ಬಜೆಟ್​ ಮೀರಿದ್ದಕ್ಕೆ ‘ಮಾರ್ಟಿನ್​’ ತಂಡದಲ್ಲಿ ಕಿರಿಕ್​ ಆಯ್ತಾ? ಉತ್ತರಿಸಿದ ಎ.ಪಿ. ಅರ್ಜುನ್

ಕೆಲವು ನೆಗೆಟಿವ್​ ಕಾರಣಗಳಿಂದ ‘ಮಾರ್ಟಿನ್​’ ಸಿನಿಮಾ ತಂಡ ಸುದ್ದಿ ಆಗುತ್ತಿದೆ. ನಿರ್ದೇಶಕ ಎ.ಪಿ. ಅರ್ಜುನ್​ ಅವರ ಮೇಲೆ ಆರೋಪ ಬಂದಿದ್ದು, ಅದನ್ನು ಅವರು ತಳ್ಳಿಹಾಕಿದ್ದಾರೆ. ಸುದ್ದಿಗೋಷ್ಠಿ ನಡೆಸುವ ಮೂಲಕ ಎ.ಪಿ. ಅರ್ಜುನ್​ ಅವರು ತಮ್ಮ ವಾದ ಏನು ಎಂಬುದನ್ನು ಮುಂದಿಟ್ಟಿದ್ದಾರೆ. ಬಜೆಟ್​ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಬಜೆಟ್​ ಮೀರಿದ್ದಕ್ಕೆ ‘ಮಾರ್ಟಿನ್​’ ತಂಡದಲ್ಲಿ ಕಿರಿಕ್​ ಆಯ್ತಾ? ಉತ್ತರಿಸಿದ ಎ.ಪಿ. ಅರ್ಜುನ್
ಎ.ಪಿ. ಅರ್ಜುನ್​, ಧ್ರುವ ಸರ್ಜಾ

Updated on: Jul 26, 2024 | 10:35 PM

ನಟ ಧ್ರುವ ಸರ್ಜಾ ಅವರು ಬಹುನಿರೀಕ್ಷಿತ ‘ಮಾರ್ಟಿನ್​’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರತಂಡದಲ್ಲಿ ಬಿರುಕು ಮೂಡಿದೆ. ಬಿಗ್​ ಬಜೆಟ್​ನ ಈ ಸಿನಿಮಾದಲ್ಲಿ ಮನಸ್ತಾಪ ಉಂಟಾಗಲು ಕಾರಣ ಹಲವು. ಈ ಕುರಿತು ಮಾತನಾಡಲು ಇಂದು (ಜುಲೈ 26) ನಿರ್ದೇಶಕ ಎ.ಪಿ. ಅರ್ಜುನ್​ ಅವರು ಪ್ರೆಸ್​ಮೀಟ್​ ನಡೆಸಿ ಒಂದಷ್ಟು ವಿಷಯಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಮಾರ್ಟಿನ್​’ ಚಿತ್ರದ ಸಿಜಿ ಕೆಲಸಗಳಿಗೆ ಎ.ಪಿ. ಅರ್ಜುನ್​ ಅವರು 50 ಲಕ್ಷ ರೂಪಾಯಿ ಕಮಿಷನ್​ ಪಡೆದಿದ್ದಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದ್ದಾರೆ. ಅದರ ಬಗ್ಗೆ ಎ.ಪಿ. ಅರ್ಜುನ್​ ಮಾತನಾಡಿದ್ದಾರೆ.

‘ಬಜೆಟ್​ ಜಾಸ್ತಿ ಆಯಿತು ಅನ್ನೋದಕ್ಕಿಂತ, ಒಂದು ಪ್ಯಾನ್​ ಇಂಡಿಯಾ ಸಿನಿಮಾ ಎಂದಾಗ ಆ ರೀತಿಯ ದೊಡ್ಡ ಬಜೆಟ್​ ಬೇಕಾಗುತ್ತದೆ. ನಿರ್ಮಾಪಕರು, ನಿರ್ದೇಶಕರು, ಹೀರೋ ಇದನ್ನೆಲ್ಲ ಮೊದಲೇ ನಿರ್ಧರಿಸಿರುತ್ತಾರೆ. ಮೊದಲು 20 ಕೋಟಿ ರೂಪಾಯಿ ಹೇಳಿ, ಆಮೇಲೆ 100 ಕೋಟಿಯನ್ನು ತಂದು ಯಾರೂ ಹಾಕಲ್ಲ. ಶೇಕಡ 10ರಿಂದ 20ರಷ್ಟು ವ್ಯತ್ಯಾಸ ಬರಬಹುದು’ ಎಂದು ಎ.ಪಿ. ಅರ್ಜುನ್ ಹೇಳಿದ್ದಾರೆ. ಈ ಮೊದಲು ಕೂಡ ನಿರ್ಮಾಪಕರ ಜೊತೆ ನಿರ್ದೇಶಕರು ಮನಸ್ತಾಪ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು.

‘ಸಂಭಾವನೆ ವಿಚಾರದಲ್ಲಿ ನಿರ್ಮಾಪಕರ ಜೊತೆ ನಾನು ಒಪ್ಪಂದ ಮಾಡಿಕೊಂಡಿದ್ದು 2 ವರ್ಷಗಳಿಗೆ. ಆದರೆ ಈ ಸಿನಿಮಾದ ಕೆಲಸ ಒಂದೂವರೆ ವರ್ಷ ಜಾಸ್ತಿ ಆಗಿದೆ. ಆ ಬಗ್ಗೆ ನಾನು ನಿರ್ಮಾಪಕರ ಜೊತೆ ಕುಳಿತು ಮಾತುಕಥೆ ಮಾಡುತ್ತೇನೆ. ಆದರೆ ನಾನು ಇಂದು ಸುದ್ದಿಗೋಷ್ಠಿ ಕರೆದಿದ್ದು ಆ ವಿಚಾರಕ್ಕೆ ಅಲ್ಲ. ನನ್ನ ಮೇಲೆ 50 ಲಕ್ಷ ರೂಪಾಯಿ ಕಮಿಷನ್​ ಪಡೆದ ಆರೋಪ ಬಂದಿದೆ. ಅದನ್ನು ತಳ್ಳಿಹಾಕುತ್ತೇನೆ’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

‘ಮಾಧ್ಯಮ ತುಂಬ ಶಕ್ತಿಶಾಲಿ. ನಾನು ಹೆಸರು ಮಾಡಲು ಹಲವು ವರ್ಷ ಕಷ್ಟಪಟ್ಟಿದ್ದೇನೆ. ನನ್ನ ಮೇಲಿನ ಕೋಪಕ್ಕೆ ಕೆಲವರು ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬರೆದರೆ ಸರಿ-ತಪ್ಪು ಏನು ಎಂಬುದು ನಮ್ಮವರಿಗೆ ಗೊತ್ತಿರುತ್ತದೆ. ಆದರೆ ದೂರದಿಂದ ನೋಡುವವರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಮನೆ ಕಟ್ಟುವುದು ತುಂಬ ಕಷ್ಟ. ಆದರೆ ಕೆಡಗುವುದು ಸುಲಭ. ನಾನು ಬೆಳೆಯುವಾಗ ಯಾರೂ ಬೆಂಬಲಿಸಿಲ್ಲ. ಆದರೆ ಈಗ ತೇಜೋವಧೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಎ.ಪಿ. ಆರ್ಜುನ್​.

ಇದನ್ನೂ ಓದಿ: ‘ಮಾರ್ಟಿನ್’ ತಂಡದಲ್ಲಿ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ

‘ಎಫ್​ಐಆರ್​ ಕಾಪಿಯಲ್ಲಿ ನನ್ನ ಹೆಸರು ಇದ್ದು, ಆಗ ಸುದ್ದಿ ಮಾಡಿದರೆ ಒಳ್ಳೆಯದು. ಎಫ್​ಐಆರ್​ ಕಾಪಿಯಲ್ಲಿ ನನ್ನ ಹೆಸರು ಇಲ್ಲ. ಚಿತ್ರತಂಡದ ಯಾರೋಬ್ಬರೂ ನನ್ನ ಮೇಲೆ ದೂರು ನೀಡಿಲ್ಲ. ಯಾರೋ ಒಬ್ಬರು ಊಹಾಪೋಹದಿಂದ ಸುದ್ದಿ ಹಬ್ಬಿಸಿದಾಗ ನನ್ನ ಫೋನ್​ ನಂಬರ್​ ಇದೆಯಲ್ಲ. ಆರೋಪ ಬಂದಾಗ ಕರೆ ಮಾಡಿ ನನ್ನನ್ನೇ ಕೇಳಬಹುದಿತ್ತು. ನಿರ್ಮಾಪಕರಿಗಾದರೂ ಕೇಳಿ ವಿಚಾರಿಸಬಹುದಿತ್ತು’ ಎಂದು ಎ.ಪಿ. ಅರ್ಜುನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us