ಈ ಬಾರಿ ಪ್ರೇಮಿಗಳ ದಿನಕ್ಕೆ ಚಂದನವನದ (Sandalwood) ಹೊಸ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಬಹುಕಾಲದಿಂದ ಪ್ರೀತಿಯಲ್ಲಿರುವ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ (Darling Krishna and Milana Nagaraj) ಫೆಬ್ರವರಿ 14ರಂದು ಹಸೆಮಣೆ ಏರಲಿದ್ದು, ಈಗಾಗಲೇ ವಿವಾಹ ಪೂರ್ವ ಪೂಜಾ ಕಾರ್ಯಕ್ರಮಗಳ ಕುರಿತಾದ ಕೆಲ ಫೋಟೋ, ವಿಡಿಯೋಗಳನ್ನು ಇಬ್ಬರೂ ಹಂಚಿಕೊಂಡಿದ್ದರು. ಲವ್ ಮಾಕ್ಟೇಲ್ (Love Mocktail) ಚಿತ್ರದ ಮೂಲಕ ಮೋಡಿ ಮಾಡಿದ್ದ ಈ ಇಬ್ಬರೂ ನಿಜ ಜೀವನದಲ್ಲಿ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಪ್ರೇಮಿಗಳ ದಿನಾಚರಣೆಯಂದೇ ಮದುವೆಯಾಗುವುದಾಗಿ ಇವರಿಬ್ಬರೂ ಕಳೆದ ವರ್ಷವೇ ಸುಳಿವು ನೀಡಿದ್ದರು. ನಂತರ ಅದು ಅಧಿಕೃತವಾಗಿ ಇದೀಗ ಅವರಿಬ್ಬರೂ ಒಂದಾಗುವ ಕಾಲ ಸನ್ನಿಹಿತವಾಗಿದೆ. ವಿವಾಹ ಕಾರ್ಯಕ್ರಮಕ್ಕೆ ಇವರಿಬ್ಬರೂ ಚಂದನವನದ ಅನೇಕ ನಟ, ನಟಿಯರನ್ನು ಆಹ್ವಾನಿಸಿದ್ದು, ಬಹುತೇಕರು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಬೆಳಗ್ಗೆ 9.30 ರಿಂದ 10.30ರ ಕಾಲದಲ್ಲಿ ಧಾರೆ ಮುಹೂರ್ತ ಇದೆ ಎಂದು ತಿಳಿದುಬಂದಿದೆ. ಅಂತೆಯೇ, ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ಪ್ರೇಮಿಗಳ ದಿನದಂದೇ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಮದುವೆ
ವಿವಾಹ ಪೂರ್ವ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಡಾರ್ಲಿಂಗ್ ಕೃಷ್ಣ ಫೇಸ್ಬುಕ್ನಲ್ಲಿ ಅರಶಿನ ನೀರಿನಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನು ಮಿಲನಾ ನಾಗರಾಜ್ ಒಂದು ವಾರದ ಹಿಂದೆಯೇ ದೇಗುಲಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡು, ನಮ್ಮ ವಿವಾಹಕ್ಕೆ ಸಂಬಂಧಿಸಿದ ಪೂಜಾ ಕಾರ್ಯಕ್ರಮ ಶುರುವಾಗಿದೆ ಎಂದು ಹೇಳಿಕೊಂಡಿದ್ದರು. ಸದ್ಯ ಮದುವೆಗೆ ಸಿದ್ಧವಾಗಿರುವ ಈ ಜೋಡಿ ಶೀಘ್ರದಲ್ಲೇ ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.