ಸಿನಿಮಾ ಪ್ರಮಾಣ ಪತ್ರಕ್ಕೆ 6.50 ಲಕ್ಷ: ಸಾಕ್ಷಿ ಸಮೇತ ಸಿಬಿಎಫ್ಸಿ ಅಧಿಕಾರಿಗಳ ವಿರುದ್ಧ ವಿಶಾಲ್ ಆರೋಪ
Vishal: ತಮ್ಮ ಹೊಸ ತಮಿಳು ಸಿನಿಮಾದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರವನ್ನು ಪಡೆಯಲು ಮುಂಬೈನ ಸಿಬಿಎಫ್ಸಿ ಅಧಿಕಾರಿಗಳು 6.50 ಲಕ್ಷ ಲಂಚ ಕೇಳಿ ಪಡೆದಿದ್ದಾರೆ ಎಂದು ನಟ ವಿಶಾಲ್ ಸಾಕ್ಷಿ ಸಮೇತ ಆರೋಪ ಮಾಡಿದ್ದಾರೆ.
ತಮಿಳು ನಟ ವಿಶಾಲ್ (Vishal), ಮುಂಬೈನ ಸಿಬಿಎಫ್ಸಿ (CBFC) ಅಧಿಕಾರಿಗಳ ವಿರುದ್ಧ ಲಂಚ ಸ್ವೀಕಾರದ ಗುರುತರ ಆರೋಪ ಮಾಡಿದ್ದಾರೆ. ವಿಶಾಲ್ ನಟನೆಯ ‘ಮಾರ್ಕ್ ಆಂಟೊನಿ’ ಸಿನಿಮಾ ಇತ್ತೀಚೆಗಷ್ಟೆ ತಮಿಳುನಾಡಿನಲ್ಲಿ ಬಿಡುಗಡೆ ಆಗಿ ಹಿಟ್ ಆಗಿದೆ. ಸಿನಿಮಾವನ್ನು ಪ್ರೇಕ್ಷಕರು, ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಯಶಸ್ಸಿನಿಂದ ಸ್ಪೂರ್ತಿಹೊಂದಿ, ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೇ ಕಾರಣಕ್ಕೆ ಪ್ರಮಾಣ ಪತ್ರಕ್ಕಾಗಿ ಮುಂಬೈನ ಸಿಬಿಎಫ್ಸಿ ಕಚೇರಿಗೆ ಕಳುಹಿಸಿದಾಗ ಅಲ್ಲಿನ ಅಧಿಕಾರಿಗಳು ಚಿತ್ರತಂಡದಿಂದ ಲಂಚ ಪಡೆದಿದ್ದಾರೆ. ಇದನ್ನು ವಿಶಾಲ್ ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶವನ್ನು ಪ್ರಕಟಿಸಿರುವ ನಟ ವಿಶಾಲ್, ‘ನಾವು ‘ಮಾರ್ಕ್ ಆಂಟೊನಿ’ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆಗೆ ಯತ್ನಿಸಿದೆವು. ಕೆಲವು ತಾಂತ್ರಿಕ ಕಾರಣಗಳಿಗಾಗಿ ತುಸು ತಡವಾಗಿ ಅಂದರೆ ಸೋಮವಾರ ನಾವು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದೆವು. ತುಸು ಬೇಗನೆ ಪ್ರಮಾಣ ಪತ್ರ ನೀಡಿ ಎಂದು ಮನವಿ ಮಾಡಿದೆವು. ಅದಕ್ಕೆ ಬದಲಾಗಿ ಅಲ್ಲಿನ ಅಧಿಕಾರಿಗಳು ನಮ್ಮ ಬಳಿ 6.50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟರು” ಎಂದಿದ್ದಾರೆ.
#Corruption being shown on silver screen is fine. But not in real life. Cant digest. Especially in govt offices. And even worse happening in #CBFC Mumbai office. Had to pay 6.5 lacs for my film #MarkAntonyHindi version. 2 transactions. 3 Lakhs for screening and 3.5 Lakhs for… pic.twitter.com/3pc2RzKF6l
— Vishal (@VishalKOfficial) September 28, 2023
”ಒಂದೇ ದಿನದಲ್ಲಿ ಸಿನಿಮಾದ ಪ್ರಮಾಣ ಪತ್ರ ನೀಡಬೇಕೆಂದರೆ 6.50 ಲಕ್ಷ ಹಣ ನೀಡಬೇಕು ಎಂದು ಸಿಬಿಎಫ್ಸಿ ಅಧಿಕಾರಿ ಮೇನಕ ಎಂಬುವರು ಹೇಳಿದರು. ನಾವು ಬೇರೆ ಆಪ್ಷನ್ ಇಲ್ಲದೆ ಹಣ ನೀಡಬೇಕಾಯಿತು. ನಮ್ಮ ಸಿನಿಮಾವನ್ನು ಅಧಿಕಾರಿಗಳು ನೋಡಲು ಮೂರು ಲಕ್ಷ, ಪ್ರಮಾಣ ಪತ್ರ ನೀಡಲು 3.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟರು. ನಮ್ಮ ತಂಡದ ವ್ಯಕ್ತಿ ಅವರ ಬೇಡಿಕೆಯಂತೆ ಹಣವನ್ನು ಅವರು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು. ಆ ಬಳಿಕವೇ ನಮಗೆ ಪ್ರಮಾಣ ಪತ್ರ ಸಿಕ್ಕಿತು” ಎಂದಿರುವ ವಿಶಾಲ್, ತಾವು ಹಣ ಕಳಿಸಿದ ಎರಡು ಬ್ಯಾಂಕ್ ಖಾತೆಗಳ ವಿವರವನ್ನೂ ಸಹ ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ:ಧಾರ್ಮಿಕ ಭಾವನೆಗಳಿಗೆ ಧಕ್ಕೆ: ‘ಯಾರಿಯಾ 2’ಸಿನಿಮಾದ ವಿರುದ್ಧ ದೂರು
”ತಡವಾಗಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ 6.50 ಲಕ್ಷ ಹಣ ನೀಡಬೇಕಾಗುತ್ತದೆ. 15 ದಿನಕ್ಕೆ ಮುಂಚೆ ಸಲ್ಲಿಸಿದ್ದರೆ 4 ಲಕ್ಷದಲ್ಲಿ ಕೆಲಸ ಮುಗಿದು ಹೋಗುತ್ತಿತ್ತು’ ಎಂದು ಆ ಅಧಿಕಾರಿ ನಮಗೆ ಹೇಳಿದರು. ಅವರೊಟ್ಟಿಗೆ ಮಾತನಾಡಿದ ಸಂಭಾಷಣೆಯ ರೆಕಾರ್ಡ್ ಸಹ ನಮ್ಮ ಬಳಿ ಇದೆ. ನನ್ನಂಥಹಾ ಜನಪ್ರಿಯ ನಟನ ಸಿನಿಮಾಕ್ಕೆ ಹೀಗಾಗುತ್ತದೆ ಎಂದಾದರೆ ಸಣ್ಣ-ಪುಟ್ಟ ಸಿನಿಮಾಗಳ ಕತೆ ಏನು? ನನ್ನ ವೃತ್ತಿ ಜೀವನದಲ್ಲಿಯೇ ನಾನು ಇದೇ ಮೊದಲ ಬಾರಿಗೆ ಇಂಥಹಾ ಪರಿಸ್ಥಿತಿ ಎದುರಿಸುತ್ತಿದ್ದೇನೆ” ಎಂದಿದ್ದಾರೆ ವಿಶಾಲ್.
”ಮಹಾರಾಷ್ಟ್ರ ಸಿಎಂ ಹಾಗೂ ಪ್ರಧಾನ ಮಂತ್ರಿಗಳಾದ ಮೋದಿಯವರು ದಯವಿಟ್ಟು ಈ ವಿಷಯದ ಕಡೆಗೆ ಗಮನ ಹರಿಸಬೇಕು. ಸಿನಿಮಾದಲ್ಲಿ ಭ್ರಷ್ಟಾಚಾರ ತೋರಿಸುವುದು ಓಕೆ, ಆದರೆ ನಿಜ ಜೀವನದಲ್ಲಿ ಸಿನಿಮಾದವರಿಗೆ ಭ್ರಷ್ಟಾಚಾರ ಎದುರಾದರೆ ಹೇಗೆ?” ಎಂದು ಪ್ರಶ್ನೆ ಮಾಡಿರುವ ವಿಶಾಲ್, ”ಈ ಘಟನೆ ಬಗ್ಗೆ ಸೂಕ್ತ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದು ನಂಬಿದ್ದೇನೆ. ನನ್ನ ಬಳಿ ಸಾಕ್ಷ್ಯಗಳಿದ್ದು ಅವುಗಳನ್ನು ನೀಡಲು ನಾನು ಸಿದ್ಧನಾಗಿದ್ದೇನೆ” ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Thu, 28 September 23