
2017ರಲ್ಲಿ ಕನ್ನಡದ ‘ರಾಗ’ ಸಿನಿಮಾ ಬಿಡುಗಡೆ ಆಗಿತ್ತು. ಪಿ.ಸಿ. ಶೇಖರ್ (PC Shekar) ನಿರ್ದೇಶನದ ಆ ಸಿನಿಮಾದಲ್ಲಿ ಮಿತ್ರ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಈಗ ಮತ್ತೆ ಪಿ.ಸಿ. ಶೇಖರ್ ಮತ್ತು ಮಿತ್ರ ಅವರು ಕೈ ಜೋಡಿಸಿದ್ದಾರೆ. ಹೌದು, ಪಿ.ಸಿ. ಶೇಖರ್ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಮಹಾನ್’ (Mahan) ಸಿನಿಮಾದಲ್ಲಿ ಮಿತ್ರ ಅವರಿಗೆ ಒಂದು ಪ್ರಮುಖವಾದ ಪಾತ್ರವನ್ನು ನೀಡಲಾಗಿದೆ. ಈ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಮಹಾನ್’ ಚಿತ್ರಕ್ಕೆ ವಿಜಯ್ ರಾಘವೇಂದ್ರ ಅವರು ಹೀರೋ ಆಗಿದ್ದು, ಅವರ ಜೊತೆ ಮಿತ್ರ (Mithra) ತೆರೆಹಂಚಿಕೊಳ್ಳುತ್ತಿದ್ದಾರೆ.
‘ಆಕಾಶ್ ಪಿಕ್ಚರ್ಸ್’ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ‘ಮಹಾನ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮಿತ್ರ ಅವರು ತಮ್ಮ ಪಾತ್ರದ ಬಗ್ಗೆ ಮಾತಾಡಿದ್ದಾರೆ. ‘ನಾನು ರಾಗ ಸಿನಿಮಾದ ಬಳಿಕ ಪಿ.ಸಿ.ಶೇಖರ್ ಅವರ ಜೊತೆ ಮತ್ತೆ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ. ರಾಗ ಚಿತ್ರದ ನನ್ನ ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮಹಾನ್ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕರು ಕಥೆ ಹೇಳಿದ ತಕ್ಷಣ ಇಷ್ಟವಾಗಿ ನಟಿಸಲು ಒಪ್ಪಿಕೊಂಡೆ’ ಎಂದು ಮಿತ್ರ ಹೇಳಿದ್ದಾರೆ.
‘ವಿಜಯ್ ರಾಘವೇಂದ್ರ ಅವರು ಬಹಳ ಅದ್ಭುತವಾದ ಕಲಾವಿದ. ಅವರ ಜೊತೆ ನಟಿಸುತ್ತಿರುವುದಕ್ಕೆ ಸಂತಸ ಇದೆ. ಸಾಮಾಜಿಕ ಕಳಕಳಿಯ ಕಥಾಹಂದರ ಈ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಹೇಳಿ ಮಾಡಿಸಿದ ಪಾತ್ರವಿದೆ. ನನ್ನ ಪಾತ್ರವೂ ನಾಯಕನ ಪಾತ್ರದ ಜತೆಗೆ ಸಾಗುತ್ತದೆ. ಪ್ರೇಕ್ಷಕರಿಗೆ ನಮ್ಮ ಕಾಂಬಿನೇಶನ್ ಇಷ್ಟ ಆಗುತ್ತದೆ’ ಎಂದಿದ್ದಾರೆ ಮಿತ್ರ.
ಮಿತ್ರ ಬಗ್ಗೆ ಪಿ.ಸಿ. ಶೇಖರ್ ಮಾತನಾಡಿದ್ದಾರೆ. ‘ನನ್ನ ಮತ್ತು ಮಿತ್ರ ಕಾಂಬಿನೇಶನ್ನಲ್ಲಿ ಬಂದ ರಾಗ ಸಿನಿಮಾ ಇಂದಿಗೂ ಜನಪ್ರಿಯವಾಗಿ ಉಳಿದುಕೊಂಡಿದೆ. ಆ ಬಳಿಕ ನನ್ನ ನಿರ್ದೇಶನದ ಸಿನಿಮಾಗಳಲ್ಲಿ ಮಿತ್ರ ಅವರು ಅಭಿನಯಿಸಿಲ್ಲ. ಯಾಕೆಂದರೆ ಮಿತ್ರ ಅವರು ಚಿಕ್ಕ-ಪುಟ್ಟ ಪಾತ್ರದಲ್ಲಿ ನನ್ನ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದು ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾಡಿನಲ್ಲಿ ಸಿಕ್ಕಿಹಾಕಿಕೊಂಡ ಹುಡುಗ-ಹುಡುಗಿ ಕಥೆ; ‘ಜಂಗಲ್ ಮಂಗಲ್’ ಈ ವಾರ ರಿಲೀಸ್
‘ರಾಗ’ ಸಿನಿಮಾದಲ್ಲಿನ ನಟನೆಗೆ ಮಿತ್ರ ಅವರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು. ‘ಈಗ ಮಹಾನ್ ಸಿನಿಮಾದಲ್ಲಿ ಕೂಡ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಪಾತ್ರ ಅವರಿಗೆ ಇದೆ. ಚಿತ್ರಕಥೆ ಬರೆಯುವಾಗ ಈ ಪಾತ್ರಕ್ಕೆ ಮಿತ್ರ ಅವರೇ ಸೂಕ್ತ ಅಂತ ನನಗೆ ಅನಿಸಿತು. ಸಿನಿಮಾದ ಪೂರ್ತಿ ನಾಯಕನ ಪಾತ್ರದ ಜತೆಗೆ ಸಾಗುವ ಪಾತ್ರ ಇದು. ಕುರುಕ್ಷೇತ್ರದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣ ಇದ್ದಂತೆ. ಆ ಸ್ಫೂರ್ತಿಯಿಂದ ಈ ಎರಡು ಪಾತ್ರಗಳನ್ನು ಹೆಣೆಯಲಾಗಿದೆ’ ಎಂದಿದ್ದಾರೆ ಪಿ.ಸಿ. ಶೇಖರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.