Puneeth Rajkumar: ಪುನೀತ್ ಸಮಾಧಿ ಬಳಿ ಮದುವೆ ಆಗಲು ಬಂದ ಪ್ರೇಮಿಗಳು; ಶಿವಣ್ಣ, ರಾಘಣ್ಣ ಬರಲಿ ಎಂದು ಮನವಿ
Puneeth Rajkumar Samadhi: ಬಳ್ಳಾರಿ ಮೂಲದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಬಂದಿದ್ದಾರೆ. ಕಳೆದ 2 ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರಿಗೂ ಅಪ್ಪು ಎಂದರೆ ಅಪಾರ ಅಭಿಮಾನ.
ಪುನೀತ್ ರಾಜ್ಕುಮಾರ್ ಅವರು ನಿಧನರಾದ ಬಳಿಕ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಪ್ರತಿ ದಿನ ಸಾವಿರಾರು ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ಅಭಿಮಾನ ಕೂಡ ಭಿನ್ನವಾಗಿದೆ. ಅಚ್ಚರಿ ಎಂದರೆ ಪ್ರೇಮಿಗಳು ಬಂದು ಅಪ್ಪು ಸಮಾಧಿಯ ಎದುರು ಮದುವೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಲ್ಲದೇ, ಈ ಮದುವೆಗೆ ರಾಜ್ ಕುಟುಂಬದವರು ಬರಬೇಕು ಎಂದು ಕೂಡ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬಳ್ಳಾರಿ ಮೂಲದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಬಂದಿದ್ದಾರೆ. ಕಳೆದ 2 ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರಿಗೂ ಪುನೀತ್ ರಾಜ್ಕುಮಾರ್ ಎಂದರೆ ಅಪಾರ ಅಭಿಮಾನ. ಹಾಗಾಗಿ ಅವರ ಸಮಾಧಿ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂದು ತೀರ್ಮಾನಿಸಿದ್ದಾರೆ. ‘ನಮಗೆ ಪುನೀತ್ ಎಂದರೆ ತುಂಬ ಇಷ್ಟ. ನಮ್ಮ ಕುಟಂಬಸ್ಥರಿಂದ ಈ ಮದುವೆಗೆ ಯಾವುದೇ ಅಡ್ಡಿಯಿಲ್ಲ. ಇಬ್ಬರ ಕುಟುಂಬದವರ ಒಪ್ಪಿಗೆ ಇದೆ. ಸ್ನೇಹಿತರು ಬಂದ ಬಳಿಕ ಇಬ್ಬರು ವಿವಾಹವಾಗಲಿದ್ದೇವೆ. ಶಿವಣ್ಣ ಹಾಗೂ ರಾಘಣ್ಣ ಮದುವೆಗೆ ಬರಬೇಕು’ ಎಂದು ಗಂಗಾ ಮತ್ತು ಗುರುಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.
‘ಪುನೀತ್ ಬದುಕಿದಿದ್ದರೆ ಮದುವೆ ಬಳಿಕ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದುಕೊಂಡಿದ್ವಿ. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಸಮಾಧಿ ಎದುರು ಮದುವೆ ಆಗುತ್ತೇವೆ. ರಾಘಣ್ಣ ಮತ್ತು ಶಿವಣ್ಣ ಅವರಿಗೆ ಫೋನ್ ಮಾಡಿ ಅನುಮತಿ ಪಡೆದಿದ್ದೇವೆ. ಅವರು ಬರಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಗುರು ಪ್ರಸಾದ್ ಹೇಳಿದ್ದಾರೆ.
‘ಜಾತಕ ತೋರಿಸಿ, ದೇವಸ್ಥಾನದಲ್ಲಿ ಮದುವೆ ಆಗುವುದು ಸಹಜ. ಹಾಗಂತ ದೇವಸ್ಥಾನದಲ್ಲಿ ಮದುವೆ ಆದವರು ಜೀವನ ಪರ್ಯಂತ ಚೆನ್ನಾಗಿ ಇರುತ್ತಾರೆ ಎಂದು ಹೇಳೋಕಾಗಲ್ಲ. ಪುನೀತ್ ಮಾಡಿದ ಸಮಾಜ ಸೇವೆ ನೋಡಿದರೆ ಅವರಿಗಿಂತ ದೊಡ್ಡ ದೇವರು ಯಾರೂ ಇಲ್ಲ ಎನಿಸುತ್ತದೆ’ ಎಂದು ಗಂಗಾ ಹೇಳಿದ್ದಾರೆ.
ಇದನ್ನೂ ಓದಿ:
ಪುನೀತ್ ಸಮಾಧಿಗೆ ಪ್ರತಿದಿನ 20 ಸಾವಿರ ಮಂದಿ ಭೇಟಿ; ಕಂಠೀರವ ಸ್ಟುಡಿಯೋದಲ್ಲಿ ಈಗ ಹೇಗಿದೆ ಪರಿಸ್ಥಿತಿ?
Puneeth Rajkumar: ಪುನೀತ್ ಸಮಾಧಿಗೆ ನಟ ಸೂರ್ಯ ಭೇಟಿ; ಅಪ್ಪು ನೆನೆದು ಕಂಬನಿ ಮಿಡಿದ ಕಾಲಿವುಡ್ ಸ್ಟಾರ್ ಹೀರೋ