ಫೈಟರ್ ಸಾವು ಕೇಸ್: ಬಂಧನ ಭೀತಿಯಿಂದ ‌ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್​ ಅರ್ಜಿ

| Updated By: ಮದನ್​ ಕುಮಾರ್​

Updated on: Aug 25, 2021 | 7:57 AM

ಫೈಟರ್​ ವಿವೇಕ್​ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಅಜಯ್​ ರಾವ್​ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದೇ ಜಾಮೀನಿನ ಮೊರೆ ಹೋಗಿದ್ದಾರೆ.

ಫೈಟರ್ ಸಾವು ಕೇಸ್: ಬಂಧನ ಭೀತಿಯಿಂದ ‌ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್​ ಅರ್ಜಿ
ಅಜಯ್​ ರಾವ್​, ರಚಿತಾ ರಾಮ್​
Follow us on

‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ವಿದ್ಯುತ್ ತಗುಲಿ ಫೈಟರ್​ ವಿವೇಕ್​ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಚಿತ್ರದ ಹೀರೋ ಅಜಯ್​ ರಾವ್​ ಅವರಿಗೆ ಬಂಧನ ಭೀತಿ ಎದುರಾಗಿದೆ. ಹಾಗಾಗಿ ಅವರು ‌ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಮನಗರದ 3ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ಗೆ ಅವರು ಅರ್ಜಿ ಸಲ್ಲಿಸಿದ್ದಾರೆ. ಆ.26ರಂದು ಅಜಯ್ ರಾವ್​ ಅವರ ಜಾಮೀನು ಅರ್ಜಿ‌ ವಿಚಾರಣೆ ನಡೆಯಲಿದೆ.

ಆ.9ರಂದು ಶೂಟಿಂಗ್ ವೇಳೆ ಫೈಟರ್ ವಿವೇಕ್ ಮೃತಪಟ್ಟಿದ್ದರು. ರಾಮನಗರ ತಾಲೂಕಿನ ಜೋಗನಪಾಳ್ಯ ಬಳಿ ಈ ದುರ್ಘಟನೆ ನಡೆದಾಗ ನಟ ಅಜಯ್​ ರಾವ್​ ಕೂಡ ಸ್ಥಳದಲ್ಲೇ ಇದ್ದರು. ಈಗಾಗಲೇ ಐವರ ವಿರುದ್ಧ ಬಿಡದಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಯಿತ್ತಿದೆ. ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಧ್ಯೆ ವಿಚಾರಣೆಗೆ ಹಾಜರಾಗುವಂತೆ ಅಜಯ್​ ರಾವ್​ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದೇ ಜಾಮೀನು‌ ಮೊರೆ ಹೋಗಿದ್ದಾರೆ.

ವಿಚಾರಣೆಗೆ ಹಾಜರಾದ ರಚಿತಾ ರಾಮ್:

ಘಟನೆಗೆ ಸಂಬಂಧಿಸಿದಂತೆ ಚಿತ್ರದ ನಾಯಕಿ ರಚಿತಾ ರಾಮ್​ ಅವರು ಪೊಲೀಸರಿಂದ ವಿಚಾರಣೆ ಎದುರಿಸಿದ್ದಾರೆ. ಮಂಗಳವಾರ (ಆ.24) ಬಿಡದಿ ಪೊಲೀಸ್​​ ಠಾಣೆಗೆ ರಚಿತಾ ರಾಮ್​ ಹಾಜರಾದರು. ಡಿವೈಎಸ್​ಪಿ ಮೋಹನ್ ಕುಮಾರ್ ಅವರು ರಚಿತಾ ಅವರನ್ನು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದರು. ಪೊಲೀಸರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಪೊಲೀಸರ ವಿಚಾರಣೆ ಬಳಿಕ ಮಾತನಾಡಿದ ರಚಿತಾ, ‘ನನಗೆ ವಿಷಯ ಗೊತ್ತಾಗಿರಲಿಲ್ಲ. ಮಾಧ್ಯಮಗಳಿಂದ ಈ ವಿಚಾರ ಗೊತ್ತಾಯ್ತು. ಫೈಟರ್​​ ಮೃತಪಟ್ಟಿರುವುದು ಅಷ್ಟೇ ನನಗೆ ಗೊತ್ತು. ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಏನಾಗುತ್ತದೆ ನೋಡೋಣ. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ. ಇಂತಹ ದುರಂತ ನಡೆದಿರುವುದಕ್ಕೆ ನನಗೂ ನೋವು ಇದೆ’ ಎಂದಿದ್ದರು.

ನ್ಯಾಯಾಂಗ ಬಂಧನ ವಿಸ್ತರಣೆ:

ದುರ್ಘಟನೆಗೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ನಿರ್ದೇಶಕ ಶಂಕರಯ್ಯ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್ ಅವರನ್ನು ಬಂಧಿಸಲಾಗಿತ್ತು. ಆಗಸ್ಟ್​ 10ರಂದು ಇವರನ್ನು ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಅವರು 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದರು. ಮಂಗಳವಾರ (ಆ.24) ಮತ್ತೆ ಈ ಮೂವರನ್ನು ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೆ ವಿಡಿಯೋ ಕಾಲ್​​ ಮೂಲಕ ಹಾಜರು ಪಡಿಸಲಾಯಿತು. ಈ ವೇಳೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ಇದನ್ನೂ ಓದಿ:

‘ವಿವೇಕ್​ ಮೂಗಲ್ಲಿ ರಕ್ತ ಬಂದಾಗ ನಮಗೆ ಗಾಬರಿ ಆಯ್ತು; ಅಜಯ್​ ರಾವ್​ ಅಲ್ಲೇ ಇದ್ದರು’: ರಂಜಿತ್​ ನೇರ ಮಾತು

ಫೈಟರ್​ ಸಾವು: ರಚಿತಾ ರಾಮ್​, ಅಜಯ್​ ರಾವ್​ ಬಂಧನಕ್ಕೆ ಎಐಸಿಸಿ ಹ್ಯುಮನ್ ರೈಟ್ಸ್ ಸಂಘಟನೆ ಒತ್ತಾಯ