ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ

ಇತ್ತೀಚೆಗೆ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿರುವ ‘ಲ್ಯಾಂಡ್​ಲಾರ್ಡ್’ ಚಿತ್ರಕ್ಕೆ ಈಗ ವಿದ್ಯಾರ್ಥಿಗಳ ಬೆಂಬಲ ಸಿಕ್ಕಿದೆ. ಈ ಸಿನಿಮಾದ ನಾಯಕ ನಟ ದುನಿಯಾ ವಿಜಯ್ ಅವರು ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ಜಾಥಾ ಮಾಡಿದ್ದಾರೆ. ಈ ಜಾಥಾ ವೇಳೆ ಹೆಣ್ಣುಮಗುವಿಗೆ ಭೀಮ ಪುತ್ರಿ ಎಂದು ನಾಮಕರಣ ಮಾಡಲಾಯಿತು. ಆ ಬಗ್ಗೆ ಇಲ್ಲಿದೆ ವಿವರ..

ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ
Duniya Vijay With Bangalore University Students

Updated on: Jan 28, 2026 | 7:23 PM

ದುನಿಯಾ ವಿಜಯ್ (Duniya Vijay), ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ, ಶಿಶಿರ್ ಬೈಕಾಡಿ ಮುಂತಾದವರು ನಟಿಸಿರುವ ‘ಲ್ಯಾಂಡ್​ಲಾರ್ಡ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿದೆ. ಈ ಸಿನಿಮಾಗೆ ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡಿದ್ದಾರೆ.ಈ ಸಿನಿಮಾದಲ್ಲಿನ ಕಲಾವಿದರ ನಟನೆ, ಕಥೆ, ಚಿತ್ರದ ಆಶಯವನ್ನು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಈ ಪ್ರಯುಕ್ತ ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾ ತಂಡದವರು ಇಂದು (ಜನವರಿ 28) ಮಧ್ಯಾಹ್ನ 1.45ಕ್ಕೆ ವಿದ್ಯಾರ್ಥಿಗಳ ಜೊತೆ ಜಾಥಾ ನಡೆಸಿದರು.

‘ಲ್ಯಾಂಡ್​ಲಾರ್ಡ್’ ಸಿನಿಮಾ ತಂಡ ನಡೆಸಿದ ಜಾಥಾದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಅವರ ಜೊತೆ ನಟ ದುನಿಯಾ ವಿಜಯ್ ಅವರು ಭಾಗಿಯಾದರು. ಸುಮಾರು 2 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಎಲ್ಲರೂ ಸಾಗಿದರು. ಆ ಮೂಲಕ ‘ಲ್ಯಾಂಡ್​ಲಾರ್ಡ್’ ಸಿನಿಮಾವನ್ನು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ಮಾಡಲಾಯಿತು.

ಈ ಸಂಧರ್ಭದಲ್ಲಿ ದುನಿಯಾ ವಿಜಯ್ ಅವರು ಒಂದು ಹೆಣ್ಣು ಮಗುವಿಗೆ ಭೀಮ ಪುತ್ರಿ ಎಂದು ಹೆಸರಿಟ್ಟು ನಾಮಕರಣ ಮಾಡಿದ್ದು ವಿಶೇಷವಾಗಿತ್ತು. ಆ ಮಗುವಿನ ಭವಿಷ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 25 ಸಾವಿರ ರೂಪಾಯಿ ಮತ್ತು ದುನಿಯಾ ವಿಜಯ್ ಅವರು 75 ಸಾವಿರ ರೂಪಾಯಿ ಸೇರಿಸಿ ಒಟ್ಟು 1 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಲಾಯಿತು.

ಜಾಥಾ ಬಳಿಕ ದುನಿಯಾ ವಿಜಯ್ ಅವರು ಮಾತನಾಡಿದರು. ‘ಅಂಬೇಡ್ಕರ್ ಅವರು ಸಂವಿಧಾನ ಬರೆದಿರೋದು ಎಲ್ಲರಿಗೂ. ಯಾವುದೇ ಪ್ರತ್ಯೇಕ ಜಾತಿಗೋಸ್ಕರ ಅಲ್ಲ. ಪ್ರತಿಯೊಬ್ಬರಿಗೂ ಈ ಸಂವಿಧಾನ ಬೇಕು. ಈ ಹೋರಾಟ ಯಾರದ್ದೋ ಮೇಲಿನ ದ್ವೇಷಕ್ಕಾಗಿ ಅಲ್ಲ. ಅಥವಾ ಕಿಚ್ಚಿಗಲ್ಲ ಇದು ನನ್ನ ಸಂವಿಧಾನಕ್ಕಾಗಿ’ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಹಾಗೂ ಬೆಂಗಳೂರ ವಿಶ್ವವಿದ್ಯಾಲಯಕ್ಕೆ ಅವರು ಧನ್ಯವಾದ ತಿಳಿಸಿದರು.

ಇದನ್ನೂ ಓದಿ: Landlord Movie Review: ಅಸಮಾನತೆ, ಅನ್ಯಾಯದ ಇತಿಹಾಸ ಕೆದಕಿದ ‘ಲ್ಯಾಂಡ್​ಲಾರ್ಡ್’

ಇತ್ತೀಚೆಗೆ ‘ಲ್ಯಾಂಡ್​ಲಾರ್ಡ್’ ಸಿನಿಮಾ ತಂಡದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದರು. ಸಿನಿಮಾದ ಆಶಯಕ್ಕೆ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದ್ದರು. ಅಲ್ಲದೇ ತಾವು ಕೂಡ ಈ ಸಿನಿಮಾವನ್ನು ನೋಡುವುದಾಗಿ ತಿಳಿಸಿದ್ದರು. ರೆಟ್ರೋ ಕಾಲದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಲವು ಕಡೆಗಳಲ್ಲಿ ಹೌಸ್​ಫುಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.