ಅಕ್ಟೋಬರ್ ಎಂದರೆ ಸರ್ಜಾ ಕುಟುಂಬಕ್ಕೆ ತುಂಬ ವಿಶೇಷ. ಅ.17ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಈ ದಿನದ ಪ್ರಯುಕ್ತ ಅವರ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ (Chiranjeevi Sarja) ಅವರು ಭೌತಿಕವಾಗಿ ಇಲ್ಲದೇ ಇರಬಹುದು. ಸಿನಿಮಾಗಳ ಮೂಲಕ ಅವರ ನೆನಪು ಶಾಶ್ವತವಾಗಿರುತ್ತದೆ. ಚಿರು ಹುಟ್ಟುಹಬ್ಬಕ್ಕೆ (Chiranjeevi Sarja Birthday) ಪತ್ನಿ ಮೇಘನಾ ರಾಜ್ ಅವರು ವಿಶೇಷವಾದ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರ ಜೊತೆ ಭಾವುಕವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ನನ್ನ ಸಂತಸಕ್ಕೆ ಹುಟ್ಟುಹಬ್ಬದ ಶುಭಾಶಯಗಳು. ನಾನು ನಗುತ್ತಿರುವುದು ನಿಮಗಾಗಿ ಮಾತ್ರ. ನನ್ನ ಪ್ರೀತಿಯ ಪತಿ ಚಿರು. ಐ ಲವ್ ಯೂ’ ಎಂದು ಮೇಘನಾ ರಾಜ್ (Meghana Raj Sarja) ಪೋಸ್ಟ್ ಮಾಡಿದ್ದಾರೆ.
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಹಲವು ವರ್ಷ ಪ್ರೀತಿಸಿದ್ದ ಅವರು ಎರಡೂ ಕುಟುಂಬದ ಒಪ್ಪಿಗೆ ಪಡೆದು ಮದುವೆ ಆದರು. ಆದರೆ ಜೊತೆಯಾಗಿ ಹಲವು ವರ್ಷ ಬಾಳುವ ಅವಕಾಶವನ್ನು ಆ ದೇವರು ನೀಡಲಿಲ್ಲ. 2020ರ ಜೂನ್ 7ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಆ ಕಹಿ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗಿದ್ದರೂ ಕೂಡ ಜೀವನ ಮುಂದುವರಿಯಲೇ ಬೇಕಿದೆ.
ತಮ್ಮ ಮದುವೆಯ ಫೋಟೋವನ್ನು ಮೇಘನಾ ರಾಜ್ ಅವರು ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಪ್ರೀತಿಯ ಪತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಲವು ವಿಶೇಷ ಸಂದರ್ಭಗಳಲ್ಲಿ ಚಿರು ನೆನಪನ್ನು ಮೇಘನಾ ಮೆಲುಕು ಹಾಕುತ್ತಾರೆ. ಪತಿಯ ಜೊತೆಗಿನ ಹಳೇ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ.
ಚಿರಂಜೀವಿ ಅವರದ್ದು ಫಿಲ್ಮಿ ಹಿನ್ನೆಲೆಯ ಕುಟುಂಬ. ಅವರ ಮಾವ ಅರ್ಜುನ್ ಸರ್ಜಾ, ತಾತ ಶಕ್ತಿ ಪ್ರಸಾದ್ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. ಹಾಗಾಗಿ ಚಿತ್ರರಂಗಕ್ಕೆ ಎಂಟ್ರಿ ಪಡೆಯುವುದು ಚಿರುಗೆ ಸುಲಭವಾಯಿತು. ಬಳಿಕ ತಮ್ಮದೇ ಸ್ವಂತ ಪ್ರತಿಭೆಯಿಂದ ಅವರು ಗುರುತಿಸಿಕೊಂಡರು. ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡುವ ಮೂಲಕ ಜನಮನ ಗೆದ್ದಿದ್ದರು. 20ಕ್ಕೂ ಅಧಿಕ ಸಿನಿಮಾಗಳಲ್ಲಿ ಚಿರು ನಟಿಸಿದ್ದರು. ಅವರು ನಿಧನರಾಗುವುದಕ್ಕೂ ಮುನ್ನ ‘ರಾಜಮಾರ್ತಾಂಡ’ ಚಿತ್ರದ ಕೆಲಸಗಳನ್ನು ತೊಡಗಿಕೊಂಡಿದ್ದರು.
ಸದ್ಯ ಮೇಘನಾ ರಾಜ್ ಅವರು ಮತ್ತೆ ನಟನೆಗೆ ಮರಳಿದ್ದಾರೆ. ಜೊತೆಗೆ ಪುತ್ರ ರಾಯನ್ ರಾಜ್ ಸರ್ಜಾನ ಆರೈಕೆಗೂ ಹೆಚ್ಚಿನ ಸಮಯ ನೀಡುತ್ತಾರೆ. ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Mon, 17 October 22