‘ಮ್ಯಾಂಗೊ ಪಚ್ಚ’ ಟ್ರೈಲರ್: ಸಾಮ್ರಾಜ್ಯ ಕಟ್ಟಲು ಹೊರಟ ಸಾಮಾನ್ಯನ ಕತೆ

Mango Pachcha movie: ‘ಮ್ಯಾಂಗೊ ಪಚ್ಚ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ನೋಡಿದರೆ ಇದೊಂದು ಸಾಮಾನ್ಯ ಯುವಕನ ಅಸಾಮಾನ್ಯ ಕತೆಯೆಂತೆ ತೋರುತ್ತಿದೆ. ‘ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ’ ಎಂಬ ಅಡಿಬರಹದೊಂದಿಗೆ ಬಿಡುಗಡೆ ಆಗಿರುವ ಈ ಟ್ರೈಲರ್ ಗಮನ ಸೆಳೆಯುತ್ತಿದೆ.

‘ಮ್ಯಾಂಗೊ ಪಚ್ಚ’ ಟ್ರೈಲರ್: ಸಾಮ್ರಾಜ್ಯ ಕಟ್ಟಲು ಹೊರಟ ಸಾಮಾನ್ಯನ ಕತೆ
Mango Pachcha

Updated on: May 26, 2026 | 1:38 PM

ಕಿಚ್ಚ ಸುದೀಪ್ (Sudeep) ಪ್ರಸ್ತುತ ಪಡಿಸುತ್ತಿರುವ, ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೊ ಪಚ್ಚ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸುದೀಪ್ ಅವರು ಈ ಸಿನಿಮಾವನ್ನು ಪದೇ ಪದೇ ಪ್ರಮೋಟ್ ಮಾಡುತ್ತಿದ್ದು, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ನೋಡಿದರೆ ಇದೊಂದು ಸಾಮಾನ್ಯ ಯುವಕನ ಅಸಾಮಾನ್ಯ ಕತೆಯೆಂತೆ ತೋರುತ್ತಿದೆ. ‘ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ’ ಎಂಬ ಅಡಿಬರಹದೊಂದಿಗೆ ಬಿಡುಗಡೆ ಆಗಿರುವ ಈ ಟ್ರೈಲರ್ ಗಮನ ಸೆಳೆಯುತ್ತಿದೆ.

ಸಾಮಾನ್ಯ ಯುವಕ ಪ್ರಶಾಂತ್, ಗೆಳೆಯರ ಬಾಯಲ್ಲಿ ಪಚ್ಚ ಆಗಿ ಆ ನಂತರ ವ್ಯವಸ್ಥೆಯ ಹೊಡೆತಕ್ಕೆ ಸಿಲುಕಿ ‘ಮ್ಯಾಂಗೊ ಪಚ್ಚ’ ಆಗುವುದು ಹೇಗೆಂಬುದನ್ನು ‘ಮ್ಯಾಂಗೊ ಪಚ್ಚ’ ಸಿನಿಮಾ ಒಳಗೊಂಡಿದೆ. ಸಾಮಾನ್ಯ ಬಡ ಮಧ್ಯಮ ಕುಟುಂಬದ ಯುವಕ ಸಾಮ್ರಾಜ್ಯ ಕಟ್ಟುವ ಕನಸು ಕಾಣುವುದು ಹಾಗೂ ಅದರ ಈಡೇರಿಕೆಗೆ ಮಾಡುವ ಪ್ರಯತ್ನಗಳು, ಆತನ ದಾರಿಗೆ ಅಡ್ಡಾಗುವ ವ್ಯಕ್ತಿಗಳು, ಅವರನ್ನು ನಾಯಕ ಹಿಮ್ಮೆಟ್ಟಿಸುವ ಬಗೆ ಇನ್ನಿತರೆಗಳನ್ನು ಈ ಸಿನಿಮಾ ಒಳಗೊಂಡಿದೆ ಎಂಬುದನ್ನು ಟ್ರೈಲರ್ ಹೇಳುತ್ತಿದೆ.

Mango Pachcha - Official Trailer | Sanchith | Viveka | KRG Studios | Supriyanvi

‘ಮ್ಯಾಂಗೊ ಪಚ್ಚ’ ಮೈಸೂರು ಭಾಗದಲ್ಲಿ ಒಂದು ದಶಕದ ಹಿಂದೆ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ಇದೊಂದು ಸಂಪೂರ್ಣ ಪ್ಯಾಕೇಜ್ ಆಗಿರುವ ಕಮರ್ಶಿಯಲ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್ ಸ್ಟೋರಿ, ಹಾಸ್ಯ ಎಲ್ಲವೂ ಇದೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ಇದು ಸುದೀಪ್ ಪುತ್ರಿ ಸಾನ್ವಿ ಸುದೀಪ್ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಆಗಿದೆ. ತಮ್ಮ ತಾಯಿ ಪ್ರಿಯಾ ಅವರೊಟ್ಟಿಗೆ ಸೇರಿ ಈ ಸಿನಿಮಾದ ಸಹ ನಿರ್ಮಾಣ ಮಾಡುತ್ತಿದ್ದಾರೆ ಅವರು.

ಟ್ರೈಲರ್​​ನಲ್ಲಿ ನಾಯಕ ಸಂಚಿತ್ ಸಂಜೀವ್ ಜೊತೆಗೆ ಇನ್ನೂ ಕೆಲವು ಪಾತ್ರಗಳ ಪರಿಚಯ ಮಾಡಲಾಗಿದೆ. ನಾಯಕನ ತಂದೆಯ ಪಾತ್ರದಲ್ಲಿ ಉಗ್ರಂ ಮಂಜು ನಟಿಸಿದ್ದಾರೆ. ನಾಯಕಿಯಾಗಿ ಕಾಜಲ್ ಕುಂದರ್, ವಿಲನ್ ಆಗಿ ನಟ ಮಯೂರ್ ಪಟೇಲ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ವಿವೇಕ. ಸಿನಿಮಾಕ್ಕೆ ಸುದೀಪ್ ಪುತ್ರಿ ಸಾನ್ವಿ ಅವರು ಬಂಡವಾಳ ಹಾಕಿರುವ ಜೊತೆಗೆ ಒಂದು ಹಾಡನ್ನೂ ಸಹ ಹಾಡಿದ್ದಾರಂತೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಕೆಆರ್​​ಜಿ ಸಹ ಬಂಡವಾಳ ಹೂಡಿದ್ದು, ವಿತರಣೆ ಸಹ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Tue, 26 May 26

Follow Us