‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ (sapta sagaradaache ello ) ಇತ್ತೀಚೆಗಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾ ಚಿತ್ರಮಂದಿರದಲ್ಲಿದ್ದಾಗಲೇ ಜನ ನೋಡಿ ಮೆಚ್ಚಿದ್ದರು. ಇದು ಕನ್ನಡದ ಕ್ಲಾಸಿಕ್ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಸಿನಿಮಾ ಒಟಿಟಿಗೆ ಬಂದ ಬಳಿಕ ಸೈಡ್ ಬಿ ನಿಜಕ್ಕೂ ಕ್ಲಾಸಿಕ್ ಎಂಬುದಕ್ಕೆ ಸಾಕ್ಷಿಗಳು ಸಿಗುತ್ತಿವೆ. ಮಾತ್ರವಲ್ಲ, ಹೇಮಂತ್ ರಾವ್ ಪ್ರತಿಭೆಯ ಅನಾವರಣ ಆಗುತ್ತಿದೆ. ಸಿನಿಮಾದಲ್ಲಿ ಹೇಮಂತ್ ರಾವ್ ಬಳಸಿರುವ ರೂಪಕಗಳು ಅದ್ಭುತವಾದವು ಹಾಗೂ ಅವು ಮನು-ಪ್ರಿಯಾ-ಸುರಭಿಯನ್ನು ಇನ್ನಷ್ಟು ಮನಸ್ಸಿಗೆ ಹತ್ತಿರವಾಗಿಸುತ್ತದೆ. ಸಿನಿಮಾ ವೀಕ್ಷಿಸುವಾಗ ನೋಡಿದ್ದರೂ ಗಮನಿಸದ ಕೆಲ ರೂಪಗಳ ಪಟ್ಟಿ ಇಲ್ಲಿದೆ.
ದೃಶ್ಯವೊಂದರಲ್ಲಿ ಮನು ಹಾಗೂ ಸುರಭಿ ಗಡಿಯಾರ ಕೊಳ್ಳಲು ಹೋಗುತ್ತಾರೆ. ಅಂಗಡಿಯ ಗೋಡೆಯ ಮೇಲೆ ಹಲವು ಗಡಿಯಾರಗಳು ತೂಗು ಹಾಕಲಾಗಿರುತ್ತದೆ ಅದರ ಎದುರು ಮನು ಹಾಗೂ ಸುರಭಿ ನಿಂತಿರುತ್ತಾರೆ. ಆದರೆ ಅದರಲ್ಲಿ ಸುರಭಿ ಕಡೆಯಿರುವ ಗಡಿಯಾರಗಳು ಓಡುತ್ತಿರುತ್ತವೆ, ಆದರೆ ಮನು ಕಡೆಯ ಗಡಿಯಾರಗಳೆಲ್ಲ ನಿಂತಿರುತ್ತವೆ. ಇದು ಸುರಭಿಯ ಚಲನಶೀಲತೆಯನ್ನು ಹಾಗೂ ಕಾಲದ ಬಂಧಿಯಾಗಿ ನೆನಪುಗಳಲ್ಲೇ ಬದುಕುತ್ತಿರುವ ಮನು ಅವರ ಜೀವನವನ್ನು ಸೂಚಿಸುತ್ತದೆ.
ಸೈಡ್ ಬಿಯ ಕೊನೆಯ ದೃಶ್ಯದಲ್ಲಿ ಮನು ಪ್ರಿಯಾಳ ಕೈಬಿಡಿಸಿಕೊಂಡು ಸಮುದ್ರದ ಕಡೆಗೆ ನಡೆಯುತ್ತಾನೆ. ಮನು-ಪ್ರಿಯಾಳ ಕೈಬಿಡಿಸಿಕೊಂಡ ಕೂಡಲೇ ಮುಂದೆ ಬಂದಿದ್ದ ಅಲೆ ಮತ್ತೆ ಸಮುದ್ರದೆಡೆಗೆ ಚಲಿಸುತ್ತವೆ. ಹೇಮಂತ್ ರಾವ್ ಹೇಳಿರುವಂತೆ ಇದು ಅತಿ ಹೆಚ್ಚು ಬಾರಿ ತೆಗೆದ ಶಾಟ್ ಆಗಿತ್ತಂತೆ. ಬಹಳ ಕಷ್ಟಪಟ್ಟು ಆ ಶಾಟ್ ತೆಗೆದಿದ್ದಾಗಿ ಹೇಮಂತ್ ಹೇಳಿಕೊಂಡಿದ್ದಾರೆ.
ಕೊನೆಯ ದೃಶ್ಯದಲ್ಲಿ ಮನು, ಬಾಗಿಲು ತೆಗೆದಾಗ ಎದುರಿಗೆ ಸಮುದ್ರ ಕಾಣುತ್ತದೆ. ಆಗ ಹಿನ್ನೆಲೆಯಲ್ಲಿ ಬರುತ್ತಿದ್ದ ಸಂಗೀತ ನಿಂತು ಒಂದು ಹಕ್ಕಿಯ ಕೂಗು ಕೇಳುತ್ತದೆ. ಹೆಚ್ಚಿನ ಮಂದಿ ಇದನ್ನು ಗಮನಿಸಿರಲಿಕ್ಕಿಲ್ಲ. ಅದು ಭೂಮಿಯ ಮೇಲಿನ ಕೊನೆಯ ಕವಾಯಿ ಓಓ ಹಕ್ಕಿಯ ಧ್ವನಿ. 1987ರಲ್ಲಿ ಅಳಿವುಗೊಂಡ ಕೊನೆಯ ಗಂಡು ಕವಾಯಿ ಓಓ ನ ಧ್ವನಿಯನ್ನು ಕೆಲ ವಿಜ್ಞಾನಿಗಳು ರೆಕಾರ್ಡ್ ಮಾಡಿದ್ದರು. ಅದೇ ಧ್ವನಿಯನ್ನು ಹೇಮಂತ್ ರಾವ್ ಆ ದೃಶ್ಯದಲ್ಲಿ ಬಳಸಿಕೊಂಡಿದ್ದಾರೆ. ಹೆಣ್ಣು ಕವಾಯಿ ಓಓ ಹಕ್ಕಿ ಹಾಡುತ್ತಲೇ ಇತ್ತು, ಆದರೆ ಹೆಣ್ಣು ಹಕ್ಕಿ ಬರಲೇ ಇಲ್ಲ.
ಇದನ್ನೂ ಓದಿ:ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಚಿತ್ರಗಳಲ್ಲಿ ಹೇಳುವುದಾದರೆ
ಸೈಡ್ ಎ ನಲ್ಲಿ ನೀಲಿ ಬಣ್ಣದ ಚೂಡಿಧಾರ್ ಅನ್ನು ಪ್ರಿಯಾ ಹೆಚ್ಚು ಧರಿಸಿದ್ದಳು. ಆದರೆ ಸೈಡ್ ಬಿನಲ್ಲಿ ಬ್ರೌನ್ ಬಣ್ಣದ ಸೀರೆಗಳನ್ನು ಹೆಚ್ಚು ಧರಿಸಿದ್ದರು. ಅದಕ್ಕೆ ಕಾರಣ ಪ್ರಿಯಾ ಭೂಮಿಯನ್ನು ಪ್ರತಿನಿಧಿಸುತ್ತಾಳೆ. ಮನು ಸಮುದ್ರವನ್ನು. ಸಮುದ್ರ ಅಲೆಗಳ ಮೂಲಕ ಭೂಮಿಗೆ ಕೈಚಾಚಬಹುದಷ್ಟೆ ಆದರೆ ಅಲೆಗಳು ಸಮುದ್ರಕ್ಕೆ ಮರಳಲೇ ಬೇಕು.
ಸೈಡ್ ಬಿನಲ್ಲಿ 20ಕ್ಕೂ ಹೆಚ್ಚು ಕನ್ನಡಿಯ ದೃಶ್ಯಗಳಿವೆ. ಒಂದು ದೃಶ್ಯದಲ್ಲಿ ಒಡೆದ ಕನ್ನಡಿಯಲ್ಲಿ ಪ್ರಿಯಾ ಹಾಗೂ ಸುರಭಿ ಇಬ್ಬರೂ ಒಟ್ಟಿಗೆ ಕಾಣಿಸುತ್ತಾರೆ. ಅದೊಂದು ಅದ್ಭುತವಾದ ದೃಶ್ಯ. ಮನು ಸುರಭಿಯಲ್ಲಿಯೂ ಪ್ರಿಯಾಳನ್ನೇ ಕಾಣುತ್ತಾನೆಂದು ತೋರಿಸುತ್ತದೆ ಆ ದೃಶ್ಯ. ಮೊದಲ ಬಾರಿಗೆ ಮನು, ಸುರಭಿಗೆ ಹಾಡುವಂತೆ ಹೇಳಿದಾಗ, ಸುರಭಿ ಹಾಡುತ್ತಾಳೆ ಆಕೆಯ ಪಕ್ಕ ಇರುವ ಕನ್ನಡಿಯಲ್ಲಿ ಸುರಭಿಯಂತೆ ಬಟ್ಟೆ ತೊಟ್ಟ ಪ್ರಿಯಾಳ ಬಿಂಬ ಕಾಣಿಸುತ್ತದೆ. ಇಂಥಹಾ ಹಲವು ರೂಪಕಗಳನ್ನು ಹೇಮಂತ್ ರಾವ್ ಸೈಡ್ ಬಿ ನಲ್ಲಿ ಬಳಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ