್​ಗೆ ಆ ಸಿನಿಮಾದ ಬಳಿಕ ದಕ್ಷಿಣ ಭಾರತದಲ್ಲಿ ಭಾರಿ ಬೇಡಿಕೆ ಕುದುರಿದೆ. ಕೆಡಿ ಸಿನಿಮಾದ ಜೊತೆಗೆ ತಮಿಳನಲ್ಲಿ ವಿಜಯ್ ನಟಿಸಿ, ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತರುವ ಲಿಯೋ ಸಿನಿಮಾಕ್ಕೂ ಅವರೇ ವಿಲನ್. ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರದಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ತಮ್ಮ ಪಾತ್ರದ ಶೂಟಿಂಗ್ ಮುಗಿಸಿ ಬಳಿಕ ಕೆಡಿ ಸಿನಿಮಾದ ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗವಹಿಸಿದ್ದರು ಎನ್ನಲಾಗುತ್ತಿದೆ.

ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ಮಾತ್ರವೇ ಅಲ್ಲದೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ತಮಿಳಿನ ವಿಜಯ್ ಸೇತುಪತಿ, ನಟ ರವಿಚಂದ್ರನ್ ಸಹ ನಟಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಭಾರಿ ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ನಿರ್ದೇಶಕ ಪ್ರೇಮ್. ಇದು ಪೀರಿಯಡ್ ಸಿನಿಮಾ ಆಗಿರಲಿದೆ ಎಂಬ ಮಾತುಗಳು ಸಹ ಇದ್ದು 80ರ ಕಾಲಘಟ್ಟದಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ.

ಇನ್ನು ಸಂಜಯ್ ದತ್ ದಕ್ಷಿಣದ ಸಿನಿಮಾಗಳ ಜೊತೆಗೆ ಬಾಲಿವುಡ್​ನಲ್ಲಿಯೂ ಬಹಳ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಲ್ಲಿ ಸಂಜಯ್ ದತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಹೊರತಾಗಿ ಗುಡ್ ಮಹಾರಾಜ ಹೆಸರಿನ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಗುಡ್​ಚಡಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಪ್ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ