ಅಣ್ಣಾವ್ರ ಕೊನೆಯ ದಿನ ಹೇಗಿತ್ತು? ಆಡಿದ ಕೊನೆ ಮಾತೇನು? ಪಾರ್ವತಮ್ಮನ ನೆನಪಿನ ಬುತ್ತಿಯಿಂದ
ಡಾ ರಾಜ್ಕುಮಾರ್ ನಿಧನವಾಗಿ 17 ವರ್ಷಗಳಾಗಿವೆ. ಅವರು ನಿಧನ ಹೊಂದಿದ ಆ ಕೊನೆಯ ದಿನ ಹೇಗಿತ್ತು? ಅಂದು ಅವರು ಏನು ಮಾತನಾಡಿದ್ದರು? ಏನು ಹೇಳಿದ್ದರು? ಏನು ತಿಂದಿದ್ದರು? ಪಾರ್ವತಮ್ಮನವರ ಹಳೆ ಸಂದರ್ಶನದ ಆಯ್ದ ಭಾಗದಿಂದ ಹೆಕ್ಕಿದ ನೆನಪು
ಡಾ ರಾಜ್ಕುಮಾರ್ (Dr Rajkumar) ಅಗಲಿ 17 ವರ್ಷಗಳಾದವು. ಅವರ ನೆನಪು ಎಂದೆಂದಿಗೂ ಅಜರಾಮರ. ಏಪ್ರಿಲ್ 12, 2006 ರಂದು ರಾಜ್ಕುಮಾರ್ ತಮ್ಮ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದರು. ಅಂದು ಕರ್ನಾಟಕ ಸ್ಥಬ್ಧವಾಗಿತ್ತು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ ಅಣ್ಣಾವ್ರ ಕೊನೆಯ ದಿನ ಹೇಗಿತ್ತು? ಅಣ್ಣಾವ್ರು ಅಂದು ಮನೆಯಲ್ಲಿ ಹೇಗಿದ್ದರು? ಯಾರನ್ನೆಲ್ಲ ಭೇಟಿ ಮಾಡಿದ್ದರು? ಏನು ಮಾತನಾಡಿದ್ದರು? ಅಣ್ಣಾವ್ರ ಪತ್ನಿ ಪಾರ್ವತಮ್ಮನವರು (Parvathamma Rajkumar) ಬದುಕಿದ್ದಾಗ ಜಯಂತ್ ಕಾಯ್ಕಿಣಿಯವರಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದರು.
”ಟ್ರಿನಿಟಿಯಲ್ಲಿ ಅವರಿಗೆ ಆರೋಗ್ಯ ಪರೀಕ್ಷೆ ಮಾಡಿಸಬೇಕಿತ್ತು, ಅದಕ್ಕೆ ಬುಕ್ ಮಾಡಿದ್ದೆವು. ಆದರೆ ಹಿಂದಿನ ರಾತ್ರಿ (ಏಪ್ರಿಲ್ 11, 2006) ಮಗನಿಗೆ ಹೇಳಿ ಅದನ್ನು ಕ್ಯಾನ್ಸಲ್ ಮಾಡಿಸಿ ಅಮ್ಮನಿಗೆ ಹೇಳಬೇಡ ಎಂದಿದ್ದರು. ಅದು ನನಗೆ ಗೊತ್ತಿಲ್ಲ. ನಾನು ಬೆಳಿಗ್ಗೆ ಎದ್ದು ರಾಘುಗೆ ಕೇಳಿದರೆ ಅಪ್ಪ ಕ್ಯಾನ್ಸಲ್ ಮಾಡಿಸಿದ ವಿಷಯ ಹೇಳಿದ. ಸರಿ ನಾನು ಸೊಂಟ ನೋವಿಗೆ ಫಿಸಿಯೋಥೆರಪಿ ಮಾಡಿಸಿಕೊಳ್ಳಲು ಹೂಗುವುದಿತ್ತು, ಆದರೆ ಅದು ಇನ್ನೂ ತಡವಾಗಿದ್ದರಿಂದ ನಾನು ಕಾಫಿ ಕುಡಿದು, ಪೇಪರ್ ಓದಿ ಸೋಫಾ ಮೇಲೆಯೇ ಮಲಗಿಬಿಟ್ಟೆ. ಬಳಿಕ ಎದ್ದು ಬಂದ ರಾಜ್ಕುಮಾರ್ ಅವರು ಮಲಗಿದ್ದ ನನ್ನನ್ನು ಎಬ್ಬಿಸದೆ ಸ್ನಾನಕ್ಕೆ ಹೋದರು” ಎಂದು ಅಂದಿನ ಘಟನೆಯನ್ನು ಇಂಚಿಂಚಾಗಿ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು ಪಾರ್ವತಮ್ಮ.
”ನಾನು ಎದ್ದು ಸ್ನಾನಕ್ಕೆ ಹೋಗುವ ವೇಳೆಗೆ ಅವರು ಸ್ನಾನ ಮುಗಿಸಿದ್ದರು. ನಾನು ಅವರ ಪ್ರಾಣಾಯಾಮ ಹಾಗೂ ಪೂಜೆಗೆ ವ್ಯವಸ್ಥೆ ಮಾಡಿ ಸ್ನಾನಕ್ಕೆ ಹೊರಟೆ. ನಾನು ವಾಪಸ್ ಬಂದಾಗ ಅವರು ಹೊರಗೆ ಗಾರ್ಡನ್ನಲ್ಲಿ ವಾಕಿಂಗ್ ಮಾಡುತ್ತಿದ್ದರು. ನಾನು ಪೂಜೆ ಮುಗಿಸಿ ಅವರ ಬಳಿ ಹೋಗಿ, ವ್ಯಾಯಾಮ ಮಾಡಿದಿರಾ ಎಂದೆ. ಇಲ್ಲಿ ಕೈಗೊಬ್ಬ ಕಾಲಿಗೊಬ್ಬ ಆಳುಗಳನ್ನು ಇಟ್ಟಿದ್ದೀಯ ವ್ಯಾಯಾಮ ಮಾಡುವುದೆಲ್ಲಿ, ಸುಮ್ಮನೆ ತೋಳು ಮಡಚಿಕೊಂಡಿದ್ದೇನೆ ಅಷ್ಟೆ ಎಂದು ಅಂಗಿ ತೋರಿಸಿದರು. ಬಳಿಕ, ನೀನು ಫಿಸಿಯೋಥೆರಪಿಗೆ ಹೋಗು ತಡವಾಗುತ್ತದೆ ಎಂದು ನನ್ನನ್ನು ಎಚ್ಚರಿಸಿದರು. ನೀವು ಯಾವಾಗ ಹೋಗ್ತೀರಿ ಚೆಕ್ ಅಪ್ಗೆ ಎಂದು ಕೇಳಿದರೆ, ಟುಮಾರೊ, ಡೇ ಆಫ್ಟರ್ ಟುಮಾರೊ, ಎನಿ ಟೈಮ್ ಎಂದರು. ನನಗೆ ಆಶ್ಚರ್ಯವಾಗಿ ಏನ್ರಿ ಇದು ಇಂಗ್ಲೀಷು? ಎಂದು ಇವತ್ತೇ ಚೆಕಪ್ ಮಾಡಿಸಿಕೊಳ್ಳಲು ಏನಾಗಿತ್ತು? ಎಂದು ಕೇಳಿದೆ ಅದಕ್ಕೆ ದಿಸ್ ಡೇ ಐ ಆಮ್ ಫ್ರೀ ಬರ್ಡ್ ಎಂದರು. ನನಗೆ ತುಸು ವಿಚಿತ್ರ ಎನಿಸಿತು. ಆಗ ಪುನೀತ್ ರಾಜ್ಕುಮಾರ್ ಮೊದಲ ಪುತ್ರಿ, ತಾತ ನೀವು ಚೆನ್ನಾಗಿ ಇಂಗ್ಲೀಷ್ ಮಾತಾಡ್ತೀರಂತೆ ಆದರೂ ಯಾಕೆ ನನಗೆ ಬರಲ್ಲ ಅಂತೀರ ಎಂದಳು. ಇಲ್ಲಮ್ಮ ವಯಸ್ಸಾಯ್ತಲ್ಲ ಮರೆತು ಹೋಗಿತ್ತು. ಈಗ ನಿನಗಾಗಿ ಕಲಿತಿದ್ದೀನಿ ಎಂದರು” ಎಂದ ಪಾರ್ವತಮ್ಮ, ಅಂದು ರಾಜ್ಕುಮಾರ್ ಅವರು ಫ್ರೀ ಬರ್ಡ್ ಎಂದು ಹೇಳಿದ ಮಾತು ಇಂದಿಗೂ ನೆನಪಾಗುತ್ತದೆ ಎಂದು ನೆನಪು ಮಾಡಿಕೊಂಡರು.
”ಅದಾದ ಬಳಿಕ ಮೊಮ್ಮಗಳ ಕುರಿತಾಗಿ ಮಾತನಾಡುತ್ತಾ, ಇನ್ನು ಮೇಲೆ ಅವಳು ನಿನ್ನ ಮೊಮ್ಮಗಳು ಎಂದರು. ನಾನು, ಅದ್ಯಾಕೆ ಹಾಗೆ ಆಕೆ ನಿಮ್ಮ ಮೊಮ್ಮಗಳೂ ಸಹ ಅಲ್ಲವೆ ಎಂದೆ. ಆಗ ಅವರು, ಹೇಳಿದ್ದನ್ನು ಅರ್ಥ ಮಾಡಿಕೊ ಅನರ್ಥ ಮಾಡಿಕೊಳ್ಳಬೇಡ ಎಂದರು. ಸರಿ ನಾನು ಅದೇ ಗುಂಗಲ್ಲಿ ಆಸ್ಪತ್ರೆಗೆ ಹೋಗಿ ಬಂದೆ. ನಾನು ಬಂದಾಗ ಸೋಫಾ ಮೇಲೆ ಕೂತು ಟಿವಿ ನೋಡುತ್ತಿದ್ದರು. ನಾನು ತಿಂಡಿ ತಿನ್ನಲು ಕೂತಾಗ ಅಡುಗೆಯವ ಉಪ್ಪಿಟ್ಟು ಕೊಟ್ಟ. ನಿನ್ನೆಯೂ ಇದನ್ನೇ ಮಾಡಿದ್ದೆಯಲ್ಲ ಎಂದು ಕೇಳಿದರೆ. ನಾನು ಚಿತ್ರಾನ್ನ ಮಾಡಿದ್ದೆ, ಆದರೆ ಅಪ್ಪಾಜಿಯವರು ಉಪ್ಪಿಟ್ಟು ಮಾಡು ಚೆನ್ನಾಗಿ ಮಾಡ್ತೀಯ ತಿನ್ನಬೇಕೆಂದು ಮನಸ್ಸಾಗಿದೆ ಎಂದರು ಹಾಗಾಗಿ ಉಪ್ಪಿಟ್ಟು ಮಾಡಿದೆ ಎಂದ. ಸರಿ ನಾನು ಏನೂ ಕೇಳದೆ ಉಪ್ಪಿಟ್ಟು ತಿಂದು, ಅಲ್ಲಿಯೇ ಸೊಸೆಯಂದಿರ ಜೊತೆ ಟಿವಿ ನೋಡಿ ಬಳಿಕ ರೂಂಗೆ ಹೋಗಿ ಮಲಗಿಕೊಂಡೆ” ಎಂದು ನೆನಪು ಮಾಡಿಕೊಂಡಿದ್ದರು ಪಾರ್ವತಮ್ಮ.
ಮಗಳು ಪೂರ್ಣಿಮಾ ಇದ್ದಳು ಅವಳೊಟ್ಟಿಗೆ ಮಾತನಾಡಿದ್ದಾರೆ. ಅವರು ಆ ದಿನ ನನ್ನೊಟ್ಟಿಗೆ, ಅಪ್ಪು ದೊಡ್ಡ ಮಗಳೊಟ್ಟಿಗೆ ಹಾಗೂ ಮಗಳು ಪೂರ್ಣಿಮಾ ಒಟ್ಟಿಗೆ, ಅಡುಗೆಯವನೊಟ್ಟಿಗೆ ಮಾತ್ರವೇ ಮಾತನಾಡಿದ್ದರು. ಅದಾದ ಬಳಿಕ ನನ್ನ ಸೊಸೆ ರೂಂ ಬಳಿ ಬಂದರು, ಅಪ್ಪಾಜಿ ಕನ್ನಡಕ ಸಹ ತೆಗೆಯದೆ ಸೋಫಾ ಮೇಲೆ ಮಲಗಿದ್ದಾರೆ. ನಾನು ಟಿವಿ ಆಫ್ ಮಾಡಿ, ಫ್ಯಾನ್ ತುಸು ಕಡಿಮೆ ಮಾಡಿದ್ದೇನೆ ಎಂದಳು, ಸರಿ ಎಂದು ನಾನು ಮಲಗಿದೆ. ಅದಾದ ಬಳಿಕ ಸೊಸೆ ಕೆಳಗೆ ಹೋದಾಗ ಅಪ್ಪಾಜಿ ಎರಡು ಬಾರಿ ಜೋರಾಗಿ ಉಸಿರು ತೆಗೆದುಕೊಂಡಿದ್ದು ಕೇಳಿಸಿತಂತೆ ಆಕೆಗೆ ಗಾಬರಿಯಾಗಿ ಅಡುಗೆಯವನನ್ನು ಕರೆದಿದ್ದಾರೆ. ಮನೆಯರು ತುಸು ಜೋರಾಗಿ ಓಡಾಡುತ್ತಿರುವುದು ಕೇಳಿ ನಾನು ಕೆಳಗೆ ಬಂದೆ ಅಷ್ಟರಲ್ಲೆ ಅವರ ಉಸಿತು ನಿಂತಿತ್ತು ಎನಿಸುತ್ತದೆ. ಆದರೆ ಅದೇ ನಗುಮುಖ ಹಾಗೂ ಬಿಟ್ಟ ಕಣ್ಣು ಬಿಟ್ಟಂತೆ ಇತ್ತು, ನನ್ನನ್ನೇ ನೋಡುತ್ತಿದ್ದಾರೆ ಎನಿಸಿತು. ಕೂಡಲೇ ವೈದ್ಯರನ್ನು ಮನೆಗೆ ಕರೆಸಿದೆವು ಅವರು ನೋಡಿದರು ಅಲ್ಲಿಗೆ ಎಲ್ಲವೂ ಮುಗಿಯಿತು” ಎಂದು ಭಾವುಕರಾಗಿ ನೆನಪಿಸಿಕೊಂಡಿದ್ದರು ಪಾರ್ವತಮ್ಮ ರಾಜ್ಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ