‘ಸು ಫ್ರಮ್ ಸೋ’ ಸುಮೇಧ್ ಬತ್ತಳಿಕೆಯಿಂದ ಬಂತು ‘ತುಳಸಿ’; ಹಾಡು ಕಿವಿಗೆ ಇಂಪು
ಸಂಗೀತ ಸಂಯೋಜಕ ಸುಮೇಧ್ ಅವರ 'ತುಳಸಿ' ಹಾಡು ಜನಪ್ರಿಯತೆ ಗಳಿಸಿದೆ. ಪುರಂದರ ದಾಸರ ದಾಸಪದಗಳನ್ನು ಆಧರಿಸಿದ ಈ ಹಾಡು, ಉತ್ತಮ ಸಂಗೀತ ಮತ್ತು ಛಾಯಾಗ್ರಹಣದಿಂದ ಗಮನ ಸೆಳೆದಿದೆ. ಕನ್ನಡದಲ್ಲಿ ಆಲ್ಬಂ ಹಾಡುಗಳ ಕೊರತೆಯನ್ನು ನೀಗಿಸಲು ಸುಮೇಧ್ ಅವರ ಪ್ರಯತ್ನ ಶ್ಲಾಘನೀಯ. ಅವರ ಈ ಹಾಡು ಇತರ ಆಲ್ಬಂಗಳಿಗೆ ಪ್ರೇರಣೆಯಾಗಿದೆ.

‘ಸು ಫ್ರಮ್ ಸೋ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ (Sumedh). ಕಾಲೇಜು ಓದುವಾಗಲೇ ಇಂಪಾದ ಹಾಡುಗಳನ್ನು ನೀಡಿ ಗಮನ ಸೆಳೆದವರು ಅವರು. ಅವರು ಈಗ ತಮ್ಮದೇ ಆದ ಕ್ರಿಯೇಷನ್ಗೆ ಇಳಿದಿದ್ದಾರೆ. ಆಲ್ಬಂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ‘ತುಳಸಿ’ ಹಾಡು ಮೆಚ್ಚುಗೆ ಪಡೆದುಕೊಂಡಿದೆ. ನೋಡಲು ಹಾಗೂ ಕೇಳಲೂ ಮುದ ನೀಡುವ ಹಾಡು ಟ್ರೆಂಡ್ನಲ್ಲಿದೆ.
‘ತುಳಸಿ’ ಎಂಬುದು ಪುರಂದರ ದಾಸರ ದಾಸಪದಗಳಿಂದ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ ಅವರು. ಹಾಡು ಕೇಳಲು ಎಷ್ಟು ಇಂಪಾಗಿದೆಯೋ, ಛಾಯಾಗ್ರಹಣ ವಿಷಯದಲ್ಲೂ ಅಷ್ಟೇ ಅಚ್ಚುಕಟ್ಟನ್ನು ಪಾಲಿಸಲಾಗಿದೆ. ಬಾಲ ಕಲಾವಿದೆಯಾಗಿ ಪ್ರಣ್ವಿ ಅಕ್ಷಯ್, ಮತ್ತೊಂದು ಪಾತ್ರದಲ್ಲಿ ಸುಷ್ಮಿತಾ ಭಟ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಮೂಲಕ ಸೂಕ್ಷ್ಮ ವಿಷಯಗಳನ್ನು ಹೇಳುವ ಪ್ರಯತ್ನ ನಡಿದೆ.
‘ತುಳಸಿ’ ಹಾಡನ್ನು ನಿರ್ದೇಶನ ಮಾಡಿದ್ದು ವಿಷ್ಣುರಾವ್. ಪುರಂದರ ದಾಸರ ಸಾಲುಗಳಿಗೆ ಎಲ್ಲಿಯೂ ದಕ್ಕೆ ಆಗದಂತೆ ಸುಂದರವಾಗಿ ಹಾಡನ್ನು ಕಟ್ಟಿಕೊಟ್ಟಿದ್ದಾರೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ನೋಡುತ್ತಾ, ಹಾಡನ್ನು ಕೇಳಿದರೆ ಬೇರೊಂದು ಲೋಕ ತೆರೆದುಕೊಳ್ಳುತ್ತದೆ.
ಹಾಡಿನ ಬಗ್ಗೆ ಮಾತನಾಡಿದ ಸುಮೇಧ್, ‘ರೆಕ್ಟ್ಯಾಂಗಲ್ ತಂಡ ಹಾಡಿನ ಛಾಯಾಗ್ರಗಣ ಮಾಡಿದೆ. ವಿಷ್ಣುರಾವ್ ಅವರು ಇದನ್ನು ನಿರ್ದೇಶನ ಮಾಡಿದರು. ಕನ್ನಡದಲ್ಲಿ ಮ್ಯೂಸಿಕ್ ಆಲ್ಬಂಗಳು ಕಡಿಮೆ. ಅದು ನಮ್ಮ ದುರಾದೃಷ್ಟ. ನಮ್ಮವರು ಯಾವುದಕ್ಕೂ ಕಡಿಮೆ ಇಲ್ಲ. ಒಳ್ಳೆಯ ಸಾಹಿತ್ಯ ಬರೆಯುವವರು ಇದ್ದಾರೆ’ ಎಂದಿದ್ದಾರೆ. ಹೆಚ್ಚೆಚ್ಚು ಆಲ್ಬಂಗಳು ಬರಬೇಕು ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ: ಕಾಲೇಜು ಹೋಗೋ ವಯಸ್ಸಲ್ಲಿ ‘ಸು ಫ್ರಮ್ ಸೋ’ಗೆ ಮ್ಯೂಸಿಕ್ ಮಾಡಿದ ಸುಮೇಧ್; ಇಲ್ಲಿದೆ ಹಿನ್ನೆಲೆ
ಸುಮೇಧ್ ಅವರು ಈ ಮೊದಲು ‘ಮಾಯೆ’, ‘ತಾವರೆ’, ‘ಕರ್ಮ’ ಹಾಡುಗಳನ್ನು ಮಾಡಿದ್ದರು. ಈಗ ‘ತುಳಸಿ’ ಹಾಡು ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವುದರಿಂದ ಉಳಿದ ಹಾಡುಗಳಿಗೆ ವೀಕ್ಷಣೆ ಸಿಗುತ್ತಿದೆ. ಜನಪ್ರಿಯತೆ ಸಿಗಬೇಕು ಎಂದು ಈ ಹಾಡುಗಳನ್ನು ಅವರು ಮಾಡಿಲ್ಲವಂತೆ. ‘ತುಳಸಿ’ ಹಾಡಿಗೆ ಸಿಕ್ಕ ಜನಪ್ರಿಯತೆ ಅವರು ಬೋನಸ್ ಎಂದು ಪರಿಗಣಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




