ಕನ್ನಡದ 132ಕ್ಕೂ ಹೆಚ್ಚು ಸಿನಿಮಾಗಳ ಸೆನ್ಸಾರ್ (Censor) ಅನ್ನು ಸಿಬಿಎಫ್ಸಿ (CBFC) ಬಾಕಿ ಉಳಿಸಿಕೊಂಡಿದೆ. ಕನ್ನಡ ಸಿನಿಮಾಗಳ ಬಗ್ಗೆ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಸಿಬಿಎಫ್ಸಿ ತೋರಿಸುತ್ತಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಆರೋಪಿಸಿದ್ದಾರೆ. ಇಂದು (ಡಿಸೆಂಬರ್ 07) ಸಂಜೆ ಕರೆಯಲಾಗಿದ್ದ ತುರ್ತು ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಈ ನಿರ್ಲಕ್ಷ್ಯತೆಯ ಬಗ್ಗೆ ಈಗಾಗಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ದೂರು ನೀಡಲಾಗಿದೆ ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಸಿಬಿಎಫ್ಸಿಯ ಪ್ರಮುಖ ಅಧಿಕಾರಿಗೆ ಪತ್ರ ಮುಖೇನ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ ಆದರೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿಲ್ಲ. ಕೆಲವು ದಿನಗಳ ಹಿಂದಷ್ಟೆ ಸೆನ್ಸಾರ್ ಮಂಡಳಿಯ ಅಧಿಕಾರಿಯೊಬ್ಬರು ವಜಾ ಆಗಿದ್ದಾರೆ, ಆದರೆ ಈ ಹಿಂದೆ ಅಧಿಕಾರಿಗಳ ಸಂಖ್ಯೆ ಕಡಿಮೆಯಿದ್ದಾಗ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸಿನಿಮಾಗಳಿಗೆ ಸೆನ್ಸಾರ್ ನೀಡಲಾಗುತ್ತಿತ್ತು, ಆದರೆ ಈ ಬಾರಿ ಉದ್ದೇಶಪೂರ್ವಕವಾಗಿ ತಡ ಮಾಡಲಾಗುತ್ತಿದೆ ಎಂದಿದ್ದಾರೆ.
ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಸೆನ್ಸಾರ್ ಸಹ ಇನ್ನೂ ಆಗಿಲ್ಲ. ಹಲವು ದೊಡ್ಡ ಸಿನಿಮಾಗಳು, ಚಿಕ್ಕ ಸಿನಿಮಾಗಳು ಸೆನ್ಸಾರ್ ಮಂಡಳಿಯಲ್ಲಿ ಸಿಕ್ಕಿ ಕೊಂಡಿವೆ. ಹಲವಾರು ನಿರ್ಮಾಪಕರು ನಮಗೆ ಕರೆ ಮಾಡಿ ತಮ್ಮ ನೋವು ಹೇಳಿಕೊಳ್ಳುತ್ತಿದ್ದಾರೆ. ಬಿಡುಗಡೆ ತಡವಾದರೆ ನಿರ್ಮಾಪಕರಿಗೆ ನಷ್ಟ ಹೆಚ್ಚಾಗುತ್ತದೆ, ಪ್ರಶಸ್ತಿಗಳಿಗೆ, ಸಬ್ಸಿಡಿಗೆ ಸಹ ತಡವಾಗುತ್ತದೆ. ನಿರ್ಮಾಪಕರ ಹಿತ ಕಾಪಾಡುವ ದೃಷ್ಟಿಯಿಂದ ವಾಣಿಜ್ಯ ಮಂಡಳಿಯು ಈ ಸಮಸ್ಯೆಯ ವಿರುದ್ಧ ಕಾನೂನು ಹೋರಾಟ ಮಾಡಲಿದೆ ಎಂದಿದ್ದಾರೆ.
ಇದನ್ನೂ ಓದಿ:ಸಿನಿಮಾ ಪ್ರಮಾಣ ಪತ್ರಕ್ಕೆ 6.50 ಲಕ್ಷ: ಸಾಕ್ಷಿ ಸಮೇತ ಸಿಬಿಎಫ್ಸಿ ಅಧಿಕಾರಿಗಳ ವಿರುದ್ಧ ವಿಶಾಲ್ ಆರೋಪ
ಕನ್ನಡ ಸಿನಿಮಾಗಳಿಗೆ ಮೊದಲಿನಿಂದಲೂ ಸೆನ್ಸಾರ್ ಮಂಡಳಿಯಲ್ಲಿ ಅನ್ಯಾಯವಾಗುತ್ತಲೇ ಬಂದಿದೆ. ಇತ್ತೀಚೆಗೆ ಬಿಡುಗಡೆ ಆದ ‘ಅನಿಮಲ್’ ಸಿನಿಮಾ ಸಖತ್ ಕ್ರೂರವಾಗಿದೆ, ಸಾಕಷ್ಟು ಗ್ಲಾಮರಸ್ ಅಂಶಗಳೂ ಸಹ ಆ ಸಿನಿಮಾದಲ್ಲಿದೆ ಆ ಸಿನಿಮಾಕ್ಕೆ ಯಾವುದೇ ಕಟ್ಸ್ ಸೂಚಿಸಿಲ್ಲ, ಆದರೆ ಕನ್ನಡ ಸಿನಿಮಾಗಳಿಗೆ ಎ ಪ್ರಮಾಣ ಪತ್ರ ನೀಡುವ ಜೊತೆಗೆ ಹಲವು ಕಟ್ಸ್ಗಳನ್ನು ಸೂಚಿಸುತ್ತಾರೆ. ಇದನ್ನೆಲ್ಲ ತಡೆದುಕೊಂಡು ನಾವಿದ್ದೇವೆ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಸಿಬಿಎಫ್ಸಿ ಆಗಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವಾಗಲಿ ಸದಾ ಬಾಲಿವುಡ್ ಪಕ್ಷಪಾತಿ. ಇತ್ತೀಚೆಗೆ ನಡೆದ ಗೋವಾ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿಯೂ ಸಹ ಕನ್ನಡದ ಸಿನಿಮಾಗಳಿಗೆ, ಕನ್ನಡದ ನಟರು, ತಂತ್ರಜ್ಞರಿಗೆ ಅಪಮಾನ ಮಾಡಲಾಯ್ತು, ಬಾಲಿವುಡ್ ಸಿನಿಮಾಗಳಿಗೆ, ತಂತ್ರಜ್ಞರು, ನಟರಿಗೆ ಮಾತ್ರವೇ ಹೆಚ್ಚು ಗೌರವ ನೀಡಲಾಯ್ತು. ಹಾಗಿದ್ದರೂ ಸಹ ನಾವು ಮಾತನಾಡದೆ ಇದ್ದೆವು, ಆದರೆ ಈಗ ನಮ್ಮ ನಿರ್ಮಾಪಕರಿಗೆ, ನಮ್ಮ ಸಿನಿಮಾಗಳಿಗೆ ಸಮಸ್ಯೆ ನೀಡುತ್ತಿರುವುದರಿಂದ ಮಾತನಾಡಲೇ ಬೇಕಾಗಿದೆ. ನಾವು ಈ ಕುರಿತು ಪ್ರಧಾನಿ ಕಚೇರಿಗೂ ಪತ್ರ ಬರೆಯಲಿದ್ದೇವೆ ಎಂದರು. ಅಂದಹಾಗೆ ‘ಕಾಟೇರ’ ಸಿನಿಮಾವನ್ನು ಡಿಸೆಂಬರ್ 29ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 pm, Thu, 7 December 23