ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಆರಾಧನಾ ಅವರು ಚಿತ್ರರಂಗಕ್ಕೆ ಪ್ರವೇಶ ಪಡೆದರು. ಅಂಥ ಅವಕಾಶ ಸಿಕ್ಕಿದ್ದಕ್ಕೆ ಮಾಲಾಶ್ರೀ ಅವರು ಚಿರಋಣಿ ಆಗಿದ್ದಾರೆ. ಈ ಬಗ್ಗೆ ಮಾಲಾಶ್ರೀ ಅವರು ಮಾತನಾಡಿದ್ದಾರೆ. ‘ನನ್ನ ಮಗಳಿಗೆ ಕಾಟೇರ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್ ಅವರು, ನಿಮ್ಮ ಮಗಳ ಜೊತೆ ನಟಿಸೋದು ನನ್ನ ಅದೃಷ್ಟ ಅಂತ ದೊಡ್ಡ ಮಾತು ಹೇಳಿದ್ದರು. ಅಂಥ ದೊಡ್ಡ ಮನುಷ್ಯ ಅವರು’ ಎಂದಿದ್ದಾರೆ ಮಾಲಾಶ್ರೀ.
‘ನನಗೆ ಗೊತ್ತಿರುವ ಹಾಗೆ ದರ್ಶನ್ ಅವರದ್ದು ಒಳ್ಳೆಯ ವ್ಯಕ್ತಿತ್ವ. ಅವರೊಬ್ಬ ಜೆಂಟಲ್ಮ್ಯಾನ್. ನನ್ನ ಜೊತೆ, ನನ್ನ ಮಗಳ ಜೊತೆ ಇರುವಾಗ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರ ಗೌರವ, ಆತಿಥ್ಯ ಎಲ್ಲವೂ ಚೆನ್ನಾಗಿತ್ತು’ ಎಂದು ಮಾಲಾಶ್ರೀ ಹೇಳಿದ್ದಾರೆ. ದರ್ಶನ್ ಬೇಗ ಜೈಲಿನಿಂದ ಹೊರಬರುತ್ತಾರಾ ಎಂದು ಹೇಳಿದ್ದಕ್ಕೆ, ‘ನಾನು ಕಾನೂನು ಮತ್ತು ದೇವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ದೇವರು ಒಳ್ಳೆಯವರನ್ನು, ಒಳ್ಳೆಯದನ್ನು ಕೈ ಬಿಡಲ್ಲ’ ಎಂದು ಮಾಲಾಶ್ರೀ ಭರವಸೆ ವ್ಯಕ್ತಪಡಿಸಿದ್ದಾರೆ.
‘ದರ್ಶನ್ ದುಡುಕಿನಿಂದ ಈ ಪ್ರಕರಣ ಆಯ್ತಾ ಎಂಬುದಕ್ಕೆ ನನ್ನ ಬಳಿ ಉತ್ತರ ಇಲ್ಲ. ನನಗೆ ಗೊತ್ತಿರುವ ದರ್ಶನ್ ಅವರ ಸ್ವಭಾವವೇ ಬೇರೆ. ಅಭಿಮಾನಿಗಳು ದರ್ಶನ್ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೋ ನಾನು ಮತ್ತು ಆರಾಧನಾ ಕೂಡ ಅಷ್ಟೇ ಪ್ರೀತಿ-ಅಭಿಮಾನ ಇಟ್ಟುಕೊಂಡಿದ್ದೇವೆ. ಅದರಲ್ಲಿ ಅನುಮಾನವೇ ಇಲ್ಲ’ ಎಂದು ಮಾಲಾಶ್ರೀ ಅವರು ಹೇಳಿದ್ದಾರೆ. ಪುತ್ರಿ ಆರಾಧನಾ ನಟಿಸುವ ಎರಡನೇ ಸಿನಿಮಾ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಮಾಲಾಶ್ರೀ ತಿಳಿಸಿದ್ದಾರೆ.
ಇದನ್ನೂ ಓದಿ: ಖ್ಯಾತ ಫೊಟೊಗ್ರಾಫರ್ ಡಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಮಾಲಾಶ್ರೀ ಪುತ್ರಿ ಆರಾಧನಾ
‘ರಾಮು ನಿರ್ಮಾಣ ಮಾಡಿದ್ದ ‘ಕಲಾಸಿಪಾಳ್ಯ’ ಸಿನಿಮಾದಿಂದ ನನಗೆ ದರ್ಶನ್ ಪರಿಚಯ. ಅವರು ತುಂಬ ವಿನಯವಂತ ವ್ಯಕ್ತಿ. ‘ಕಾಟೇರ’ ಸಮಯದಲ್ಲೂ ಹಾಗೆಯೇ ಇದ್ದರು. ಯಾವುದೇ ಬದಲಾವಣೆ ಇರಲಿಲ್ಲ. ಕಾಟೇರ ಸಿನಿಮಾದಲ್ಲಿ ಆರಾಧನಾಗೆ ಅವರು ಸಾಕಷ್ಟು ಹೇಳಿಕೊಟ್ಟಿದ್ದಾರೆ. ಸೆಟ್ಗೆ ಹೋದಾಗ ನನ್ನನ್ನೂ ಅಮ್ಮ ಅಂತ ಮಾತನಾಡಿಸಿದರು’ ಎಂದು ಶೂಟಿಂಗ್ ದಿನಗಳನ್ನು ಮಾಲಾಶ್ರೀ ನೆನಪು ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.